Thursday, February 25, 2010

ಬಾಳ ವ್ಯಾಕರಣ



ಕಡ್ಡಾಯವಾಗಿ ಕನ್ನಡ ವ್ಯಾಕರಣ ಬಲ್ಲವರಿಗೆ ಮಾತ್ರ !!!

ಬಾಲ್ಯ ಒತ್ತಕ್ಷರವಿಲ್ಲದ ಸಾಲು
ಚೂರು ಪಾರು ತಪ್ಪಿದ ಕಾಗುಣಿತ
ಅಡೆ ತಡೆಯಿಲ್ಲದ ಓಟ
ಶಾಲೆ, ಟೀಚರ್ ಗಳ ಕಾಟ
ಸಾಲಿನ ನಡುವೆ ಬರುವ ಕಾಮದಂತೆ,
ಕಾಲೇಜು,ಟೀನೇಜು ಜೊತೆ ಜೊತೆಗೆ
ಓರೆ ಕೋರೆ ನೋಟ ,ಆಡಿದ್ದೇ ಆಟ
ಅರ್ಥ ಕಳೆದುಕೊಂಡಿದೆ ವ್ಯಾಕರಣ
ಮಧ್ಯದಲ್ಲೆಲ್ಲೋ ಅರ್ಧ ವಿರಾಮ!!
ಅದು ಇದು,ಸಿಕ್ಕೀತೋ ಕೆಲಸ
ಕಲಸು ಮೇಲೋಗರ ಈ ಸಮಾಸ
ಹಾಗೂ ಹೀಗೂ ಮದುವೆಯ ಸುಳಿ ಮಧ್ಯ ನಾವು
ಸಪ್ತಪದಿ,ತ್ರಿಪದಿ,ಷಟ್ಪದಿ
ವಾರ್ಧಕ, ಅವಳೋ ಭಾಮಿನಿ
ಒಂದು ಲಘು, ಎರಡು ಗುರು !!!
ಹೂಂ ಈಗ ಸಂಧಿಕಾಲ !!
ಲೋಪವೇ ಹೆಚ್ಚು ,ಅಲ್ಲಲ್ಲಿ ಆದೇಶ
ಬಿಡಲಾಗುವುದೇ ಯಣ್ ಸಂಧಿ
ಪೂರ್ಣಕಾಮ,ಸವರ್ಣದೀರ್ಘ!!
ನೋಡ ನೋಡುತ್ತಲೇ ಆಗಮನ
ಬಂತದೋ ಕಂದ ಪದ್ಯ !!
ಯಮಾತಾರಾಜಭಾನಸಲಗಂ
ಇದು ಸಂಸಾರ ಗಣ
ಲಲಿತ ಸಾಹಿತ್ಯ,ಅಲ್ಲೊಮ್ಮೆ ಇಲ್ಲೊಮ್ಮೆ ರಗಳೆ
ತಲುಪಿ ಬಿಟ್ಟೆವಲ್ಲಾ ಕೊನೆಯ ಅಧ್ಯಾಯ
ಅಪಾರವಾದ ಅರ್ಥ,ಒಮ್ಮೊಮ್ಮೆ ಅಪಾರ್ಥ
ವ್ಯಾಕರಣ ಅಷ್ಟಕ್ಕಷ್ಟೇ.....
ಒತ್ತಕ್ಷ್ರರ,ಸಂಧಿ,ಷಟ್ಪದಿ,ರಗಳೆ,ಛಂದಸ್ಸು
ಯಾವುದೋ... ಎಲ್ಲಾ ತಮಸ್ಸು!!
ಯಮನೂ ಪಾಲಿಸುವ ನಿಯಮ
ವಾಕ್ಯದ ಕೊನೆಗೆ ಪೂರ್ಣ ವಿರಾಮ !!!

ಇತಿ ಶ್ರೀ !!!!

ಪ್ರೀತಿಯಿಂದ ಪ್ರವಿ

Thursday, February 18, 2010

ಸಾವಿನತ್ತ

















ನವ್ಯ ಶೈಲಿಯಲ್ಲೊಂದು ಕವನ ..




almost ಯಾರೂ ಸುಳಿಯದ
ಹಾದಿಯ ಬದಿಯ ಮರ ನಾನು
ಏಕಾಂಗಿ,ಸುತ್ತ ಬರೀ ಬೋಳುಗುಡ್ಡ
ಜೊತೆಯಿರುವುದು ಒಂದೆರಡು ಎಲೆ
ನಾಲ್ಕೈದು ಟೊಂಗೆ ,ಕುಟುಕು ಜೀವ
ಶಿಶಿರದ ಹಂಗಿಲ್ಲ ವಸಂತದ ಗುಂಗಿಲ್ಲ !!
ಬೇರುಗಳು ನೀರನ್ನರಸುತ್ತ ಹೊರಟಿವೆ
ಆದರೆ ಅವೂ ನನ್ನಷ್ಟೆ ದುರ್ಬಲ
ತಲುಪಲಾರವೇನೋ ಜಲ
ಬಿರು ಬಿಸಿಲು,ನನ್ನ ಬುಡಕ್ಕೇ ನೆರಳಿಲ್ಲ
ಬೇರೆಯವರಿಗೆ ದೂರದ ಮಾತು !!
ನೀರೆರೆಯುವರನ್ನಂತೂ ನಾ ಕಾಣೆ
ಆಗೊಮ್ಮೆ ಈಗೊಮ್ಮೆ ನಾಯಿ ಕಾಲೆತ್ತಿದ್ದಷ್ಟೆ!!
ಅಪರೂಪಕ್ಕೆ ಮನುಷ್ಯರೂ !!
ಆದರೂ ಏನೋ ಆಸೆ
ಒಂದೆರಡು ಹನಿ ಮಳೆ ಬರಬಹುದು
ಬೇರುಗಳು ಎಲ್ಲಾದರೂ ಜಲ ಸೇರಿಯಾವು...
ಮೋಡವೇ ಇಲ್ಲದ ಬಾನಿನಲ್ಲಿ
ಸೂರ್ಯ ಕಿಸಕ್ಕನೇ ನಕ್ಕಿದ್ದ,ನಗುತ್ತಲೇ ಇದ್ದಾನೆ
ಜೀವವೇ ಇಲ್ಲದ ಬೇರುಗಳು ಸಾಯಲು
ರೆಡಿಯಾಗಿದ್ದವು ನನ್ನಂತೆ !!
ಅಮರನಲ್ಲ ನಾನು ಮರ !!!

ಪ್ರೀತಿಯಿಂದ ಪ್ರವಿ

Tuesday, February 9, 2010

ಪ್ರೀತಿಮುತ್ತು !!!









ಬಿಸಿಲಲಿ ಬೆಂದಿಹ ಭೂಮಿಗೆ

ಮಳೆಹನಿ ಸೋಕಿದೆ

ವಿರಹದಿ ತಪಿಸಿದ ಹೃದಯಕೆ

ಪ್ರೀತಿಯು ಸಿಕ್ಕಿದೆ


ನೀರನು ಹೀರಿದ ಭುವಿಯು

ನಳನಳಿಸಿ ನಲಿಯುತಿದೆ

ಹೃದಯದಿ ಹೊಕ್ಕಿಹ ಪ್ರೀತಿ

ಹಿತವಾಗಿ ಹರಿಯುತಿದೆ


ಚಿಪ್ಪಲಿ ಸೇರಿದ ಹನಿಯು

ಮುತ್ತಾಗಿ ಮೆರೆಯುತಿದೆ

ಎದೆಯಲಿ ಬಿದ್ದ ಪ್ರೀತಿ ಹನಿಯು

ಮೆತ್ತಗೆ ಮುತ್ತಾಗುತಿದೆ

ಮುತ್ತದೋ ಮಿನುಗುತಿದೆ

ಹೃದಯವು ಹೊಳೆಯುತಿದೆ!!!


=== ಪ್ರೀತಿಯ ಪ್ರವಿ







Thursday, February 4, 2010

ಅಮ್ಮ ನಿನ್ನ ತೋಳಿನಲ್ಲಿ!!





ಅಮ್ಮ ನಿನ್ನ ಮಡಿಲಲ್ಲಿ
ಮತ್ತೊಮ್ಮೆ ಮಗುವಾಗಿ
ಮಲಗೋ ಆಸೆ
ನಾ ನಕ್ಕು ನಿನ್ನ ಮುಖದಲ್ಲೂ
ನಗುವನ್ನು ನೋಡೋ ಆಸೆ

ಅಮ್ಮ ನಿನ್ನ ತೋಳಲ್ಲಿ
ಮತ್ತೊಮ್ಮೆ ತೊನೆಯುತ್ತಾ
ಕೂರೋ ಆಸೆ
ಕಾಟವ ಸಹಿಸದೇ
ಹುಸಿ ಪೆಟ್ಟು ಕೊಟ್ಟಿರಲು
ಸುಮ್ಮನೇ ಸಿಟ್ಟನ್ನು
ಮಾಡೋ ಆಸೆ

ಅಮ್ಮ ನೀ ಕೈ ಹಿಡಿದು ನಡೆದರೂ
ನಾ ತಪ್ಪಿಸಿ ಹೋಗಿ
ಬೀಳೋ ಆಸೆ
ನೋವೇನೂ ಆಗದಿದ್ದರೂ
ನಿನ ಕಂಡು ಸುಮ್ಸುಮ್ನೆ ಅಳುವ ಆಸೆ
ನೀ ನನ್ನ ರಮಿಸುವುದಾ
ಕೇಳೋ ಆಸೆ

ಅಮ್ಮ ನಿನ್ನ ಕೈಯಲ್ಲಿ
ಕೈ ತುತ್ತು ತಿನ್ನೋ ಆಸೆ
ಚಂದಿರನ ತೋರಿಸುತಾ
ನೀ ತುತ್ತು ತಿನಿಸಲು
ನಾ ಹೀಗೆ ಇರುವಾಸೆ
ಮತ್ತೊಮ್ಮೆ ಮಗುವಾಗೋ ಆಸೆ!!!

.... ಪ್ರವಿ

Monday, February 1, 2010

ಕೂಡಿ ಬಂದ ಗಳಿಗೆ




ನನ್ನೆದೆ ಗೂಡಲಿ ನಿನ್ನದೇ ಚಿಲಿಪಿಲಿ
ನಿನ್ನನು ಸೇರಲು ಸುಮ್ಮನೆ ಗಲಿಬಿಲಿ
ಮನಸಿನ ತುಂಬಾ ತಣ್ಣನೆ ಕೋಲಾಹಲ
ನೋಡುವ ತವಕವೇ,ತಣಿಯದ ಕುತೂಹಲ

ಸಾವಿರ ಮಾತನು ಹೇಳಲು ಬಂದೆನು
ನಿನ್ನನು ನೋಡಲು ಮಾತನೇ ಮರೆತೆನು
ನೋಟವೇ ಹೇಳಿದೆ ನನ್ನೆದೆ ಮಾತನು
ನಿನ್ನಯ ಉತ್ತರ ಕೇಳದೇ ಹೋಗೆನು

ಜೊತೆ ಜೊತೆ ನಡೆದಿರೆ ಅದೇನೋ ರೋಮಾಂಚನ
ಕೈಗೆ ಕೈ ತಗುಲಲು ಅದೇಕೋ ತುಸು ಕಂಪನ
ಸಾವಿರ ಅರ್ಥವ ಹೇಳಿದೆ ನಡುವಿನ ಮೌನ
ಯಾವುದೂ ತಿಳಿಯದೆ ಚಡಪಡಿಸುತಿದೆ ಮನ

ಮುದ್ದಿನ ಕಣ್ಣಲಿ ಮಿಂಚಿನ ಹೊಳಪಿದೆ
ನನ್ನೀ ಪ್ರೀತಿಯ ಪ್ರಶ್ನೆಗೆ ಉತ್ತರ ಸಿಕ್ಕಿದೆ
ಕಂಡೆನು ಪ್ರೀತಿಯ ನಿನ್ನಯ ಕಣ್ಣಲೂ
ಕಾದಿರುವ ಶುಭಗಳಿಗೆ,ತೆರೆಯಿತು ಭಾಗ್ಯದ ಬಾಗಿಲು.

..............ಪ್ರವಿ