Friday, May 14, 2010

ತೊಲಗಿ ನೆನಪುಗಳೇತೊಲಗಿ ನೆನಪುಗಳೇ

ಬದುಕಬೇಕಿದೆ ನಾನು


ಬೇಡ ಬೇಡವೆಂದರೂ

ಅಲೆ ಅಲೆಯಾಗಿ

ಎಳೆ ಎಳೆಯಾಗಿ ಕಣ್ಮುಂದೆ ಬರುವಿರೇಕೆ?

ಹೃದಯವ ಹಿಂಡಿ

ಮನವನು ಕಲಕಿ

ಬೆಂಬಿಡದ ಭೂತವಾಗಿ ಕಾಡುವಿರೇಕೆ?


ಮನಸ ಕೆರೆಯಲ್ಲಿ

ನೆನಪುಗಳೇ..ತಳ ಸೇರಿ

ಕಮಲವಿಲ್ಲದ ಮೇಲೆ

ಕೆಸರಿನ್ಯಾಕೆ?

ಬೇರುಗಳೂ ಸತ್ತಿವೆ

ಚಿಗುರುವಾಸೆ ಉಳಿದಿಲ್ಲ

ಸ್ವಚ್ಛವಾಗಬೇಕಿದೆ ನಾನು

ಅದಾಗದಿದ್ದರೂ..

ಸ್ವಚ್ಛವಾದಂತೆ ತೋರಿಸಬೇಕು ಜಗಕೆ..


ಕಲ್ಲು ಹೊಡೆದು ಕಲಕದಿರಿ

ಹಳಯದೆಲ್ಲವ ಕೆಣಕದಿರಿ

ಆಗ ಕೆಸರಿತ್ತು ನಿಜ..

ಆದರೆ ಜೊತೆ ಕಮಲವೂ ಇತ್ತು..


ತೊಲಗಿ ನೆನಪುಗಳೇ

ಪ್ರೀತಿ ಬದುಕಲಿಲ್ಲ

ಬದುಕ ಪ್ರೀತಿಸಬೇಕಿದೆ


ಪ್ರೀತಿಯಿಂದ ಪ್ರವಿ

Sunday, May 9, 2010

ಮಾತೃ ದೇವೋ ಭವ


ಅಮ್ಮ ಅನ್ನೋ ಪದ ಶಬ್ದಕ್ಕೆ ನಿಲುಕದ್ದು .. ಎರಡುವರೆ ಅಕ್ಷರದಲ್ಲಿ ಸಾವಿರ ಅರ್ಥವನ್ನು , ಸಾವಿರ ಭಾವವನ್ನು ಸೂಚಿಸುತ್ತೆ.

ಅಮ್ಮಂದಿರ ದಿನಾಚರಣೆಯ ಸಂದರ್ಭದಲ್ಲಿ ಈ ಕವನದ ಮೂಲಕ ಅಮ್ಮನಿಗೊಂದು ನಮನ
ಅಮ್ಮ....


ಅಮೃತದ ಕಡಲು,ಆ ನಿನ್ನ ಒಡಲು
ದುಃಖವನು ಮರೆಸಲು ಆ ನಿನ್ನ ಮಡಿಲು
ಬೇರೇನು ಬೇಕಿದೆ ನೀ ಜೊತೆಯಿರಲು
ಅಮ್ಮ,ನೀ ಆ ದೇವತೆಗಿಂತ ಮಿಗಿಲು

ಹೆತ್ತು ಹೊತ್ತು ಸಾಕಿ ಸಲಹಿ
ನಿತ್ಯ ನಿರಂತರ ಪ್ರೀತಿ ಎರೆದೆ
ಸಾವಿರಾರು ಕಷ್ಟದಲ್ಲಿ
ನೋವನುಂಡು ನಲಿವ ನೀಡಿದೆ

ಲಲ್ಲೆಗರೆದು ಮುದ್ದು ಮಾಡಿ
ಮೆಲ್ಲ ಮೆಲ್ಲನೆ ಮಾತ ಕಲಿಸಿದೆ
ಎದ್ದು ಬಿದ್ದು ಎಡವುತಿರಲು
ತಿದ್ದಿತೀಡಿ ನನ್ನನೆಡೆಸಿದೆ
ಬೆಳಕ ಬೀರಿ ದಾರಿ ತೋರಿ
ಬುದ್ದಿ ಹೇಳಿ ಬದುಕ ತಿಳಿಸಿದೆ

ಅಮ್ಮ ನೀನು ಶಬ್ದಾತೀತ
ನಿನ್ನ ಅರ್ಥ ಅನಂತ
ಅಮ್ಮ ನೀನು ಕಾಲಾತೀತ
ನಿನ್ನ ಮಮತೆ ಅನವರತ

ಅಮ್ಮ,ನೀನಿರದಿರೆ
ನನಗೆಲ್ಲಿಯ ಅಸ್ತಿತ್ವ
ನಮಿಪೆ ತಾಯೇ ನಿನಗೆ
ಮಾತೃ ದೇವೋ ಭವ

ಅಮ್ಮ,ನೀ ಪ್ರೀತಿ ತುಂಬಿದ ಕವಿತೆ
ನೀತಿ ತುಂಬಿದ ಕಥೆ
ಬದುಕು ಕಲಿಸಿದ ದೇವತೆ
ನಮಸ್ತೆ ನಮಸ್ತೆ ನಮಸ್ತೆ
ಒಲವಿನೊರತೆ ಓ ಜನ್ಮದಾತೆ

ಪ್ರೀತಿಯಿಂದ ಪ್ರವಿTuesday, May 4, 2010

ಕುಡುಕನ ಕುಟುಂಬ
ಮನೆಯಲ್ಲಿ

ಹೆಂಡತಿ ದುಡಿದ ದುಗ್ಗಾಣಿ

ಗಂಡನ ಕೈಯಲ್ಲಿ

ದಿನಸಿಯ ನೆಪದಲ್ಲಿ

ಎರಡು ದಿನದಿಂದ ಅಡುಗೆ ಕಾಣದ

ಪಾತ್ರೆಗಳೂ ಪತರಗುಟ್ಟುತ್ತಿವೆ

ಹಸಿವಿನಿಂದ..

ಮಕ್ಕಳ ಲೆಖ್ಖದಲ್ಲಿ

ಇದು ಶ್ರೀಮಂತ ಕುಟುಂಬ

ಕತ್ತಲೆಯ ಬೆತ್ತಲೆಯಲ್ಲಿ

ಎಂಟೋ ,ಹತ್ತೋ..

ಸತ್ತವು ಬಿಟ್ಟು.

ಜೋತುಬಿದ್ದ ಮೊಲೆಯಲ್ಲಿ

ರಕ್ತ ಹೀರುತ್ತಿದೆ ಕಂದಮ್ಮ

ದೇಹ ಕಟ್ಟಿಗೆ ಗೂಡು

ಕಾಯುತ್ತಿದ್ದಾಳೆ..

ಅಷ್ಟೇ ಅವಳ ಕೆಲಸ

ಕುಡುಕನಿಗಾಗಿ

ಕಟ್ಟಿಕೊಂಡ ಕರ್ಮಕ್ಕಾಗಿ..


ದಾರಿಯಲ್ಲಿ.


ಕರಾಳ ರಾತ್ರಿಯ ನಡುವೆ

ಕುಡುಕ ಮತ್ತು ಕರಿಕುನ್ನಿ

ಕತ್ತಲೆಯೇ ಬೆದರುವಂತೆ

ಕುನ್ನಿ ಮೂಸಿದ್ದೇ ದಾರಿ ಕುಡುಕನಿಗೆ

ಉದ್ದವಿದ್ದಷ್ಟು ಅಗಲವಿಲ್ಲ

ದಿನಸಿ..?

ದೈನೇಸಿ..!!

ಎಲ್ಲಾ ಹೊಟ್ಟೆಲಿದ್ದ ಪರಮಾತ್ಮನಾಟ

ಬಾಯಲ್ಲಿ ಭಗವದ್ಗೀತೆ

ಕೇಳಲು ಕಿವಿ ಬೇಕೆ?

ಕುನ್ನಿಯೇ ಅರ್ಜುನ.

ಕೃತಜ್ನ(ಘ್ನ) ಕುನ್ನಿ

ಮನೆ ಸೇರಿಸಿದೆ..ಹಸಿದ(??)ಹೆಂಡತಿಯ ಮೇಲೆ

ಬಿದ್ದ ಹದ್ದು..

ಮತ್ತೊಂದಕ್ಕೆ ಮುಹೂರ್ತ.

ಹತ್ತರ ಜೊತೆ ಹನ್ನೊಂದು

ಬೆಳಗ್ಗೆ ಹತ್ತು ಉಳಿದಿದ್ದರೆ..

ಹೆಂಡತಿ ಬದುಕಿದ್ದರೆ..
ಪ್ರೀತಿಯಿಂದ ಪ್ರವಿ