Tuesday, April 13, 2010

ಅತ್ತುಬಿಡು ಮನಸೇ!!!

ಒಂದು ಭಾವಗೀತೆ ಬರೆಯುವ ಚಿಕ್ಕ ಪ್ರಯತ್ನ







ಅತ್ತುಬಿಡು ಮನಸೇ...
ದುಃಖ ಅಳಿಸಿಬಿಡು ಮನಸೇ ||

ಮರುಭೂಮಿಯ ಮರಳಲ್ಲಿ ಹುಡುಕುವಿಯೇಕೆ ನೀರು?
ಇರಬಹುದು ಅಲ್ಲೆಲ್ಲೋ, ಸಿಗದೆ ಚೂರುಪಾರು
ಬಯಲುಸೀಮೆಯ ಬಯಲಲ್ಲಿ ಹುಡುಕುವೇಕೆ ನೆರಳು?
ಇರಬಹುದು ಅಲ್ಲೆಲ್ಲೋ,ಸಿಗದೆ ಜಾಲಿ ಮರದ ಸಾಲು|1|

ಅತ್ತುಬಿಡು ಮನಸೇ
ಸಿಗದ ದುಃಖವನು ಅಳಿಸೇ. .

ನೀ ಕಂಡ ಪ್ರೀತಿ ನಿದ್ದೆಯಿರದ ಕನಸು
ಬಿದ್ದೆಯಲ್ಲೋ ಬಾವಿಯಲ್ಲಿ,ನೀ ಬುದ್ದಿಯಿರದ ಮನಸು
ಮರೆಯದ ನೆನಪಲ್ಲೇ ದಿನಾ ಕೊರಗುವೆಯೇಕೆ?
ಮರೆತುಬಿಡು ಮನಸೇ,ಅವಳು ಕೈಗೆ ಸಿಗದ ಮರೀಚಿಕೆ |2|

ಅತ್ತುಬಿಡು ಮನಸೇ,
ತೊರೆದ ಪ್ರೀತಿಯನು ಮರೆಸೇ

ಅತ್ತುಬಿಡು ಮನಸೇ...
ದುಃಖ ಅಳಿಸಿಬಿಡು ಮನಸೇ




Monday, April 5, 2010

ಅಪರಿಚಿತೆಗೊಂದು ಪ್ರೇಮ ಪತ್ರ

















ಹಾಯ್ ಅಪರಿಚಿತೆ,


ಇನ್ನೇನು ಕರಿಯಲಿಕ್ಕೆ ಸಾಧ್ಯ,ನಾನು ನಿನ್ನ ಒಂದು ದಿನ ನೋಡಿದ್ದಸ್ಟೇ ,ಅದೂ ಕ್ಷಣವಸ್ಟೇ.ನಿನಗೆ ಗೊತ್ತಿಲ್ಲ ಬಿಡು, ನಾನಿನ್ನ ನೊಡಿದ್ದು, ನಿನ್ನನ್ನು ನನ್ನಲ್ಲಿ ತುಂಬಿಕೊಂಡಿದ್ದು.


ಎಂದೋ ಅಪರೂಪಕ್ಕೆ ಸ್ವಲ್ಪ ತಡವಾಗಿಯೇ ಜಾಗಿಂಗ್ ಹೋಗುತ್ತಿದ್ದ ನಾನು, ಅಂದು ಮುಂಜಾನೆಯೇ ಚುಮು ಚುಮು ಚಳಿಯಲ್ಲಿ ಸಣ್ಣದೊಂದು ಮಫ್ಲರ್ ಸುತ್ತಿ ಹೊರಟಿದ್ದೆ.ಈ ಬೆಳಗು ಅನ್ನೋದು ತುಂಬಾ ಆಶ್ಚರ್ಯ ಮತ್ತು ಸುಂದರ , ಯಾಕೆ ದಿನ ಪೂರ್ತಿ ಹೀಗೇ ಇರಬಾರದು ಅಂಥ ಯೊಚಿಸ್ತಾ ಓಡುತ್ತಿದ್ದೆ, ಇಬ್ಬನಿಯ ಆಸ್ವಾದಿಸುತ್ತಾ, ಹಕ್ಕಿಗಳ ಕಲರವ ಕೇಳುತ್ತಾ. ಇಷ್ಟು ದಿನವೂ ಏನೂ ಕಾಣಿಸದಿದ್ದ ಆ ಮನೆ ಮುಂದೆ ಅವೋತ್ತು ಮೊದಲು ನೀ ಕಂಡಿದ್ದು, ಮಲ್ಲಿಗೆಯ ಘಮ ಮೂಗಿಗೆ ಅಡರಿದಾಗ ಜೊತೆಗೆ ಕೋಗಿಲೆ ಕಂಠದಿಂದ ಬಂದ ಆ ಹಾಡು ಕೇಳಿದಾಗ...


ಮೂಡಲ ಮನೆಯ

ಮುತ್ತಿನ ನೀರಿನ

ಎರಕವ ಹೊಯ್ದ,ನುಣ್ಣನೇ ಎರಕವ ಹೊಯ್ದ

ಬಾಗಿಲು ತೆರೆದು

ಬೆಳಕು ಹರಿದು

ಜಗವೆಲ್ಲಾ ತೋಯ್ದ,ಹೊಯ್ತೋ ಜಗವೆಲ್ಲಾ ತೋಯ್ದು


ಸೂರ್ಯೋದಯಕ್ಕೆ ಅರಳಲು ಕಾದಿರುವ ಮಲ್ಲಿಗೆಯನ್ನು ಬಿಡಿಸುತ್ತಾ, ಹಾಡನ್ನು ಹೇಳುತ್ತಾ, ಮಲ್ಲಿಗೆಯಂತೆಯೇ ಇರುವ ನಿನ್ನನ್ನು ಎವೆಯಿಕ್ಕದೇ ನೋಡಿದ್ದೆ ಮತ್ತು ನನ್ನೇ ನಾನು ಮರೆತಿದ್ದೆ. ನೀನು ಮಾತ್ರ ನನ್ನನ್ನು ಕಿರುಗಣ್ಣಿನಲ್ಲಿಯೂ ನೋಡಲಿಲ್ಲ. ಹಾಡು ಮುಗಿಯಿತೋ , ಮಲ್ಲಿಗೆ ಮುಗಿಯಿತೋ ನೀನು ಒಳಗೆ ಹೋಗಿದ್ದೆ, ನಿನ್ನ ಬಿಂಬವನ್ನು ನನ್ನ ಕಣ್ಣಲ್ಲಿ ಬಿಟ್ಟು, ಹೃದಯಕ್ಕೆ ಲಗ್ಗೆಯಿಟ್ಟು, ನಾಳೆ ಮತ್ತೆ ಸಿಗುವೆಯೆಂಬ ನಿರೀಕ್ಷೆಯ ಹುಟ್ಟಿಸಿ.






ಕೇಳು ಗೆಳತಿ..

ಅಂದಿನಿಂದ ಇಂದಿನವರೆಗೆ ನಾನು ಒಂದು ದಿನವೂ ಜಾಗಿಂಗ್ ತಪ್ಪಿಸಲಿಲ್ಲ. ಆ ಮನೆಯ ಮುಂದೆ ಹತ್ತು ನಿಮಿಷ ಕಾಯದೇ ಹೋಗುವುದಿಲ್ಲ. ಆದರೆ ಪ್ರತಿದಿನವೂ ನಿರಾಸೆ, ಕಾಣುವುದು ಕಂಪೋಂಡ್ ಮತ್ತು ಹೂವೇ ಇಲ್ಲದ ಮಲ್ಲಿಗೆ ಬಳ್ಳಿ ಮಾತ್ರ.

ಆದರೆ ನನ್ನ ಹೃದಯ ಹೇಳುತಿದೆ ನೀನು ಸಿಕ್ಕೇ ಸಿಗುತ್ತೀಯ ಎಂದು. ನಮ್ಮ ಮನೆಯ ಎಲ್ಲಾ ಪಾಟಿನಲ್ಲಿ ಈಗ ಮಲ್ಲಿಗೆ ಬಳ್ಳಿ ಮಾತ್ರ, ದಿನಾ ಅದಕ್ಕೆ ನೀರು ಗೊಬ್ಬರ ಹಾಕಲು ಮರೆಯುವುದಿಲ್ಲ. ಹೂವು ಬಿಡುವ ಸಮಯ ಸನ್ನಿಹಿತವಾಗಿದೆ ಗೆಳತಿ, ನಿರಾಸೆ ಮಾಡದೇ ಬರುತ್ತೀಯಲ್ಲಾ?

ನಿನಗೆ ಬೇಕಾದಷ್ಟು ಹೂವು ಕೊಯ್ದುಕೋ, ಎಲ್ಲಾ ಹೂವು ನಿಂದೇ.. ಆದರೆ ಆ ಘಮ, ಆ ಹಾಡು..


ಗಿಡಗಂಟಿಯ ಕೊರಳೊಳಗಿಂದ

ಹಕ್ಕಿಗಳಾ ಹಾಡು, ಹೊರಟಿತು ಹಕ್ಕಿಗಳಾ ಹಾಡು..

ಮತ್ತು ನೀನು, ಇವೆಲ್ಲಾ ನಂದೇ..

ಒಪ್ಪುತ್ತೀಯಲ್ಲಾ?


ಪ್ರೀತಿಯಿಂದ ಪ್ರವಿ