Monday, July 8, 2013

ಅಕ್ಕಪಕ್ಕದವರೊಂದಿಗೆ ಇರಲಿ ಅಕ್ಕರೆ -- someಬಂಧ !
ಘಟನೆ ೧:
-------
ಗಂಡ ಕೆಲಸದ ನಿಮಿತ್ತ ಹೊರ ಊರಿಗೆ ಹೋಗಿದ್ದಾನೆ . ಮನೆಯಲ್ಲಿ ಹೆಂಡತಿಯೊಬ್ಬಳೇ, ಸಿಕ್ಕಾಪಟ್ಟೆ ಜ್ವರ ಬಂದಿದೆ , ಮೈ ಕೆಂಡದಂತೆ ಸುಡುತ್ತಿದೆ. ಫೋನು ಮಾಡಿದರೂ ಅವನು ಬರುವುದಕ್ಕೆ ಒಂದಿಡೀ ದಿನ ಹಿಡಿಯುತ್ತದೆ. ಇವಳೇ ಎದ್ದು ಡಾಕ್ಟರ್ ಹತ್ತಿರ ಹೋಗುವಷ್ಟು ಶಕ್ತಿ ಇಲ್ಲ. ಹೊಸ ಮನೆಗೆ  ಬಂದು ವರ್ಷವಾದರೂ ಅಕ್ಕಪಕ್ಕದವರ ಪರಿಚಯವಿಲ್ಲ. ಗಂಡ ಆಫೀಸಿಗೆ ಹೋದೊಡನೆ ಮನೆ, ಟೀವಿ , ಅಡುಗೆಮನೆ ಇಷ್ಟರಲ್ಲೇ  ಸಮಯ ಕಳೆಯುತ್ತಿದ್ದಳು ವಾಪಾಸು ಬರುವವರೆಗೂ. ಈಗ ಏಕಾಏಕಿ ಎದುರು ಮನೆಯವರನ್ನು ಕೇಳಲು ಮುಜುಗರ. ಪಕ್ಕದವರಿಗೂ ಅಷ್ಟೇ , ಎದುರುರು ಮನೆಯಲ್ಲಿ ಯಾರಿದ್ದಾರೆ , ಏನು ಮಾಡುತ್ತಿದ್ದಾರೆ ಎನ್ನುವ ಉಸಾಬರಿ ಬೇಕಿಲ್ಲ. ಪರಿಣಾಮ ಒಂದು ಮಾತ್ರೆಯನ್ನೂ ಕೂಡಾ ತೆಗೆದುಕೊಳ್ಳಲಾಗದೆ , ಇಡೀ ದಿನ , ಗಂಡ ಬರುವವರೆಗೆ ನರಕಯಾತನೆ ಅನುಭವಿಸುವಂತಾಯಿತು !

ಘಟನೆ ೨: 
-------
 ಮಗ ನಗರದಲ್ಲಿ ದೊಡ್ಡ ಕೆಲಸದಲ್ಲಿದ್ದಾನೆ. ಒಳ್ಳೆ ಮನೆ , ಕೈ ತುಂಬಾ ಸಂಬಳ, ಕಾರು. ಒಂದು ತಿಂಗಳು ಮಗನ ಮನೆಯಲ್ಲಿ, ನಗರದಲ್ಲಿ ಖುಷಿಯಾಗಿದ್ದು ಬರೋಣವೆಂದು ಅಪ್ಪ ಅಮ್ಮ ಬಂದಿದ್ದಾರೆ. ವಾರಾಂತ್ಯ ಇದ್ದಿದ್ದರಿಂದ ಮಗ ಕೂಡ ಪೇಟೆಯನ್ನೆಲ್ಲಾ ಕಾರಿನಲ್ಲಿ ಸುತ್ತಿಸಿದ್ದಾನೆ. ಮಾಲ್, ಉದ್ಯಾನವನ ತೋರಿಸಿದ್ದಾನೆ. ಬೇಕಿದ್ದನ್ನೆಲ್ಲಾ ಕೊಡಿಸಿದ್ದಾನೆ. ಅಪ್ಪ ಅಮ್ಮನಿಗೆ ಖುಷಿಯೋ ಖುಷಿ. ಸೋಮವಾರ, ಟಿವಿ ಹಾಕಿ ಕೂರಿಸಿ ಮಗ ಸೊಸೆಯರಿಬ್ಬರೂ ಯಥಾ ಪ್ರಕಾರ ಕೆಲಸಕ್ಕೆ ಹೋಗಿದ್ದಾರೆ. ಹಳ್ಳಿಯಲ್ಲಿದ್ದವರಿಗೆ , ಮನೆ ಕೆಲಸ ಎಲ್ಲಾ ಮುಗಿದ ಮೇಲೆ , ಪಕ್ಕದವರೊಂದಿಗೆ ಕಷ್ಟ ಸುಖ ಹಂಚಿಕೊಳ್ಳುವುದು ವಾಡಿಕೆ. ಟೀವಿ ಬೇಸರ ಬಂದು , ಹೊರಬಂದು ನೋಡಿದರೆ , ಅಕ್ಕಪಕ್ಕದ ಮನೆಯೆಲ್ಲಾ ಬಾಗಿಲು ಹಾಕಿದೆ. ಎದುರಿಗೆ  ಬಂದ ಒಂದಿಬ್ಬರು ನೋಡಿಯೂ ನೋಡದಂತೆ ಮನೆಗೆ ಹೋಗಿ ಬಾಗಿಲು ಹಾಕಿಕೊಂಡರು. ಆ ದಿನ ಹಾಗೋ ಹೀಗೋ ಕಳೆದರು. ಮರುದಿನವೂ ಅದೇ ಹಾಡು. ಮಾರನೇ ದಿನ ಅವರಿರಲಿಲ್ಲ , ಇಲ್ಲಿ ಸಮಯ ಕಳೆಯಲಿಕ್ಕಾಗದು ಎಂದು ಮಗನ ಹತ್ತಿರ ತಗಾದೆ ತೆಗೆದು ಊರಿಗೆ ಹೋಗಿಯಾಗಿತ್ತು. 

ಯಾಕೆ ನಗರಗಳಲ್ಲಿ ಈ ರೀತಿ ಆಗುತ್ತಿದೆ. ಯಾಕೆ ಒಬ್ಬರಿಗೊಬ್ಬರು ಸಂಬಂಧವಿಲ್ಲದಂತೆ ಬದುಕುತ್ತಿದ್ದಾರೆ. ಒಂದೇ ಕಟ್ಟಡದಲ್ಲಿದ್ದರೂ , ಎದುರು ಬದುರಾದರೂ ಯಾಕೆ ಒಬ್ಬರಿಗೊಬ್ಬರು, ನೋಡಿಯೂ ನೋಡದಂತೆ ಹಾದು ಹೋಗುತ್ತಾರೆ. ಕಾರಣಗಳು ಹಲವಾರು , ಇದಕ್ಕೆ ಮುಖ್ಯ ಮೊದಲ ಕಾರಣ :

* ಸಂಕುಚಿತವಾಗುತ್ತಿರುವ ಮನಸ್ಥಿತಿ. ನಾನು ನನ್ನದಷ್ಟೇ ನೋಡಿಕೊಂಡರೆ ಸಾಕು , ಬೇರೆಯವರು ಯಾರಾದರೇನು , ಏನಾದರೇನು ಎನ್ನುವ ಸ್ವಾರ್ಥ. ಕಡಿಮೆಯಾಗುತ್ತಿರುವ ಮಾನವೀಯತೆ, ಹೊಂದಾಣಿಕೆ. ಅಕ್ಕಪಕ್ಕದವರು ನಮ್ಮವರೆಂದು ಅಂದುಕೊಳ್ಳದಿರಿವುದು. ಮಾತನಾಡಿಸಿದರೆ ನಮ್ಮ ಬುಡಕ್ಕೇ ಬಂದರೆ ಕಷ್ಟ ಎನ್ನುವ ಭಾವನೆ.

ನಂತರದ ಕಾರಣಗಳನ್ನು ಪಟ್ಟಿ ಮಾಡುವುದಾದರೆ ,

* ನಗರದಲ್ಲಿ ಬದಲಾಗುತ್ತಿರುವ ಜೀವನ ಶೈಲಿ: ಹಳ್ಳಿ ನಗರವಾಗಿ ಬದಲಾದಂತೆ, ಬೆಳೆದಂತೆ, ಜೀವನ ಶೈಲಿಯೂ ಬದಲಾಗುತ್ತಿದೆ. ನಮ್ಮ ಜೊತೆ ಓದಿದ ಗೆಳೆಯರು, ಆಫೀಸಿನ ಸಹೋದ್ಯೋಗಿಗಳು , ಹೀಗೆ 
----------------------------------
ಬೆರಳೆಣಿಕೆಯ ಸಮಾನ ಸ್ಥರದ ಅಥವಾ ಸ್ವಲ್ಪ ಮೇಲ್ಮಟ್ಟದವರನ್ನು ಪರಿಚಿತರನ್ನಾಗಿಸಿಕೊಳ್ಳುತ್ತೇವೆ. ಮತ್ತು ಅವು ಹಾಯ್ , ಬಾಯ್ ಗಷ್ಟೇ ಸೀಮಿತವಾಗಿರುತ್ತದೆ. ಕುಂತಲ್ಲೇ ಕುರುಕ್ಷೇತ್ರ ತೋರಿಸುವ ಟೀವಿ ಚಾನಲ್ ಗಳು, ಮೊಬೈಲ್, ಅಂತರ್ಜಾಲ , ಜಾಲತಾಣ, ಸಾಮಾಜಿಕ ಜಾಲತಾಣಗಳ ಮೇಲೆ ಅವಲಂಬನೆ ಜಾಸ್ತಿಯಾಗಿದೆ. ನಮ್ಮ ಮನೆಯ ಹೊರಗೆ ಸುರಿಯುವ ಮಳೆಯನ್ನು ಒಳಗೆ ಕುಳಿತು ಟೀವಿಯಲ್ಲಿ ನೋಡಿ ಖುಷಿ ಪಡುತ್ತೇವೆ. ಅಕ್ಕಪಕ್ಕದವರಿಗಿಂತ ಪರದೆ ಆಚೆ ಇರುವವರು ಹೆಚ್ಚು ಆಪ್ತರಾಗುತ್ತಾರೆ.

*ಸಮಯದ ಅಭಾವ : 
----------------
ವೇಗವಾಗಿ ಬೆಳೆಯುವ ನಗರದಲ್ಲಿ ಸಮಯವೂ ತುಂಬಾ ವೇಗವಾಗಿ ಓಡುತ್ತದೆ, ಜೊತೆಗೆ ಇಲ್ಲಿನ ಖರ್ಚುವೆಚ್ಚಗಳೂ. ಒಂದಿಷ್ಟು ಜನರಿಗೆ , ಜೀವನ ಮಾಡಬೇಕೆಂದರೆ ದಿನ ಪೂರ್ತಿ ದುಡಿಯಬೇಕು. ತಮ್ಮನ್ನು , ತಮ್ಮ ಸಂಸಾರವನ್ನೇ ನೋಡಲು ಸಮಯವಿಲ್ಲದಷ್ಟು ಕೆಲಸ. ಇನ್ನೆಲ್ಲಿ ಪಕ್ಕದ ಮನೆಯವರನ್ನು ಮಾತನಾಡಿಸಿಯಾರು. ಮತ್ತಷ್ಟು ಜನರಿಗೆ ದುಡ್ಡೇ ದೊಡ್ಡಪ್ಪ, ಜೀವನ. ಕಾಯಕವೇ ಕೈ "ಕಾಸು". ಬೇರೆಲ್ಲವೂ ಅಮುಖ್ಯ. 

* ಹುಟ್ಟಿದ್ದೆಲ್ಲೋ.. ಬದುಕುವುದೆಲ್ಲೋ.. ಬದುಕುವುದೆಲ್ಲೆಲ್ಲೋ...
----------------------------------------------
ನಗರದಲ್ಲಿ ಸುಮಾರು ಮುಕ್ಕಾಲು ಪಾಲು ಜನ ವಲಸಿಗರೇ, ಅಲ್ಲೊಬ್ಬರು ಇಲ್ಲೊಬ್ಬರು ಮೂಲ ನಿವಾಸಿಗಳಷ್ಟೇ. ಹುಟ್ಟಿದ ನೆಲದಲ್ಲಾದರೆ ಮಣ್ಣಿನೊಂದಿಗೆ, ಜನರೊಂದಿಗೆ ನಂಟು ಅಂಟಿಕೊಂಡೇ ಇರುತ್ತದೆ. ಮಾತು ಕಲಿತಾಗಿನಿಂದಲೂ ಮಾತನಾಡಿ ಅಭ್ಯಾಸವಿರುತ್ತದೆ. ಕೊನೇ ಪಕ್ಷ ಒಂಡೆರಡು ವರ್ಷ ಒಂದೇ ಕಡೆಯಿದ್ದರೆ ಮುಗುಳ್ನಗುವಷ್ಟು ಸಂಬಂಧವಾದರೂ ಇರುತ್ತದೆ. ಆದರೆ ಇಲ್ಲಿ ಹಾಗಲ್ಲ , ಕೆಲಸದ ಜಾಗ ಬದಲಾದಂತೆ ವಾಸಸ್ಥಳವೂ ಬದಲಾಗುತ್ತಿರುತ್ತದೆ. ಪಕ್ಕದಲ್ಲಿ ಇಂದಿದ್ದವರು ನಾಳೆಯಿರುತ್ತರೆಂಬ ಖಾತ್ರಿಯಿಲ್ಲ. ಬೆಳಗ್ಗೆ ನೋಡಿದರೆ ದೊಡ್ಡದೊಂದು ಲಾರಿ ಬಂದು ಲಗೇಜ್ ತುಂಬಿಸುತ್ತಿರುತ್ತದೆ. ಮರುದಿನ ಮತ್ಯಾರೋ ಬರುತ್ತಾರೆ. ಹೀಗಿದ್ದಾಗ ಪರಿಚಯವಾದರೂ ಹೇಗಾದೀತು. ಮಾಡಿಕೊಳ್ಳೂವ ಜರೂರತ್ತು ನಮಗೇಕೆ ಬೇಕು ಎಂದು ಸುಮ್ಮನಾಗುತ್ತಾರೆ.

*ಭಾಷೆಯ ಸಮಸ್ಯೆ: 
------------------
ಆಯಾ ನಗರಕ್ಕೆ ಅದಕ್ಕೊಂದು ಮೂಲಭಾಷೆಯಿದ್ದರೂ, ಯಾವ್ಯಾವುದೋ ಊರಿನಿಂದ , ರಾಜ್ಯದಿಂದ , ರಾಷ್ಟ್ರದಿಂದ ಜನಬಂದು ಅದೊಂದು ಭಾಷ್ಯಾತೀತ ಜಾಗವಗಿಬಿಟ್ಟಿರುತ್ತದೆ ( ವಿಶೇಷವಾಗಿ ಬೆಂಗಳೂರು). ಇರೋ ನಾಲ್ಕು ಮನೆಗೂ ನಾಲ್ಕು ಭಾಷೆಯ ಜನರಿರುತ್ತಾರೆ. ಅಪಾರ್ಥವಾದರೆ ಕಷ್ಟವೆಂದು ತುಂಬಾ ಜನ ತಾವಾಯ್ತು ತಮ್ಮ ಪಾಡಾಯ್ತು ಎಂದು ಸುಮ್ಮನಿರುತ್ತಾರೆ. 

ವಸುಧೈವ ಕುಟುಂಬಕಂ , ಮನುಜಮತ ವಿಶ್ವಪಥ , ಮನುಜಕುಲಂ ತಾನೊಂದೇ ವಲಂ ಶಬ್ದಗಳೆಲ್ಲಾ ಅರ್ಥ ಕಳೆದುಕೊಂಡಿದೆ.

ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ ! ಖಂಡಿತಾ ಇದೆ !

* ನಾವು ಒಳಮುಖರಾಗದೇ ಸ್ವಲ್ಪ ಹೊರಮುಖವಾಗಬೇಕು

* ಆ ಕಟ್ಟಡಕ್ಕೆ ನಾವು ಹೊಸದಾಗಿ ಹೋಗಿ ಸೇರಿದವರಾದರೆ, ನಾವೇ ಹೋಗಿ ಪರಿಚಯಿಸಿಕೊಳ್ಳಬೇಕು. ಇದರ ಅರ್ಥ ಮನೆಗೆ ಕರೆತಂದು ತಿಂಡಿತಿನಿಸು ಕೊಟ್ಟು ಸತ್ಕರಿಸಬೇಕೆಂದೇನೂ ಇಲ್ಲ, ಸತ್ಕರಿಸಿದರೂ ತಪ್ಪೇನಿಲ್ಲ. ಅಥವಾ ದಿನಾ ಮನೆಗೆ ಕರೆತಂದು ಮಾತನಾಡಿಸುತ್ತಾ ಕೂರಬೇಂದೇನೂ ಇಲ್ಲ. ಪಕ್ಕದಲ್ಲಿರುವವರ ಹೆಸರು , ಊರು ತಿಳಿದುಕೊಂಡಿದ್ದರೂ ಸಾಕು. 

* ಭಾಷೆಗಿಂತ ಭಾವ ಮುಖ್ಯ, ಮಾತನಾಡುವ ಮನಸ್ಸಿರಬೆಕಷ್ಟೇ ಅರ್ಥಮಾಡಿಕೊಳ್ಳಬಹುದು. ಮತ್ತೊಂದು ಒಳ್ಳೆ ಉಪಾಯವೆಂದರೆ ಅಲ್ಲಿಯ ಮೂಲಭಾಷೆಯನ್ನು ಕಲುಯುವಂತೆ ಪ್ರೇರೇಪಿಸಬೇಕು ಹಾಗು ನಾವು ಕಲಿಯಬೇಕು ಮತ್ತು ಮಾತನಾಡಬೇಕು. ಭಾಷೆ ಉಳಿಸಿದಂತೆಯೂ ಆಗುತ್ತದೆ.

* ಅಕ್ಕಪಕ್ಕದವರಿಗೂ ಸಮಯದ ಅಭಾವವೇ , ಗಂಟೆಗಟ್ಟಲೆ ಮಾತನಾಡಿಸಬೇಕೆಂದೇನೂ ಇಲ್ಲ. ಎದುರಿಗೆ ಸಿಕ್ಕರೂ ನೋಡದಂತೆ ಹಾಗೇ ಹಾದು ಹೊಗದಿದ್ದರೆ ಸಾಕು. ಒಂದು ಕುಶಲೋಪರಿ , ಒಂದು ಹಾಯ್ ಕೂಡ ಆತ್ಮೀಯವಾಗಿ ಆಡಿದರೆ ಸಾಕು.

ನೆನಪಿಡಿ:
    ಒಂದು ಕಿರುನಗು ಕೂಡಾ ಪರಿಚಯಕ್ಕೆ ನಾಂದಿಯಾಗಬಲ್ಲದು. ಆ ಪರಿಚಯ ಆಪತ್ಕಾಲಕ್ಕೆ ನೆರವಾಗಬಹುದು. ಆತ್ಮಸುಖಕ್ಕೆ ಕಾರಣವಾಗಬಹುದು, ಕಷ್ಟಸುಖಕ್ಕೆ ಕಿವಿಯಾಗಬಹುದು. 

ಇನ್ನೇಕೆ ತಡ, ಬಾಗಿಲು ತೆಗೆದು ನೋಡಿ , ಪಕ್ಕದ ಮನೆಯವರೂ ಬಾಗಿಲು ತೆಗೆದಿರಬಹುದು ... ಮಾತನಾಡಲು !! 

7 comments:

ಸಿಮೆಂಟು ಮರಳಿನ ಮಧ್ಯೆ said...

ಕಣ್ ತೆರೆಸುವ ಲೇಖನ...

ಮನುಷ್ಯ..
ವಿಜ್ಞಾನ ಬೆಳೆದಂತೆ .. "ನಂಬಿಕೆ" ಎನ್ನುವ ಶಬ್ಧ ಅರ್ಥ ಕಳೆದುಕೊಂಡಿದೆ..

ಇದು ಮೂಲ ಕಾರಣ ಎನ್ನುವದು ನನ್ನ ಭಾವನೆ..

ಸಕಾಲಿಕ ಲೇಖನಕ್ಕಾಗಿ ಅಭಿನಂದನೆಗಳು...

Kusuma Prathap said...

Hi Praveen, Nimma anisikegalannu chennaagi, sahajavaagi hanchi kondiddeera. Yochane maduvante maduttade....aadare neevey kandu kondanthe officenalli kattegala thara dudidu .....onderadu nimisha summaniddare sakappa anniso kela mandige....neevu helida haage bereyavaranna matadisabekoo annisidroo .....chance illa! Yakandre avru manege baro velege pakkad maneyavru oot madi malagalu mundaagtirtaare. Anyway, haagilla davaru khanditha swalpa t.v huchu bittu socialize madikollodaralli todagidare khanditha naavu baduko parisara inno "manaveeya " hagoo sundaravaagirutte. Lekhana chennaagide. keep it up. :)

Kusuma

ಸತೀಶ್ ನಾಯ್ಕ್ said...

ಪ್ರವೀಣ ಸಕಾಲಿಕ ಲೇಖನ..

ಸಂಘ ಜೀವಿ ಅಂದ್ರೆ ಸಂಘ ಕಟ್ಕೊಂಡು ಹೋರಾಟ ಮಾಡೋದಷ್ಟೆ ಅನ್ನೋ ಅಪಬ್ರಂಶ ಬರೋ ಮೊದಲು ಜಗತ್ತು ಅದರ ನಿಜವಾದ ಅರ್ಥವನ್ನ ತಿಳಿದುಕೊಳ್ಳಬೇಕಿದೆ. ಹಳ್ಳಿಗಳೂ ಹೀಗೆ ನಿಧಾನಕ್ಕೆ ಬದಲಾಗ್ತಾ ಇರೋದು ಕೂಡ ನೋವಿನ ವಿಚಾರ.. :(

sunaath said...

ಒಂದು ಸಮಸ್ಯೆಯನ್ನು ಹಾಗು ಅದರ ಕಾರಣಗಳನ್ನು ಸಮರ್ಥವಾಗಿ ವಿಶ್ಲೇಷಿಸಿದ್ದೀರಿ. ಪರಿಹಾರವೂ ಸಹ ಸಮರ್ಪಕವಾಗಿದೆ, ಆದರೆ ಮನಸ್ಸು ಬೇಕಷ್ಟೆ!

ಕಾವ್ಯಾ ಕಾಶ್ಯಪ್ said...

Good one Pravi.... maatadisidaroo maatadada janariddaare namma naduve...
idu nijakkoo novina vichara.... ellarodane bereyuva manassu illavaaguttide janaralli... :(

Badarinath Palavalli said...

ಇಲ್ಲಿ ನೀವು ಬರೆದದ್ದೆಲ್ಲಾ ಕಟು ಸತ್ಯಗಳೇ ಸಾರ್, ನಗರಗಳಲ್ಲಿ ಬದುಕು ದ್ವೀಪಗಳಾಗುತ್ತಿವೆ. ಮನುಷ್ಯ ಮತ್ತು ಮನುಷ್ಯನ ಮದ್ಯೆ ಸಾವಿರ ಸಂವಾಹನಗಳು ಬರಲಿ ಆದರೆ ಮಾತೇ ನಿಜವಾದ ಸಂವಹನ ಕ್ರಿಯೆ. ಮಾತು ಮುತ್ತಿನಷ್ಟೇ ಬೆಲೆ ಇಲ್ಲಿ. ನಕ್ಕರೆ ಸಹಾಯಕ್ಕೆ ಕೈ ಚಾಚುವರೋ ಎಂಬ ಭಯ ಬೇರೆ.

http://badari-poems.blogspot.in

bilimugilu said...

hi Praveen,
lekhana chennaagide.......Ishtavaaythu... vaasthavavidu.... parihaaragaLu sooktavaagive, anivaaryathe - jeevanashaili elladara sammishraNa indina pyaaTe jeevana.....
Roopa