Monday, December 7, 2009

ಪ್ರಾಯ ಮತ್ತು ಕನಸು !!!ಸುತ್ತಲೂ ಕತ್ತಲು
ಕತ್ತಲ ಮರೆಸಲು ಚಾದರ
ಹೊದ್ದು ಮಲಗಿದ್ದೇ,
ಆವರಿಸಿ ಬರುತಿದೆ ನಿದ್ದೆ

ಎಚ್ಚರ ನಿದ್ರೆಯ ನಡುವೆ
ತೂರಿ ಬರುತಿದೆ ಬೆಳಕು
ಕತ್ತಲೆಯೇ ಕುಗ್ಗಿದೆ
ಚಾದರದಿ ನುಗ್ಗಿದೆ
ಕಣ್ಣ ತುಂಬಾ ಹೊಳಪು

ಚೆಲುವು ಚಿತ್ತಾರ
ಒನಪು ವಯ್ಯಾರ
ಮನಸು ಮನೋಹರ
ಕನಸುಗಳ ಸಾಗರ

ಮುಚ್ಚಿದ ರೆಪ್ಪೆಯೊಳಗೆ
ಮೆಚ್ಚಿದ ಚಿತ್ರ
ತೋಳ ತೆಕ್ಕೆಯಲಿ
ಮೆಲ್ಲ ತೆವಳುವ ಪಾತ್ರ

ಹಾಗೆ ಹೊರಳಾಡುತಿರಲು
ಸ್ವರ್ಗ ಹತ್ತಿರತ್ತಿರ
ಮೆಲ್ಲಗೆ ಗಲ್ಲ ಕಚ್ಚಲು
ಛೇ!! ಆಗಿಬಿಟ್ಟಿದೆ ಎಚ್ಚರ !!

ಕಣ್ಣ ತೆರೆದರೆ ಕಡುಗಪ್ಪು
ತೆಕ್ಕೆಯಲಿ ದಿಂಬು ಭದ್ರ!!
ಹೊರಳಾಡಿದ ಕುರುಹು
ಹಾಸಿಗೆಯ ಹೊರಗೆ !!!
ಚಾದರ ನಾಚಿ ನೀರಾಗಿ,
ಕಾಲಡಿಯಲ್ಲಡಗಿದೆ!!!!

---------------------ಪ್ರೀತಿಯ ಪ್ರವಿ

Monday, November 16, 2009

ನೀ ಬಿಟ್ಟು ಹೋದ ಸ್ವತ್ತು , ಕಾಯುವ ಬಗೆ ಗೊತ್ತು !!!

ಬಾರದಿರಿ ಕಣ್ಣ ಹನಿಗಳೇ
ಅವಳ ಬಿಂಬ ಮಂಜಾದೀತು
ಜಾರದಿರಿ ಕಣ್ಣ ಬಿಂದುಗಳೇ
ಅವಳಿತ್ತ ಮುತ್ತು ಅಳಿಸೀತು

ಮರುಗದಿರು ಮನಸೇ
ಅವಳ ಚಿತ್ರ ಮಸುಕಾದೀತು
ಹೃದಯ,ನೀನೀಗ ರೋಧಿಸೆ
ನೆನಪುಗಳು ಮರೆಯಾದೀತು

ನೀನೀಗ ಜೊತೆಯಿಲ್ಲ
ಸರಿದಿರುವೆ ಬಹುದೂರ
ಜೊತೆಯಿದ್ದ ನೆನಪುಗಳಿವೆಯಲ್ಲ
ನೀ ಸರಿದಸ್ಟೂ, ಅವು ಹತ್ತಿರ

ಕಣ್ಣ ತುಂಬಾ ನಿನ್ನ ಬಿಂಬ
ಕೆನ್ನೆ ತುಂಬಾ ಸಿಹಿ ಮುತ್ತು
ಒಯ್ಯಲಾರೆ ಇದ ನೀ ಜೊತೆ ಹೊತ್ತು
ಮನದ ಮೇಲೆ ಮಾಸದ ಚಿತ್ರ
ಹೃದಯ ತುಂಬಾ ನೆನಪ ಗಾಯ
ಇವೀಗ ನನ್ನದೇ ಸ್ವತ್ತು !!!
ಕಾಯ್ದುಕೊಳ್ಳುವುದು ನನಗೆ ಗೊತ್ತು !!

-------------------------ಪ್ರೀತಿಯಿಂದ ಪ್ರವಿMonday, November 9, 2009

ನೆನಪುಗಳ ಸಂತೆ

ನೆನಪುಗಳ ಹಾವಳಿಯಿಂದ
ಹಾಳಾಗಿದೆ ನನ್ನೀ ಹೃದಯ
ದಾಳಿಯಿಡುತಿದೆ ಧೈರ್ಯದಿಂದ
ಚೇತರಿಸಿಕೊಳ್ಳಲು ನೀಡದೆ ಸಮಯ

ಶಿಥಿಲವಾಗಿದೆ ಹೃದಯ ಕೋಟೆ
ಎದುರಿಸಲು ವಾಸ್ತವ
ನೆನಪುಗಳೋ ಮೂಟೆ ಮೂಟೆ
ಮರೆತು, ಬದುಕಲು ಸಾಧ್ಯವಾ ?

ಚುಚ್ಚುತಿದೆ ಚೂರಿಯಂತೆ
ಅಪ್ಪಳಿಸುತಿದೆ ಅಲೆಯಂತೆ
ಕ್ಷಣವಷ್ಟೇ ಮರೆತಂತೆ
ಮರೆಯಲಿ ಅವಿತಂತೆ
ಮತ್ತದೇ ನೆನಪುಗಳ ಸಂತೆ

…………………ಪ್ರೀತಿಯಿಂದ ಪ್ರವಿWednesday, October 21, 2009

ನಿನ್ನ ಪ್ರೀತಿ ಸಿಕ್ಕೀತೇ?


ನಗುಮೊಗದ ಚೆಲುವೆ
ನಗುವಿನಲೆ ಸೆಳೆವೆ
ನಗುವಿನಲೆ ಕೊಲುವೆ
ಹೇಳು ಗೆಳತಿ ಇದು ಒಲವೇ ?

ಕುಡಿನೋಟದ ಕೂಸು
ಕುಡಿನೋಟವೇ ಸೊಗಸು
ಸೆಳೆಯಿತು ನನ್ನೀ ಮನಸು
ಹೇಳುತಿರಬಹುದೇ ನನ್ನೇ ಪ್ರೀತಿಸು ?

ಮಧುರ ಮಾತಿನ ವನಿತೆ
ಮಾತಲ್ಲ , ಅದು ಕವಿತೆ
ಕೇಳುತ ನನ್ನೇ ನಾ ಮರೆತೆ
ಹೇಳು ಗೆಳತಿ ನಿನ್ನ ಪ್ರೀತಿ ಸಿಕ್ಕೀತೆ ?

--------------------------------ಪ್ರೀತಿಯ ಪ್ರವಿ

Friday, October 9, 2009

ಮಲೆನಾಡ ಮಳೆ ನೋಡ!!
ಮೋಡಗಳೆಲ್ಲಾ ಬಂದು ಕವಿಯಲು

ಬೆಳ್ಳಂಬೆಳಗ್ಗೆ ಕಗ್ಗತ್ತಲು

ಒಡೆದು,ಕವಿದ ಮೋಡದ ಒಡಲು

ಭುವಿಗಿಳಿವ ಹಾಗಿದೆ ಮುಗಿಲು


ಒಂದಕ್ಕೊಂದು ಹೊಡೆದು ಮಿಂಚೇಳಲು

ಬಾನಂಗಳದಿ ಬೆಳಕಿನ ರಂಗೋಲಿ

ಗುಡುಗು ಗುಡುಗುಡಿಸಲು

ಮನದ ಮೂಲೆಯಲೂ ಭಯದ ಸುಂಟರಗಾಳಿ


ಮಹಾಮಳೆಯ ಮುನ್ಸೂಚನೆಯಂತೆ

ಬಿದ್ದಿತು ಹನಿ ಒಂದೆರಡು

ಅರಿತ ಪ್ರಾಣಿ-ಪಕ್ಷಿಗಳು

ಓಡಿತಿವೆ ಸೇರಿಕೊಳ್ಳಲು ತಮ್ಮ ಗೂಡು


ಅಗೋ ಧೋ ಎಂದು ಶುರುವಾಯಿತು ಮಳೆ

ಹೊಯ್ದಂತೆ ಕೊಡದಿ ನೀರು

ತೋಯ್ದು ಜಲಸಾಗರವಾಯಿತು ಇಳೆ

ಇಲ್ಲೀಗ ನೀರಿನದೆ ಕಾರುಬಾರು


ಗಣಪ,ಕೆಂಚ ,ಮಂಜ ,ಹೆಂಡ

ಮಾಡುತಿಹರು ಕೆಲಸ,ಹೊದ್ದು ಕಂಬಳಿ ಕೊಪ್ಪೆ

ಮಳೆಯ ಆರ್ಭಟದಿ ತುಂಬಿತು ಕೆರೆ ಹೊಳೆ ಹೊಂಡ

ಇವರೀಗ ಕೊಪ್ಪೆಯಲೂ ತೊಯ್ದು ತೊಪ್ಪೆ.


ಹೆಂಗಸರು ಮಕ್ಕಳೆಲ್ಲಾ ಗಡಗಡನೆ ನಡುಗುತಾ

ಉರಿಯುವ ಒಲೆಯ ಮುಂದೆಯೇ ಸ್ಥಾಪಿತ

ಗೇರು ಹಲಸಿನ ಬೀಜವ ಸುಡುತ,ರುಚಿ ಸವಿಯುತ

ಬೆಂಕಿಗಂಜಿದ ಚಳಿ ಸರಿಯಿತು ಸ್ವಲ್ಪ ಅತ್ತಿತ್ತ


ಮೋಡಗಳೆಲ್ಲಾ ಕರಗಿ ಮಳೆ ನಿಲ್ಲುತಿದೆ

ಸ್ತಬ್ಧವಾಗಿದೆ ನೆಲ,ಗಿಡ-ಮರ ಕಾಡು

...............

ಮತ್ತೆ ಮೋಡ ಕವಿಯುತಿದೆ...

ಇದು ಮಲೆನಾಡು ,ಇಲ್ಲಿಯ ಮಳೆ ನೋಡು

……………………. ಪ್ರೀತಿಯ ಪ್ರವಿ

Tuesday, September 22, 2009

ಕಾರಣ ನಿನ್ನನು ಪ್ರೀತಿಸುವೆ !!!!!

ಮಳೆಯ ನಾ ತಡೆಯಲಾರೆ
ಕೊಡೆಯಾಗಿ ನಾನಿರುವೆ
ಬಿಸಿಲ ನಾ ಬೆದರಿಸಲಾರೆ
ನೆರಳಾಗಿ ಜೊತೆಯಿರುವೆ

ದುಃಖದ ಭಾರದಿ ಬಳಲುತಿರೆ
ಹೆಗಲಿಗೆ ನಾ ಹೆಗಲ್ಕೊಡುವೆ
ಆದರೂ ನಿನ್ನಲಿ ಆಗದಿರೆ
ನಿನ್ನಯ ಭಾರವ ನಾ ಹೊರುವೆ

ಕತ್ತಲೆಯ ನಾ ಕಳುಹಿಸಲಾರೆ
ದೀಪದಿ ಹಾದಿಯ ಬೆಳಗಿಸುವೆ
ದಾರಿಯು ಕಾಣದೆ ತೊಡರುತಿರೆ
ಕೈ ಹಿಡಿದು ಮುನ್ನೆಡೆವೆ

ಕಷ್ಟವೇ ಆದರೂ ಕದಲಲಾರೆ
ಇಷ್ಟದೀ ನಿನ್ನ ರಕ್ಷಿಸುವೆ
ಏನನೂ ಮಾಡದೇ ನಾನಿರಲಾರೆ
ಕಾರಣ ನಿನ್ನನು ಪ್ರೀತಿಸುವೆ

--------------------- ಪ್ರೀತಿಯ ಪ್ರವಿ ...