Thursday, June 12, 2014

ಊರ್ಮಿಳಾ !

( ಮೊದಲೇ ಬರೆದಿದ್ದ ಕವನ , ಎಲ್ಲೂ ಪೋಸ್ಟ್ ಮಾಡಿರಲಿಲ್ಲ .. ಈ ತಿಂಗಳ ಸಂಪದ ಸಾಲು ಪತ್ರಿಕೆಯಲ್ಲಿ ) 






ಅನಾಯಾಸವಾಗಿ ನೀ ಹೊರಟೆ 
ಅನಿವಾರ್ಯವಾಗಿ   ನಾ ಬಿಟ್ಟೆ 

ಅಣ್ಣನಿಗೆ ಹೆಜ್ಜೆ 
ಅತ್ತಿಗೆಗೆ ನೆರಳು 
ಕಟ್ಟಿಕೊಂಡವಳ ಜೊತೆ  ಉಳಿದದ್ದು  ಮಾತ್ರ 
ಕತ್ತಿನಲ್ಲಿದ್ದ  ತಾಳಿ 
ಮತ್ತೆ  .. 
ಬೆಟ್ಟದಷ್ಟು ಜವಾಬ್ದಾರಿ !

ಕಂಡ ಸಾವಿರ ಕನಸ 
ಕರುಣೆಯಿಲ್ಲದೇ ಕೊಂದೆ 
ಕೇಳುವ ಕಿವಿಯೇ ದೂರ 
ಸರಿದ ಮೇಲೆ ಮನ ಮೌನ 
ಸುಮ್ಮನೆ ಮುಚ್ಚಿಕೊಂಡೆ !

ಎದ್ದಾಗ ಎದುರಿಲ್ಲ
ಬಿದ್ದಾಗ ಬಲವಿಲ್ಲ
ಕುದ್ದಾಗ ತಂಪಿಲ್ಲ 
ಸರಸ , ಸಲ್ಲಾಪ ... ಪಾಪ !
ಭಾವಕ್ಕೆ , ಭೋಗಕೆ ಬೀಗ 
ಅಳುವಂತಿಲ್ಲ , ಆಡುವಂತಿಲ್ಲ 
ಇದ್ಯಾವ ತ್ಯಾಗ ?

ಅದ್ಯಾವ ಪುರುಷಾರ್ಥ !
ಅದ್ಯಾವ ಪುರುಷತ್ವ 
ಬೇಕೆನಿಸಲಿಲ್ಲವೇ ಸಹವಾಸ 
ಸಾಕೆನಿಸಿತೇ ಸಾಮಿಪ್ಯ ?
ನಿನಗೆ ಬರೀ ಹದಿನಾಲ್ಕು 
ಕಾದು ಬೂದಿಯಗುತಿದೆ ಭಾವ 
ಉಳಿಯುವುದು ಬರೀ ಜೀವ !
ನನಗೆ ಪೂರ್ತಿ ವನವಾಸ 
ನೀ ಬಂದ ನಂತರವೂ !

ಮೋಸ ....
ಕಿವಿಯಲ್ಲಿ ಕಾದ ಸೀಸ 
ಹುಸಿಯಾದ ಆ ವೇದ ಘೋಷ 
ಧರ್ಮೆಚ, ಅರ್ಥೇಚ , ಕಾಮೇಚ 
ನಾತಿ ಚರಾಮಿ !
ಬಾಯ್ದೆರೆದು ನುಂಗಬಾರದೇ ಭೂಮಿ !! 

................................................................ಪ್ರವಿ !




Tuesday, October 29, 2013

ನಾ ಕವಿಯಲ್ಲ !





























ನಾ ಕವಿಯಲ್ಲ 

ತೋಚಿದ ಗೀಚುತ್ತೇನೆ
ಪ್ರಾಸ ಹಾಕಿ
ಉಳಿಯಬಾರದಲ್ಲ ಭಾವಗಳು
ಹಾಗೆ ಬಾಕಿ !

ನಾ ಕವಿಯಲ್ಲ 
ನೀ ಬಾಚಿಕೊಟ್ಟ ಪ್ರೀತಿಯೆಲ್ಲಾ 
ಇಲ್ಲಿ ಕವನ 
ಒಣ ನೆಲದಲ್ಲೂ , ಮನದಲ್ಲೂ 
ಹಸಿರ ವನ !

ನಾ ಕವಿಯಲ್ಲ
ಎಲ್ಲ ಸಿಕ್ಕರೆ ಬಾಳು ನಕ್ಕರೆ
ಕವನದಲ್ಲೂ ಸಕ್ಕರೆ 
ನಲ್ಲೆ  ನೀನು ತೊರೆದರೆ
ಬರಹದಲ್ಲೂ ತೊಂದರೆ 
ಕಹಿಯೇ ಅಲ್ಲೂ , ನಾ  ಖರೆ

ನಾ ಕವಿಯಲ್ಲ
ಭಾವನೆ ಉಕ್ಕಿದಾಗ 
ಲೇಖನಿ ಬಿಕ್ಕುತ್ತದೆ 
ದುಃಖಕ್ಕೆ ಹರಿದದ್ದು ಕಣ್ಣೀರು
ಮತ್ತು ಖುಷಿಗೆ ಪನ್ನೀರು !

................................. ಪ್ರೀತಿಯಿಂದ ಪ್ರವಿ 

(ಸಂಪದ ಸಾಲು ಪತ್ರಿಕೆಯ ಈ ತಿಂಗಳ ಕವನ ) 


Wednesday, August 7, 2013

ನಿನ್ನ ಬಯಸುವ ಮಳೆ !

 ಸಂಪದ ಸಾಲು ಪತ್ರಿಕೆಯ  ಈ ತಿಂಗಳ ಕವನ 



ಮಳೆಯೆಂದರೇನು ಮಳ್ಳೇ?
ನಲ್ಲೆ
ಅದು ಜೊತೆ ಹರಿದ ನೆನಪ ಹೊಳೆ
ಮಳೆಯೆಂದರೇನು ಮಳ್ಳೇ?
ಮಲ್ಲೆ
ಅದು ನೀ ಹರಡಿದ ಕಂಪ ಕಳೆ

ಮಳೆಯೆಂದರೇನು ಮಳ್ಳೇ?
ಕಬ್ಬ ಜಲ್ಲೆ
ಅಗೆದಷ್ಟೂ ಮುಗಿಯದ ಸವಿಯ ಸೊಳೆ
ಮಳೆಯೆಂದರೇನು ಮಳ್ಳೇ ?
ಕೇಳೇ
ಜೊತೆಯಿರದಿರೆ ನೀ, ಬದುಕು ಸುಳ್ಳೇ !

ಮಳೆಯೆಂದರೇನು ಮಳ್ಳೇ?
ಪ್ರೀತಿಯಲ್ಲೇ
ತೊಳೆಯುತಿದೆ ಮನದ ಕೊಳೆ
ಮಳೆಯೆಂದರೇನು ಮಳ್ಳೇ?
ನೀ ಏನ ಬಲ್ಲೆ
ಬಾ ಬೇಗ ಸವಿಯಬೇಕದನ ನಿನ್ನ ಜೊತೆಯಲ್ಲೇ !

(ಚಿತ್ರ ಕೃಪೆ ಅಂತರ್ಜಾಲ )

Monday, July 8, 2013

ಅಕ್ಕಪಕ್ಕದವರೊಂದಿಗೆ ಇರಲಿ ಅಕ್ಕರೆ -- someಬಂಧ !




ಘಟನೆ ೧:
-------
ಗಂಡ ಕೆಲಸದ ನಿಮಿತ್ತ ಹೊರ ಊರಿಗೆ ಹೋಗಿದ್ದಾನೆ . ಮನೆಯಲ್ಲಿ ಹೆಂಡತಿಯೊಬ್ಬಳೇ, ಸಿಕ್ಕಾಪಟ್ಟೆ ಜ್ವರ ಬಂದಿದೆ , ಮೈ ಕೆಂಡದಂತೆ ಸುಡುತ್ತಿದೆ. ಫೋನು ಮಾಡಿದರೂ ಅವನು ಬರುವುದಕ್ಕೆ ಒಂದಿಡೀ ದಿನ ಹಿಡಿಯುತ್ತದೆ. ಇವಳೇ ಎದ್ದು ಡಾಕ್ಟರ್ ಹತ್ತಿರ ಹೋಗುವಷ್ಟು ಶಕ್ತಿ ಇಲ್ಲ. ಹೊಸ ಮನೆಗೆ  ಬಂದು ವರ್ಷವಾದರೂ ಅಕ್ಕಪಕ್ಕದವರ ಪರಿಚಯವಿಲ್ಲ. ಗಂಡ ಆಫೀಸಿಗೆ ಹೋದೊಡನೆ ಮನೆ, ಟೀವಿ , ಅಡುಗೆಮನೆ ಇಷ್ಟರಲ್ಲೇ  ಸಮಯ ಕಳೆಯುತ್ತಿದ್ದಳು ವಾಪಾಸು ಬರುವವರೆಗೂ. ಈಗ ಏಕಾಏಕಿ ಎದುರು ಮನೆಯವರನ್ನು ಕೇಳಲು ಮುಜುಗರ. ಪಕ್ಕದವರಿಗೂ ಅಷ್ಟೇ , ಎದುರುರು ಮನೆಯಲ್ಲಿ ಯಾರಿದ್ದಾರೆ , ಏನು ಮಾಡುತ್ತಿದ್ದಾರೆ ಎನ್ನುವ ಉಸಾಬರಿ ಬೇಕಿಲ್ಲ. ಪರಿಣಾಮ ಒಂದು ಮಾತ್ರೆಯನ್ನೂ ಕೂಡಾ ತೆಗೆದುಕೊಳ್ಳಲಾಗದೆ , ಇಡೀ ದಿನ , ಗಂಡ ಬರುವವರೆಗೆ ನರಕಯಾತನೆ ಅನುಭವಿಸುವಂತಾಯಿತು !

ಘಟನೆ ೨: 
-------
 ಮಗ ನಗರದಲ್ಲಿ ದೊಡ್ಡ ಕೆಲಸದಲ್ಲಿದ್ದಾನೆ. ಒಳ್ಳೆ ಮನೆ , ಕೈ ತುಂಬಾ ಸಂಬಳ, ಕಾರು. ಒಂದು ತಿಂಗಳು ಮಗನ ಮನೆಯಲ್ಲಿ, ನಗರದಲ್ಲಿ ಖುಷಿಯಾಗಿದ್ದು ಬರೋಣವೆಂದು ಅಪ್ಪ ಅಮ್ಮ ಬಂದಿದ್ದಾರೆ. ವಾರಾಂತ್ಯ ಇದ್ದಿದ್ದರಿಂದ ಮಗ ಕೂಡ ಪೇಟೆಯನ್ನೆಲ್ಲಾ ಕಾರಿನಲ್ಲಿ ಸುತ್ತಿಸಿದ್ದಾನೆ. ಮಾಲ್, ಉದ್ಯಾನವನ ತೋರಿಸಿದ್ದಾನೆ. ಬೇಕಿದ್ದನ್ನೆಲ್ಲಾ ಕೊಡಿಸಿದ್ದಾನೆ. ಅಪ್ಪ ಅಮ್ಮನಿಗೆ ಖುಷಿಯೋ ಖುಷಿ. ಸೋಮವಾರ, ಟಿವಿ ಹಾಕಿ ಕೂರಿಸಿ ಮಗ ಸೊಸೆಯರಿಬ್ಬರೂ ಯಥಾ ಪ್ರಕಾರ ಕೆಲಸಕ್ಕೆ ಹೋಗಿದ್ದಾರೆ. ಹಳ್ಳಿಯಲ್ಲಿದ್ದವರಿಗೆ , ಮನೆ ಕೆಲಸ ಎಲ್ಲಾ ಮುಗಿದ ಮೇಲೆ , ಪಕ್ಕದವರೊಂದಿಗೆ ಕಷ್ಟ ಸುಖ ಹಂಚಿಕೊಳ್ಳುವುದು ವಾಡಿಕೆ. ಟೀವಿ ಬೇಸರ ಬಂದು , ಹೊರಬಂದು ನೋಡಿದರೆ , ಅಕ್ಕಪಕ್ಕದ ಮನೆಯೆಲ್ಲಾ ಬಾಗಿಲು ಹಾಕಿದೆ. ಎದುರಿಗೆ  ಬಂದ ಒಂದಿಬ್ಬರು ನೋಡಿಯೂ ನೋಡದಂತೆ ಮನೆಗೆ ಹೋಗಿ ಬಾಗಿಲು ಹಾಕಿಕೊಂಡರು. ಆ ದಿನ ಹಾಗೋ ಹೀಗೋ ಕಳೆದರು. ಮರುದಿನವೂ ಅದೇ ಹಾಡು. ಮಾರನೇ ದಿನ ಅವರಿರಲಿಲ್ಲ , ಇಲ್ಲಿ ಸಮಯ ಕಳೆಯಲಿಕ್ಕಾಗದು ಎಂದು ಮಗನ ಹತ್ತಿರ ತಗಾದೆ ತೆಗೆದು ಊರಿಗೆ ಹೋಗಿಯಾಗಿತ್ತು. 

ಯಾಕೆ ನಗರಗಳಲ್ಲಿ ಈ ರೀತಿ ಆಗುತ್ತಿದೆ. ಯಾಕೆ ಒಬ್ಬರಿಗೊಬ್ಬರು ಸಂಬಂಧವಿಲ್ಲದಂತೆ ಬದುಕುತ್ತಿದ್ದಾರೆ. ಒಂದೇ ಕಟ್ಟಡದಲ್ಲಿದ್ದರೂ , ಎದುರು ಬದುರಾದರೂ ಯಾಕೆ ಒಬ್ಬರಿಗೊಬ್ಬರು, ನೋಡಿಯೂ ನೋಡದಂತೆ ಹಾದು ಹೋಗುತ್ತಾರೆ. ಕಾರಣಗಳು ಹಲವಾರು , ಇದಕ್ಕೆ ಮುಖ್ಯ ಮೊದಲ ಕಾರಣ :

* ಸಂಕುಚಿತವಾಗುತ್ತಿರುವ ಮನಸ್ಥಿತಿ. ನಾನು ನನ್ನದಷ್ಟೇ ನೋಡಿಕೊಂಡರೆ ಸಾಕು , ಬೇರೆಯವರು ಯಾರಾದರೇನು , ಏನಾದರೇನು ಎನ್ನುವ ಸ್ವಾರ್ಥ. ಕಡಿಮೆಯಾಗುತ್ತಿರುವ ಮಾನವೀಯತೆ, ಹೊಂದಾಣಿಕೆ. ಅಕ್ಕಪಕ್ಕದವರು ನಮ್ಮವರೆಂದು ಅಂದುಕೊಳ್ಳದಿರಿವುದು. ಮಾತನಾಡಿಸಿದರೆ ನಮ್ಮ ಬುಡಕ್ಕೇ ಬಂದರೆ ಕಷ್ಟ ಎನ್ನುವ ಭಾವನೆ.

ನಂತರದ ಕಾರಣಗಳನ್ನು ಪಟ್ಟಿ ಮಾಡುವುದಾದರೆ ,

* ನಗರದಲ್ಲಿ ಬದಲಾಗುತ್ತಿರುವ ಜೀವನ ಶೈಲಿ: ಹಳ್ಳಿ ನಗರವಾಗಿ ಬದಲಾದಂತೆ, ಬೆಳೆದಂತೆ, ಜೀವನ ಶೈಲಿಯೂ ಬದಲಾಗುತ್ತಿದೆ. ನಮ್ಮ ಜೊತೆ ಓದಿದ ಗೆಳೆಯರು, ಆಫೀಸಿನ ಸಹೋದ್ಯೋಗಿಗಳು , ಹೀಗೆ 
----------------------------------
ಬೆರಳೆಣಿಕೆಯ ಸಮಾನ ಸ್ಥರದ ಅಥವಾ ಸ್ವಲ್ಪ ಮೇಲ್ಮಟ್ಟದವರನ್ನು ಪರಿಚಿತರನ್ನಾಗಿಸಿಕೊಳ್ಳುತ್ತೇವೆ. ಮತ್ತು ಅವು ಹಾಯ್ , ಬಾಯ್ ಗಷ್ಟೇ ಸೀಮಿತವಾಗಿರುತ್ತದೆ. ಕುಂತಲ್ಲೇ ಕುರುಕ್ಷೇತ್ರ ತೋರಿಸುವ ಟೀವಿ ಚಾನಲ್ ಗಳು, ಮೊಬೈಲ್, ಅಂತರ್ಜಾಲ , ಜಾಲತಾಣ, ಸಾಮಾಜಿಕ ಜಾಲತಾಣಗಳ ಮೇಲೆ ಅವಲಂಬನೆ ಜಾಸ್ತಿಯಾಗಿದೆ. ನಮ್ಮ ಮನೆಯ ಹೊರಗೆ ಸುರಿಯುವ ಮಳೆಯನ್ನು ಒಳಗೆ ಕುಳಿತು ಟೀವಿಯಲ್ಲಿ ನೋಡಿ ಖುಷಿ ಪಡುತ್ತೇವೆ. ಅಕ್ಕಪಕ್ಕದವರಿಗಿಂತ ಪರದೆ ಆಚೆ ಇರುವವರು ಹೆಚ್ಚು ಆಪ್ತರಾಗುತ್ತಾರೆ.

*ಸಮಯದ ಅಭಾವ : 
----------------
ವೇಗವಾಗಿ ಬೆಳೆಯುವ ನಗರದಲ್ಲಿ ಸಮಯವೂ ತುಂಬಾ ವೇಗವಾಗಿ ಓಡುತ್ತದೆ, ಜೊತೆಗೆ ಇಲ್ಲಿನ ಖರ್ಚುವೆಚ್ಚಗಳೂ. ಒಂದಿಷ್ಟು ಜನರಿಗೆ , ಜೀವನ ಮಾಡಬೇಕೆಂದರೆ ದಿನ ಪೂರ್ತಿ ದುಡಿಯಬೇಕು. ತಮ್ಮನ್ನು , ತಮ್ಮ ಸಂಸಾರವನ್ನೇ ನೋಡಲು ಸಮಯವಿಲ್ಲದಷ್ಟು ಕೆಲಸ. ಇನ್ನೆಲ್ಲಿ ಪಕ್ಕದ ಮನೆಯವರನ್ನು ಮಾತನಾಡಿಸಿಯಾರು. ಮತ್ತಷ್ಟು ಜನರಿಗೆ ದುಡ್ಡೇ ದೊಡ್ಡಪ್ಪ, ಜೀವನ. ಕಾಯಕವೇ ಕೈ "ಕಾಸು". ಬೇರೆಲ್ಲವೂ ಅಮುಖ್ಯ. 

* ಹುಟ್ಟಿದ್ದೆಲ್ಲೋ.. ಬದುಕುವುದೆಲ್ಲೋ.. ಬದುಕುವುದೆಲ್ಲೆಲ್ಲೋ...
----------------------------------------------
ನಗರದಲ್ಲಿ ಸುಮಾರು ಮುಕ್ಕಾಲು ಪಾಲು ಜನ ವಲಸಿಗರೇ, ಅಲ್ಲೊಬ್ಬರು ಇಲ್ಲೊಬ್ಬರು ಮೂಲ ನಿವಾಸಿಗಳಷ್ಟೇ. ಹುಟ್ಟಿದ ನೆಲದಲ್ಲಾದರೆ ಮಣ್ಣಿನೊಂದಿಗೆ, ಜನರೊಂದಿಗೆ ನಂಟು ಅಂಟಿಕೊಂಡೇ ಇರುತ್ತದೆ. ಮಾತು ಕಲಿತಾಗಿನಿಂದಲೂ ಮಾತನಾಡಿ ಅಭ್ಯಾಸವಿರುತ್ತದೆ. ಕೊನೇ ಪಕ್ಷ ಒಂಡೆರಡು ವರ್ಷ ಒಂದೇ ಕಡೆಯಿದ್ದರೆ ಮುಗುಳ್ನಗುವಷ್ಟು ಸಂಬಂಧವಾದರೂ ಇರುತ್ತದೆ. ಆದರೆ ಇಲ್ಲಿ ಹಾಗಲ್ಲ , ಕೆಲಸದ ಜಾಗ ಬದಲಾದಂತೆ ವಾಸಸ್ಥಳವೂ ಬದಲಾಗುತ್ತಿರುತ್ತದೆ. ಪಕ್ಕದಲ್ಲಿ ಇಂದಿದ್ದವರು ನಾಳೆಯಿರುತ್ತರೆಂಬ ಖಾತ್ರಿಯಿಲ್ಲ. ಬೆಳಗ್ಗೆ ನೋಡಿದರೆ ದೊಡ್ಡದೊಂದು ಲಾರಿ ಬಂದು ಲಗೇಜ್ ತುಂಬಿಸುತ್ತಿರುತ್ತದೆ. ಮರುದಿನ ಮತ್ಯಾರೋ ಬರುತ್ತಾರೆ. ಹೀಗಿದ್ದಾಗ ಪರಿಚಯವಾದರೂ ಹೇಗಾದೀತು. ಮಾಡಿಕೊಳ್ಳೂವ ಜರೂರತ್ತು ನಮಗೇಕೆ ಬೇಕು ಎಂದು ಸುಮ್ಮನಾಗುತ್ತಾರೆ.

*ಭಾಷೆಯ ಸಮಸ್ಯೆ: 
------------------
ಆಯಾ ನಗರಕ್ಕೆ ಅದಕ್ಕೊಂದು ಮೂಲಭಾಷೆಯಿದ್ದರೂ, ಯಾವ್ಯಾವುದೋ ಊರಿನಿಂದ , ರಾಜ್ಯದಿಂದ , ರಾಷ್ಟ್ರದಿಂದ ಜನಬಂದು ಅದೊಂದು ಭಾಷ್ಯಾತೀತ ಜಾಗವಗಿಬಿಟ್ಟಿರುತ್ತದೆ ( ವಿಶೇಷವಾಗಿ ಬೆಂಗಳೂರು). ಇರೋ ನಾಲ್ಕು ಮನೆಗೂ ನಾಲ್ಕು ಭಾಷೆಯ ಜನರಿರುತ್ತಾರೆ. ಅಪಾರ್ಥವಾದರೆ ಕಷ್ಟವೆಂದು ತುಂಬಾ ಜನ ತಾವಾಯ್ತು ತಮ್ಮ ಪಾಡಾಯ್ತು ಎಂದು ಸುಮ್ಮನಿರುತ್ತಾರೆ. 

ವಸುಧೈವ ಕುಟುಂಬಕಂ , ಮನುಜಮತ ವಿಶ್ವಪಥ , ಮನುಜಕುಲಂ ತಾನೊಂದೇ ವಲಂ ಶಬ್ದಗಳೆಲ್ಲಾ ಅರ್ಥ ಕಳೆದುಕೊಂಡಿದೆ.

ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ ! ಖಂಡಿತಾ ಇದೆ !

* ನಾವು ಒಳಮುಖರಾಗದೇ ಸ್ವಲ್ಪ ಹೊರಮುಖವಾಗಬೇಕು

* ಆ ಕಟ್ಟಡಕ್ಕೆ ನಾವು ಹೊಸದಾಗಿ ಹೋಗಿ ಸೇರಿದವರಾದರೆ, ನಾವೇ ಹೋಗಿ ಪರಿಚಯಿಸಿಕೊಳ್ಳಬೇಕು. ಇದರ ಅರ್ಥ ಮನೆಗೆ ಕರೆತಂದು ತಿಂಡಿತಿನಿಸು ಕೊಟ್ಟು ಸತ್ಕರಿಸಬೇಕೆಂದೇನೂ ಇಲ್ಲ, ಸತ್ಕರಿಸಿದರೂ ತಪ್ಪೇನಿಲ್ಲ. ಅಥವಾ ದಿನಾ ಮನೆಗೆ ಕರೆತಂದು ಮಾತನಾಡಿಸುತ್ತಾ ಕೂರಬೇಂದೇನೂ ಇಲ್ಲ. ಪಕ್ಕದಲ್ಲಿರುವವರ ಹೆಸರು , ಊರು ತಿಳಿದುಕೊಂಡಿದ್ದರೂ ಸಾಕು. 

* ಭಾಷೆಗಿಂತ ಭಾವ ಮುಖ್ಯ, ಮಾತನಾಡುವ ಮನಸ್ಸಿರಬೆಕಷ್ಟೇ ಅರ್ಥಮಾಡಿಕೊಳ್ಳಬಹುದು. ಮತ್ತೊಂದು ಒಳ್ಳೆ ಉಪಾಯವೆಂದರೆ ಅಲ್ಲಿಯ ಮೂಲಭಾಷೆಯನ್ನು ಕಲುಯುವಂತೆ ಪ್ರೇರೇಪಿಸಬೇಕು ಹಾಗು ನಾವು ಕಲಿಯಬೇಕು ಮತ್ತು ಮಾತನಾಡಬೇಕು. ಭಾಷೆ ಉಳಿಸಿದಂತೆಯೂ ಆಗುತ್ತದೆ.

* ಅಕ್ಕಪಕ್ಕದವರಿಗೂ ಸಮಯದ ಅಭಾವವೇ , ಗಂಟೆಗಟ್ಟಲೆ ಮಾತನಾಡಿಸಬೇಕೆಂದೇನೂ ಇಲ್ಲ. ಎದುರಿಗೆ ಸಿಕ್ಕರೂ ನೋಡದಂತೆ ಹಾಗೇ ಹಾದು ಹೊಗದಿದ್ದರೆ ಸಾಕು. ಒಂದು ಕುಶಲೋಪರಿ , ಒಂದು ಹಾಯ್ ಕೂಡ ಆತ್ಮೀಯವಾಗಿ ಆಡಿದರೆ ಸಾಕು.

ನೆನಪಿಡಿ:
    ಒಂದು ಕಿರುನಗು ಕೂಡಾ ಪರಿಚಯಕ್ಕೆ ನಾಂದಿಯಾಗಬಲ್ಲದು. ಆ ಪರಿಚಯ ಆಪತ್ಕಾಲಕ್ಕೆ ನೆರವಾಗಬಹುದು. ಆತ್ಮಸುಖಕ್ಕೆ ಕಾರಣವಾಗಬಹುದು, ಕಷ್ಟಸುಖಕ್ಕೆ ಕಿವಿಯಾಗಬಹುದು. 

ಇನ್ನೇಕೆ ತಡ, ಬಾಗಿಲು ತೆಗೆದು ನೋಡಿ , ಪಕ್ಕದ ಮನೆಯವರೂ ಬಾಗಿಲು ತೆಗೆದಿರಬಹುದು ... ಮಾತನಾಡಲು !! 

Thursday, June 6, 2013

ವ್ಯರ್ಥ !

ಸಂಪದ ಸಾಲಿನ ಈ ತಿಂಗಳ ಕವನ !

ಚಿತ್ರ-- ಅಂತರ್ಜಾಲ !





ಬೆಳಕೇನೋ ಬಂತು 
ಬೆಳಗಾದ ಮೇಲೆ
ನಿನ್ನ ನೆನಪಂತೆ !
ರಶ್ಮಿ ಸೋಕಲೇ ಇಲ್ಲ
ನಿನ್ನಂತೆ !

ನಿಚ್ಚಳವಾಗಿದ್ದೆ ನೀನು
ಮೋಡವೂ ಮುಸುಕಿರಲಿಲ್ಲ
ಗೋಡೆಯಲ್ಲ ಅಡ್ಡವಿದ್ದದ್ದು 
ಉದ್ದುದ್ದ ಬೆಳೆದ ಗೋಡೆ
ಹೊರ ಬರಲಿಲ್ಲ
ಒಳ ಬಿಡಲಿಲ್ಲ!

ಪೂರ್ವದಲ್ಲಲ್ಲದಿದ್ದರೂ 
ಕೊನೇ ಪಕ್ಷ
ಪಶ್ಚಿಮದಲ್ಲಿರಬೇಕಿತ್ತು 
ಕಿಟಕಿ!
ಮುಳುಗುವಾಗಲಾದರೂ
ಮುಖ ತೋರುತ್ತಿದ್ದೆಯೇನೋ
ಇಣುಕಿ !

ಉತ್ತರ ದಕ್ಷಿಣದಲ್ಲಿ
ಕಿಟಕಿಯಿಟ್ಟಿದ್ದು 
ವ್ಯರ್ಥವೆಂದು ಅರಿವಾದಾಗ
ಕತ್ತಲಾಗಿತ್ತು !

.. ಪ್ರವೀ... 

Wednesday, April 17, 2013

ಬಾರೋ ನಲ್ಲ !

ಸಂಪದ ಸಾಲಿನಲ್ಲಿ  ಪ್ರಕಟವಾದ ನನ್ನ  ಕವನ ...

ಅವಳಾಗಿ ಬರೆದಾಗ :):)
.
((ಚಿತ್ರಕೃಪೆ ಅಂತರ್ಜಾಲ !))





ಕನಸ ಕಣ್ಣುಗಳಿಗ ಬಣ್ಣ ತುಂಬಿ
ಬಾರೋ ನಲ್ಲ, ಮನಸ ಹೂವಿಗೆ  ನೀನೇ ದುಂಬಿ
ಮಧುವ ಹೀರು ಮಧುರವಾಗಿ
ನೀರಾಗುವೆ ನಿನಗಾಗುವೆ ನಾನು ಕರಗಿ!

ಒಲವ ಲತೆ ಒರಗೋಕೆ ಮರವಾಗು
ಚಿಗುರು ಬಲಿಯುವ ಮುನ್ನ ಬಳಿಸಾಗು
ಹದವಾದ ಹರವಾದ ಮೈಯ ತಬ್ಬಿ
ಆವರಿಸುವೆ ನಿನ್ನ ಪೂರ್ಣ ಹಬ್ಬಿ ಹಬ್ಬಿ !

ಉತ್ತಿ ಬಿತ್ತಿದ ಹೃದಯದಲ್ಲಿ
ಸುತ್ತ ಹರಡಿದೆ ಪ್ರೀತಿ ಕಂಪು
ಬತ್ತಿ ಹೋಗದು ಎದೆಯು ಕಾದು
ಎತ್ತ ನೋಡಿದರತ್ತ ಚಿಲುಮೆ-ತಂಪು !

ದೂರವಾಗಲಿ ಗೆಳೆಯ ದೂರವಾಗುವ ಮಾತು
ಸಹಸಲಾರೆ ಅರೆಕ್ಷಣವೂ ನೀನಿರದ ವಿರಹ
ಬೇಕು ಬಾಳಿಗೆ ಬಾರೋ ಇನಿಯ
ನಿತ್ಯ ನಿರಂತರ ನಿನ್ನ ಸನಿಹ !

.............................................ಪ್ರವೀ !

Friday, November 16, 2012

ಎದ್ದರಷ್ಟೇ ಎದುರಿಸಲು ಸಾಧ್ಯ



ಸಂಪದ ಸಾಲಿನಲ್ಲಿ ಪ್ರಕಟವಾದ ನನ್ನ ಕವನ 

clear ಆಗಿ ಓದಲು ಕೆಳಗೆ ಮತ್ತೆ type ಮಾಡಿದ್ದೀನಿ ಓದಿ 



ಬಲವಿಲ್ಲದವನು
ಬಾಲವೇನೂ....
ಬುಡಕ್ಕಿಟ್ಟರೂ ಅಷ್ಟೇ..
ಲಂಕೆ ಬಿಟ್ಟ
ಹನುಮ ಸುಟ್ಟ
ಭ್ರಷ್ಟ ಸಂತುಷ್ಟ !

ಅಂಡು ತೊಳೆಯಲೂ
ಅಂಡಲೆಯಬೇಕು ಇಲ್ಲಿ !
ಲಂಕೆಯಲ್ಲಿ ಬಾಟಲಿಗಳು
ಸದ್ದು ಮಾಡುತ್ತಿವೆ !

ಹೊಟ್ಟೆಗಿಲ್ಲದೇ ಸತ್ತ
ಹೊಟ್ಟೆ ಹುಳುಗಳ ಮೇಲೆ
ರಾವಣನ ಅರಮನೆ ಮಿರಮಿರ !
ಒಬ್ಬನ ಸಮಾಧಿ
ಇನ್ನೊಬ್ಬನ ಬುನಾದಿ !

ಕೂಳಿಲ್ಲದವನು
ಗೋಳಿಡುತ್ತಿದ್ದಾನೆ !
ಕುಂಭಕರ್ಣನಿಗೆ
ಇನ್ನಾರು ತಿಂಗಳು ನಿದ್ದೆಯಂತೆ !

ರಾಮ ತ್ರೇತಾದಲ್ಲಿ ಇದ್ದನೆಂಬ ಸುದ್ದಿ
ವಿಭೀಷಣನ ವಿಳಾಸ ಸಿಗುತ್ತಿಲ್ಲ !

ಎದ್ದರೆ ಗೆದ್ದೆ
ಬಿದ್ದರೆ ಗುದ್ದೇ ...
ಶಾಯಿ ಬತ್ತಿರುವ ಲೇಖನಿ
ಬದಿಗೊತ್ತಿ
ಬಡ್ಡಾದರೂ ಸರಿ
ಹಿಡಿ ಕತ್ತಿ !

ಮುಂದೊಂದು ದಿನ ರಾವಣ
ಸತ್ತರೂ ಸತ್ತಾನು !