Friday, November 16, 2012

ಎದ್ದರಷ್ಟೇ ಎದುರಿಸಲು ಸಾಧ್ಯಸಂಪದ ಸಾಲಿನಲ್ಲಿ ಪ್ರಕಟವಾದ ನನ್ನ ಕವನ 

clear ಆಗಿ ಓದಲು ಕೆಳಗೆ ಮತ್ತೆ type ಮಾಡಿದ್ದೀನಿ ಓದಿ ಬಲವಿಲ್ಲದವನು
ಬಾಲವೇನೂ....
ಬುಡಕ್ಕಿಟ್ಟರೂ ಅಷ್ಟೇ..
ಲಂಕೆ ಬಿಟ್ಟ
ಹನುಮ ಸುಟ್ಟ
ಭ್ರಷ್ಟ ಸಂತುಷ್ಟ !

ಅಂಡು ತೊಳೆಯಲೂ
ಅಂಡಲೆಯಬೇಕು ಇಲ್ಲಿ !
ಲಂಕೆಯಲ್ಲಿ ಬಾಟಲಿಗಳು
ಸದ್ದು ಮಾಡುತ್ತಿವೆ !

ಹೊಟ್ಟೆಗಿಲ್ಲದೇ ಸತ್ತ
ಹೊಟ್ಟೆ ಹುಳುಗಳ ಮೇಲೆ
ರಾವಣನ ಅರಮನೆ ಮಿರಮಿರ !
ಒಬ್ಬನ ಸಮಾಧಿ
ಇನ್ನೊಬ್ಬನ ಬುನಾದಿ !

ಕೂಳಿಲ್ಲದವನು
ಗೋಳಿಡುತ್ತಿದ್ದಾನೆ !
ಕುಂಭಕರ್ಣನಿಗೆ
ಇನ್ನಾರು ತಿಂಗಳು ನಿದ್ದೆಯಂತೆ !

ರಾಮ ತ್ರೇತಾದಲ್ಲಿ ಇದ್ದನೆಂಬ ಸುದ್ದಿ
ವಿಭೀಷಣನ ವಿಳಾಸ ಸಿಗುತ್ತಿಲ್ಲ !

ಎದ್ದರೆ ಗೆದ್ದೆ
ಬಿದ್ದರೆ ಗುದ್ದೇ ...
ಶಾಯಿ ಬತ್ತಿರುವ ಲೇಖನಿ
ಬದಿಗೊತ್ತಿ
ಬಡ್ಡಾದರೂ ಸರಿ
ಹಿಡಿ ಕತ್ತಿ !

ಮುಂದೊಂದು ದಿನ ರಾವಣ
ಸತ್ತರೂ ಸತ್ತಾನು !

Monday, October 8, 2012

ಎರಡು ಕವನ ಪ್ರೇಮ ದೇವತೆ ಮತ್ತು ಸಾವು !

ಸಂಪದ ಸಾಲಿನಲ್ಲಿ ಪ್ರಕಟವಾದ ನನ್ನ 2 ಕವನ , clear ಆಗಿ ಓದಲು ಕೆಳಗೆ ಮತ್ತೆ type ಮಾಡಿದ್ದೀನಿ ಓದಿ 
ಪ್ರೇಮ ದೇವತೆ !
 ====================

ಪ್ರೀತಿಯ ಗಂಧಗಾಳಿ
ಅ ಆ ಇ ಈ ಒತ್ತು ಇಳಿ
ಏನೂ ಗೊತ್ತಿಲ್ಲದವ ನಾನು ಶತಮೂರ್ಖ
ಅಕ್ಷರ ಕಾಗುಣಿತ
ಅಂಖೆ ಸಂಖ್ಯೆಗಳ ಮಿಳಿತ
ಅಳೆದು ಅರೆದು ಕುಡಿಸಿದೆ ನೀನು ಮಗ್ಗೀ ಪುಸ್ತಕ !

ಪ್ರೀತಿ ಬೆಂಗಾಡಿನಲಿ
ಆಳವರಿಯದ ಸಾಗರದಲಿ
ದಾರಿ ಕಾಣದೇ, ಬಿಟ್ಟಿದ್ದೆ ತೀರ ಸೇರುವ ಆಸೆ
ಅಡೆತಡೆಯ ಪುಡಿಮಾಡಿ
ಅಡಿಗಡಿಗೆ ದಾರಿ ತೋರಿ
ದಡ ಸೇರಿಸಿದ ನೀನು ಪ್ರೇಮ ನಕಾಶೆ !

ಇಂದಿಲ್ಲಿ ಮತ್ತಲ್ಲಿ
ನಾಳೆ ಇನ್ನೆಲ್ಲಿ, ಕಂಡ ಕಂಡಲ್ಲಿ
ಪ್ರೀತಿ ಹುಡುಕುತ್ತಾ ಹೊರಟವ ನಾನು ಅಲೆಮಾರಿ
ನಿಂತಲ್ಲಿ ಕುಂತಲ್ಲಿ
ಕಂತೆ ಕಂತೆ ಒಲವ ಚೆಲ್ಲಿ
ಅರಮನೆಯ ಕಟ್ಟಿಸಿದೆ ನೀನು ಪ್ರೇಮದೇವತೆಯೇ ಸರಿ !

ದಾರಿ ಮರೆಯದ
ಮತ್ತೆ ತಿರುಗದ
ಮಂತ್ರ ತಪ್ಪದ ನಾನು ಈಗ ಪ್ರೇಮ ಪೂಜಾರಿ !

ಸಾವು !
====================

ಹುಟ್ಟಿನ ಬೆನ್ನಿಗೇ ಹುಟ್ಟಿದ್ದು
ಸಾವು ಅವಳಿ ಜವಳಿ
ಜೊತೆ ಜೊತೆಗೇ ಸಾಗುವ
ಹುಟ್ಟು ಸಾವು ಸಯಾಮಿ

ಅದೃಶ್ಯ ಅಗೋಚರ
ಪ್ರತ್ಯಕ್ಷ,ಕಾಡಿದರೆ ಗ್ರಹಚಾರ 
ನೀತಿ ನಿಯತ್ತು
ಸತ್ಯವಾಗಿರಲಿ ಸ್ವತ್ತು
ಹುಟ್ಟು ನಿನ್ನ ಪರ ಸಾವು ಅಪರ !

ಬಲ್ಲಿದ ಬಡವ
ಇಲ್ಲ ಭೇದ ಭಾವ
ಉಪ್ಪರಿಗೆ ಕೊಪ್ಪರಿಗೆ
ಎಲ್ಲಾ ಒಂದೇ ಸಾವಿಗೆ !
ಮರೆಯವನೂ ಮಡಿದ
ಮೆರೆದವನೂ ಮರೆಯಾದ !

ಯಾರನ್ನೂ ಬಿಟ್ಟಿಲ್ಲ
ಯಾರನ್ನೂ ಇಟ್ಟಿಲ್ಲ !


ಸಾವು ಖಚಿತ ಒಮ್ಮೊಮ್ಮೆ ಉಚಿತ !
ಎಲ್ಲಾ ಪೂರ್ವ ನಿಶ್ಚಿತ
ಸಾಧನೆಯತ್ತ ಇರಲಿ ಚಿತ್ತ
ಬದುಕಾಗಿರಲಿ ನ್ಯಾಯ ಸಮ್ಮತ

ಸಾವು !
ಕತ್ತಲೆಯಲ್ಲೂ ಬೆಂಬಿಡದ ನೆರಳು
ಎಚ್ಚರ !
ಎಡವಿದರೆ ಉರುಳು

Tuesday, August 28, 2012

ಎರಡು ಕವನ , ವಸಂತ ಮತ್ತು ನೆಲವಿಲ್ಲ

ಸಂಪದ ಸಾಲಿನಲ್ಲಿ ಪ್ರಕಟವಾದ ನನ್ನ 2 ಕವನ , clear ಆಗಿ ಓದಲು ಕೆಳಗೆ ಮತ್ತೆ type ಮಾಡಿದ್ದೀನಿ ಓದಿ 
1. ವಸಂತ
=========
ಬದುಕು ಬರೀ ಭ್ರಮೆ , ಸುಳ್ಳೇ,
ಅದು ನೀರ ಮೇಲಿನ ಗುಳ್ಳೆ
ಎಂದು ಸಂತನಾಗ ಹೊರಟವನನ್ನು
ತಡೆದು ನಿಲ್ಲಿಸಿದ್ದು ವಸಂತ !

ಚಿಗುರು ಚೈತ್ರ
ಮಧುರ ಮೈತ್ರ
ಪ್ರತೀ ಧನಿಯೂ ಕೋಗಿಲೆ
ಹೆಜ್ಜೆ ಹೆಜ್ಜೆಯೂ ನವಿಲೇ !

ಗುಳ್ಳೆಗಳ ಮೇಲೆಲ್ಲಾ ಚಿತ್ತಾರ
ಮರೆತೇ ಹೊಯಿತು ಶಿಶಿರ
ಬದುಕೀಗ ಭೂರಮೆ !

ಹಬ್ಬಿರುವ ಹೂವುಗಳ ತಬ್ಬಿ
ಹದ ಮಾಡುತ್ತಿವೆ ದುಂಬಿ
ಸೃಷ್ಠಿಯ ಹುಟ್ಟಿಗೆ ಓಂಕಾರ
ಮನದಲ್ಲಿ ಸಾವಿರ ಆಸೆಗಳ ಝೇಂಕಾರ!

ಸಂತನಾಗ ಹೊರಟವನ
ಮನೆಯಲ್ಲೀಗ ಸಂತೆ
ಶಿಶಿರದ ಬೆನ್ನಲ್ಲೇ ವಸಂತ
ಬೇಕಿಲ್ಲ ಬೋಳಾಗುವ ಚಿಂತೆ
ಯಾಕೆ ಗುಳೆ !
ನೀರು ನಿಜ, ಒಡೆದರೂ ಗುಳ್ಳೆ
ನೀರವದ ನಂತರ ದಿವ್ಯ ಕಲರವ !

2. ನೆಲ- ವಿಲ್ಲಾ !
==========
ನೆಲ ಬಗೆಯುತ್ತಿದ್ದಾರೆ
ನೇಗಿಲಿನಿಂದಲ್ಲ

ಮುಂಗಾರು ಅಭಿಷೇಕವಾದಾಗ
ಮಿದು ಮಾಡಬೇಕು
ಉತ್ತಬೇಕು ಬಿತ್ತಬೇಕು
ಮತ್ತೆ ಮನಸು ಮಗುವಾಗಬೇಕು
ಮೃದುವಾಗಬೇಕು
ಮೈ ಹೊಲಸಾದಂತೆಲ್ಲಾ
ನೆಲ ಹುಲುಸು
ರಟ್ಟೆ ಮುರಿದರೆ ರೊಟ್ಟಿ
ಬಿತ್ತಿದರೆ ಬುತ್ತಿ
ನೆತ್ತರು ನೀರಾಗಬೇಕು
ಬೆವರು ಬಸಿದು ಬರಿದಾಗಬೇಕು

ಯಾವನಿಗೆ ಬೇಕು ?

ರೊಟ್ಟಿ ಬುತ್ತಿ ಅದು ಜಮಾನ
ಬಿಟ್ಟು ಹಣ ತಿನ್ನುತ್ತಿದ್ದಾರೆ ಜನ
ರಟ್ಟೆ ಹೊಟ್ಟೆ ..
ಎಲ್ಲವೂ ಜೀರ್ಣ
ಹಿಡಿ ಮಣ್ಣು ಹಿಂಡಿದರೆ
ಹಿಡಿಯಲಾಗದ ಕೋಟಿ
ಮತ್ತೆ ಮತ್ತೆ ಲೂಟಿ

ಬರೀ ಲೆಖ್ಖಾಚಾರ
ಭೂವಿವಸ್ತ್ರ ಅತ್ಯಾಚಾರ
ಅಗೆದು ಬಗೆದು
ಬರಿದೋ ಬರಿದು
ರಕ್ತ ಬೋರ್ - ಗರೆಯುತಿದೆ
ಕರುಳು ಉರುಳು
ಕತ್ತು ಕುತ್ತು
ಕಗ್ಗೊಲೆ..
ನೆಲಕ್ಕಿಲ್ಲಿಲ್ಲ ನೆಲೆ
ಜೀವಂತ ನೆಲದ ಮೇಲೆ
ಸಿಮೆಂಟಿನ ಸಮಾಧಿ !

ಬಾಯಿ ಮೊಸರು ?
ಮಣ್ಣು ಮುಕ್ಕಲು
ಕೈ ಕೆಸರಾಗಬೇಕಿಲ್ಲ ! 

Thursday, May 31, 2012

ಸಂಪದ ಸಾಲು ಪತ್ರಿಕೆಯಲ್ಲಿ ಪ್ರಕಟವಾದ ನನ್ನ 2 ಹೊಸ ಕವನ
ರಾತ್ರಿಯೆಂದರೆ !
=========

ರಾತ್ರಿಯೆಂದರೆ

ಬರೀ ಕತ್ತಲಲ್ಲ
ಬೆತ್ತಲಲ್ಲ
ಸುತ್ತ ಕಾಣುವ 
ಸತ್ತ ಜಗತ್ತಲ್ಲ 

ರಾತ್ರಿಯೆಂದರೆ 

ಬರೀ ಮೌನವಲ್ಲ
ನಿಶ್ಯಬ್ಧ ಗಾನವಲ್ಲ
ಹಗಲಿನ ಖೂನಿಯಲ್ಲ
ತೆವಲಿನ ತೇರಲ್ಲ

ರಾತ್ರಿಯೆಂದರೆ 

ಬರೀ ನಿದ್ದೆಯಲ್ಲ
ಬಚ್ಚಿಡುವ ಸುದ್ದಿಯಲ್ಲ
ಬೀಸಾಕುವ ರದ್ದಿಯಲ್ಲ
ಸ್ವಪ್ನ ಸೌಂದರ್ಯವಲ್ಲ

ರಾತ್ರಿಯೆಂದರೆ 

ಸೃಷ್ಠಿಯ ಕತೃ
ಮನಸ್ಸಿಗೆ ಭ್ರಾತೃ
ಅಳಲಿಗೆ ಸ್ರೋತೃ
ಎಚ್ಚರಿಸುವ ಶತ್ರು 

ರಾತ್ರಿಯೆಂದರೆ

ಅಮೂರ್ತ ಮೌನದೊಳಗಣ ಅರ್ಥ 
ಬೆಳಕ ಹೊತ್ತಿರುವ ಗರ್ಭ
ಹೆತ್ತು ಸಾಯುವ ತ್ಯಾಗಿ
ನಿತ್ಯ ಕಾಯುವ ಯೋಗಿ

ರಾತ್ರಿಯೆಂದರೆ 

ಅವಲೋಕನ
ಆರೋಹಣ , ಅವರೋಹಣ
ಭಿಕ್ಷೆ , ಪರೀಕ್ಷೆ
ನಾಳೆಯ ನಿರೀಕ್ಷೆ, ಪ್ರತೀಕ್ಷೆ 

ರಾತ್ರಿಯೆಂದರೆ

ಹಗಲಿನ ಮಿಥ್ಯವ 
ಹೇಳುವ 
ಬದುಕಿನ ಸತ್ಯ !ಚಾಟು -- ಅಟ್ಯಾಚು !
============

ಓ...

ಎಷ್ಟೊಂದು ಜನ ಪರದೆಯಾಚೆ
ದೂರ , ಹತ್ತಿರ ಪರಿಧಿಯೇ ಇಲ್ಲ
ಸಮಯದ ಪರಿವೆಯಿಲ್ಲ
ನೆಂಟರೋ... ಭಂಟರೋ
ಆಪ್ತರೋ .. ಅಪ್ರಾಪ್ತರೋ.!

ಕೆಂಪು , ನೀಲಿ ....
ಅರೇ ... ಮತ್ತೊಂದು ಅದೃಶ್ಯ
ಹತ್ತು ಹೆಲ್ಲೋ .. ಹಾಯ್
ಒಂದೆರಡು ಬಾಯ್ ..

ಕಣ್ಣಿಟ್ಟು ನೋಡು
ಕಣ್ಣನೆಟ್ಟು ನೋಡು
ಉಹೂ ಅದ್ಯಾವುದೂ ಬೇಕಿಲ್ಲ..
ಕಣ್ಣು.. ನೆಟ್ ನೋಡು
ಭಾವವೇನೋ.. ಭಾಷೆಯಷ್ಟೇ ..

ಮುಗುಳು ನಗು, ಮಿಗಿಲು ನಗು
ಸಿಗದ ಮುಗಿಲು ನಗು
ಲಿಪ್ಪಿನಲ್ಲೇ ಹುಟ್ಟಿದೆ ಪ್ರೀತಿ
ಆಚೆ ಯಾರೋ ಇಲ್ಲ ಭೀತಿ ..
ಸಿಟ್ಟು ಸೆಡವು, ದುಃಖ
ಎಲ್ಲಾ ಅಲ್ಲೆ ಅಕ್ಕ ಪಕ್ಕ
ಹಾಲ್ಟು ಮಾಡದ ಆಲ್ಟು
ಬದಲಾಗದ ಶಿಫ್ಟು
ನಿಯಂತ್ರಣವಿಲ್ಲದ control
ಒತ್ತರಿಸಿ ಬಂದ ಅಳುವಿಗೂ..
ಮತ್ತದೇ .. ಒತ್ತು ..

ಸೋಲಿಗೊಂದು ಸಾಂತ್ವನ
ಗೆಲುವಿಗೊಂದು ಶಹಭಾಷ್
ಸಂತೈಸುವ ಅಪ್ಪುಗೆ
ಪ್ರೀತಿಯ ಒಪ್ಪಿಗೆ
ಕಣ್ಣೀರು ಒರೆಸುವ ಕೈ
ಹರಿದರೂ ಸಿಗದು ಪರದೆಯಾಚೆ
ಮಿತ್ರರೋ.. ಮಿಥ್ಯವೋ
ಸತ್ತರೋ .. ಸತ್ಯವೋ..
ಸಲ್ಲಾಪ.. ಆಲಾಪ
ಎಷ್ಟು ಮಜಾ,.. ಎಷ್ಟು ನಿಜ.. ?
ನನ್ನದೂ ಜೈ, ನಿನ್ನದೂ ಜೈ..

ಹೆಚ್ಚೋ.. ಹುಚ್ಚೋ...
ಅಚ್ಚು ಮೆಚ್ಚು.. ಭ್ರಮೆಯ ಬದುಕು ....

Monday, April 16, 2012

ನೀಡು ಒಪ್ಪಿಗೆ

ನನ್ನ ಗೆಳತಿಯೊಬ್ಬಳು ಮಾತನಾಡುತ್ತಾ "ಅಯ್ಯೋ ನಿನ್ನ ಕವಿ ಭಾಷೆ ನಂಗೆ ಅರ್ಥ ಆಗಲ್ಲ ಕಣೋ" ಅಂದಾಗ ಮೊದಲೆರಡು ಸಾಲು ಹುಟ್ಟಿತು .. ಆಮೇಲೆ ಅದ್ಕೆ ಸ್ವಲ್ಪ ಪದಗಳ ಅಹಾರ ಹಾಕಿ ಬೆಳೆಸಿದೆ ...

ಚೆನ್ನಾಗಾಗಿದ್ದರೆ ಕ್ರೆಡಿಟ್ ಅವಳಿಗೆ ...

ಇಷ್ಟವಾಗದಿದ್ದರೆ ಹೊಣೆ ನಂದೆ ... ಹಾಗಂತ ರಾಜಿನಾಮೆ ಕೊಡುವುದಿಲ್ಲ :):)


ಕಿವಿ ಹಿಡಿದು ಹೇಳಲೇ ಕವಿಭಾಷೆಯ
ನವಿರಾಗಿ ಹೇಳಲೇ ನವ ಭಾವವ
ಸವಿಯಾಗಿ ಹೇಳಲೇ ಸಾವಿರ ಸಂಭ್ರಮ
ಸರಿಯಾಗಿ ಕೇಳೇ ಅದಕೆ ನೀನೇ ಕಾರಣ

ನವಿಲಾಗಿ ನಲಿಯುತಿದೆ ಮನಸು
ಅನುಮತಿ ಕೇಳಿಲ್ಲ ದಯಮಾಡಿ ಕ್ಷಮಿಸು
ಗರಿಗೆದರಿ ಗಗನಮುಖಿ, ತೋರದಿರು ಮುನಿಸು
ಒಲವಾಗಿರಬಹುದೇ.. ನೀನೇ ತಿಳಿಸು

ಬೇಕೇ ಶಿಕ್ಷೆ, ಕಾಯೋ ಪರೀಕ್ಷೆ
ತಪ್ಪಲ್ಲದಾ ತಪ್ಪಿಗೆ..
ಮನಸು ಮನಸಿನಾ ಅಪ್ಪುಗೆ
ಬೇಕು ತಾನೇ ಪ್ರೀತಿಗೆ ?
ಯಾಕೆ ನಿರೀಕ್ಷೆ,ಸಾಕು ಸಮೀಕ್ಷೆ
ಒಮ್ಮೆ,ಒಮ್ಮೆ ನೀಡು ಒಪ್ಪಿಗೆ

Thursday, March 1, 2012

ಹೆಸರೇ ಗೊತ್ತಿಲ್ಲ ಹುಡುಗಿ ಉಸಿರಾಗಿಬಿಟ್ಟೆಯಲ್ಲೇ !
ಅನಾಮಿಕೆ, ಆಗಂತುಕೆ , ಗೆಳತಿ, ಪ್ರೇಯಸಿ...

ಹೌದು ಏನಂತ ಕರೆಯಲಿ ನಿನ್ನ ? ಹೆಸರು ಗೊತ್ತಿಲ್ಲದಿದ್ದರೂ ನೀ ನನ್ನ ಮನದಲ್ಲಿ ಗೆಳತಿಯಾಗಿದ್ದೀಯ..ಪ್ರೇಯಸಿಯಾಗಿದ್ದೀಯ..ಸರ್ವಸ್ವವೆಂದರೆ ಸರಿಯಾಗಬಹುದೇನೋ ! ಆ ವಿಷಯ ಒತ್ತಟ್ಟಿಗಿರಲಿ; ಬಾನಲ್ಲಿ ಬಣ್ಣದೋಕುಳಿಯಾಡುತ್ತಿದ್ದ ಸಂಜೆ ಸೂರ್ಯನನ್ನು ಕಂಡಾಗ ನೀ ನೆನಪಾಗದಿರಲು ಸಾಧ್ಯವೇ ? ಮನದ ಬಾನಿನ ಮೇಲೆ ನಿನ್ನದೇ ಚಿತ್ತಾರ. ಭಾವನೆಗಳನ್ನು ಕೆಣಕುತ್ತಿವೆ ಬಣ್ಣಗಳು.. ನೆನಪುಗಳ ಕೆದಕುತ್ತಿವೆ ಬಣ್ಣಗಳು

ಆ ದಿನವೂ ಅಷ್ಟೇ , ಸಮುದ್ರದ ದಂಡೆಯ ಮೇಲೆ ಸುಮ್ಮನೇ ಅಡ್ಡಾಡುತ್ತಿದ್ದೆ ,ಮುಳುಗುವ ಸೂರ್ಯನ ನೋಡುತ್ತಾ ಏಕಾಂಗಿಯಾಗಿ ! ಪಶ್ಚಿಮಕ್ಕೆ ಜಾರುತ್ತಿದ್ದ ಸೂರ್ಯ ಬಾನೊಂದನ್ನೇ ಅಲ್ಲ ಸಮುದ್ರವನ್ನೂ ಕೆಂಪಗಾಗಿಸಿದ್ದ .ನನ್ನನ್ನೇ ಹಿಂಬಾಲಿಸುತ್ತಿದ್ದ ಹೆಜ್ಜೆಯ ಗುರುತನ್ನು ಕಂಡು ತೆರೆಗಳಿಗೆ ಅದೇನು ಸಿಟ್ಟೋ ಏನೋ , ಎಲ್ಲವನ್ನೂ ಅಳಿಸಿಬಿಡುತ್ತಿದ್ದವು.ನೆರಳು ಮಾತ್ರ ಅಲೆಯ ಹೊಡೆತಕ್ಕೂ ಸಿಗದೆ ಹಿಂಬಾಲಿಸುತ್ತಿತ್ತು. ಉಕ್ಕುಕ್ಕಿ ಬರಿತ್ತಿದ್ದ ಅಲೆಗಳು ಕಾಲನ್ನು ನೂಕುವ ಪ್ರಯತ್ನದಲ್ಲಿ ಸ್ವಲ್ಪ ಸಫಲವಾಗುತ್ತಿದ್ದವು, ಮತ್ತೂ ದೊಡ್ಡದಾಗಿ ಬರುತ್ತೇವೆಂದು ಶಪಥ ಮಾಡಿ ದೂರವಾಗುತ್ತಿದ್ದವು.ನನಗೋ ಮುತ್ತಿಟ್ಟಂತೆ ಅನ್ನಿಸುತ್ತಿತ್ತು. ಕೆಳಗಿನಿಂದ ಜಾರಿದ ಮರಳು ಸಣ್ಣಗೆ ಕಚಗುಳಿಯಿಡುತ್ತಿದ್ದವು. ಅದನ್ನು ಸವಿಯುವಾಗಲೇ ಅಲ್ಲವೇನೇ ನೀನು ಕಂಡಿದ್ದು !

ಅದೇನು ಗೀಚುತ್ತಿದ್ದೆಯೋ ಮರಳಿನಲ್ಲಿ..ನನ್ನ ನೋಡಿದವಳೇ ನಾಚಿದ್ದೆ. ಆ ಸೂರ್ಯ ನಿನ್ನ ಕೆನ್ನೆಯನ್ನೂ ಕೆಂಪಗಾಗಿಸಿದ್ದನಲ್ಲೇ ! ಅಲೆಗಳು ಅಳಿಸಿದರೂ ನೀ ಮತ್ತೆ ಮತ್ತೆ ಬರೆದು ಅಲೆಗಳನ್ನೇ ಅಣಕಿಸುತ್ತಿದ್ದೆಯಲ್ಲಾ.. ಇಷ್ಟವಾಗಿಬಿಟ್ಟೆ ಕಣೇ ನೀನು. ಆಕರ್ಷಣೆಯಿರಬಹುದು ! ನಿನ್ನ ತುಟಿಯಲ್ಲಿ ಮಾತ್ರ ಕಂಡೂ ಕಾಣದ ಮುಗುಳ್ನಗೆ . ಮುತ್ತಿನ ಹೊಳಪೆಲ್ಲಾ ನಿನ್ನ ಕಣ್ಣಲ್ಲೇ ಇತ್ತು, ರೆಪ್ಪೆ ಆ ಮುತ್ತಿಗೆ ಚಿಪ್ಪು ! ಹುಬ್ಬು ಸಂಜೆಯಲ್ಲಿ ಮೂಡಿದ ಕಾಮನಬಿಲ್ಲು. ನನ್ನ ನೋಟವೆದುರಿಸಲಾಗದ ನೀನು ದೃಷ್ಠಿ ಬದಲಿಸಿದ್ದೆ.

ಆ ಕ್ಷಣದಲ್ಲಿ ಅನ್ನಿಸಿದ್ದೇನು ಗೊತ್ತಾ ? ಈ ಕ್ಷಣ ಕಾಣೆಯಾಗದೇ ಹಾಗೆ ಇರಲಿ ಅಂತ ! ಕೆಂಪಾದ ಸೂರ್ಯ, ಕೆಂಪಾದ ಕಡಲು, ಕೆಂಪಾದ ಕೆನ್ನೆ ತಂಪಾಗಿಸಿತ್ತು ನನ್ನ ! ಮೂಗಿಗೆ ಮುತ್ತಿಡುತ್ತಿದ್ದ ಮುಂಗುರುಳು,ಮುತ್ತಿಡುಸುತಿದ್ದ ತೆಳುವಾದ ಗಾಳಿ, ಆಹ್ ಅದೆಷ್ಟು ಚಂದ ! ಅಲೆಗಳು ಇನ್ನಷ್ಟು ಜೋರಾಗಿ ಬರಲಿ ಅನ್ನಿಸುತ್ತಿತ್ತು. ನೀ ಬರೆದದ್ದೆಲ್ಲಾ ಹಾಗೇ ಅಳಿಸಿ ಹೋಗಬೇಕು, ನೀ ಮತ್ತೆ ಮತ್ತೆ ಬರೆಯಬೇಕು .. ನೋಡುತ್ತಾ ಇರಬೇಕು.. ನೀನು ಅಲ್ಲೇ ಇರಬೇಕು ಅಷ್ಟೇ ಆ ಕ್ಷಣ , ಮರುಕ್ಷಣ, ಕೊನೆ ಕ್ಷಣದವರೆಗೂ ..ಆಕರ್ಷಣೆಯ ಪರಮಾವಧಿ ..ಪ್ರೀತಿ ಎನ್ನುವುದು ಅತಿಶಯೋಕ್ತಿ ಅಲ್ಲವೇ ಆ ಸಮಯದಲ್ಲಿ !

ಅದೆಷ್ಟು ಪ್ರೀತಿಗೆ ಮುನ್ನುಡಿಯಾಗಿದ್ದನೋ ಸೂರ್ಯ , ಎಷ್ಟು ಕಣ್ಣಾ ಮುಚ್ಚಾಲೆ ನೋಡಿದ್ದನೋ ! ನನ್ನ ಮಾತನ್ನು ಕೇಳಿಯಾನೇ ? ಸುಮ್ಮನೇ ಮುಳುಗಿಬಿಟ್ಟ . ಕಾಣದ ಕತ್ತಲಲ್ಲಿ ಎಷ್ಟು ಬರೆದರೆಷ್ಟು , ನೀನೂ ಮರೆಯಾಗಿಬಿಟ್ಟೆ. ಮನದ ಸಮುದ್ರದಲ್ಲಿ ಸಾವಿರ ಅಲೆಗಳನ್ನೆಬ್ಬಿಸಿ . ಹೃದಯದಲ್ಲಿ ಕೆತ್ತಿದ ನಿನ್ನ ಮೂರ್ತಿ ಅಲೆಯೆದ್ದಷ್ಟೂ ಹೊಳೆಯುತ್ತಿತ್ತು ..ಚೂರೂ ಮಸುಕಾಗಲಿಲ್ಲ .. ಪ್ರೇಮಾಂಗಿಯಾಗಿ ಹೊರಟು ಬಂದಿದ್ದೆ

ಆದರೆ ಇಂದಿಗೆ ಅದು ಬರೀ ಆಕರ್ಷಣೆಯಾಗಿ ಉಳಿದಿಲ್ಲ;ಪ್ರೀತಿ ಎಂದು ಹೆಸರಿಡುವ ಕಾಲ ಬಂದಿದೆ. ಕತ್ತಲೆಯಲ್ಲಿ ನೆರಳೂ ಕೂಡ ಜೊತೆಯಿರುವುದಿಲ್ಲ , ಆದರೆ ಆ ಸಂಜೆಯಿಂದ ಇಂದಿನವರೆಗೂ ನೀನು, ನಿನ್ನ ನೆನಪು ಜೊತೆಯಲ್ಲೇ ಇದೆ ಎದೆಯಲ್ಲಿ ಭದ್ರವಾಗಿ.
ನೀನ್ಯಾರೋ, ನಿನ್ನ ಹೆಸರೇನೋ, ಮತ್ತೆ ಸಿಗುತ್ತೀಯೋ ಇಲ್ಲವೋ.. ಜಾತಿ, ಕುಲ , ಗೋತ್ರ ಉಹೂ ಅದ್ಯಾವುದೂ ಬೇಕಿಲ್ಲ ! ಅವತ್ತಿನ ಆಕರ್ಷಣೆಯ ಬೀಜ ಇವತ್ತು ಪ್ರೀತಿಯ ಹೆಮ್ಮರವಾಗಿದೆ ! ನಿನ್ನ ನೆನಪು ಮರದ ಹಸಿರಾಗಿದೆ ಸದಾ !ಸುತ್ತ ಸಮುದ್ರವೂ ಬೇಕಿಲ್ಲ, ಮತ್ತೆ ಸೂರ್ಯನೂ ಬೇಕಿಲ್ಲ.. ಸುಮ್ಮನೇ ಕಣ್ಮುಚ್ಚಿದರೆ ಕಾಣುವುದು ನೀನೇ ಕಣೆ !

ಬಾನಿನಲ್ಲಿ ಸಣ್ಣದೊಂದು ಬಣ್ಣ ಕಂಡರೂ ನೆನಪು ಗರಿಗೆದರಿ ಬಿಡುತ್ತದೆ , ಅಂತದ್ದರಲ್ಲಿ ಬಣ್ಣದೋಕುಳಿಯಾದ ಬಾನು ಕಂಡ ಇಂದು ನೆನಪು ನರ್ತನವನ್ನೇ ಶುರುಮಾಡಿಬಿಟ್ಟಿದೆ ! ಮತ್ತೆ ಸಿಗುತ್ತೀಯಾ ?? .. ಖಂಡಿತ ! ಬಾನಲ್ಲಿ ಒಂದೇ ಒಂದು ತಾರೆ ಮಿನುಗುತ್ತಿದೆ, ಒಂಟಿ ತಾರೆಯನ್ನು ನೋಡಿ ಬೇಕಿದ್ದನ್ನು ಬಯಸಿದರೆ ಸಿಗುತ್ತೆ ಎನ್ನುವ ನಂಬಿಕೆಯಿದೆ ; ನಾನ್ಯಾವತ್ತು ನಂಬಿದವನಲ್ಲ , ಏನನ್ನೂ ಕೇಳಿದವನೂ ಅಲ್ಲ. ಆದರೆ ನಿನ್ನ ನೆನೆಯುವ ಹೊತ್ತಿನಲ್ಲೇ ಒಂಟಿ ತಾರೆ ಕಾಣಿಸಿದ್ದು ಆಕಸ್ಮಿಕವೋ, ಕಾಕತಾಳೀಯವೋ .. ನಂಬಿಕೆ ಹುಟ್ಟಿಬಿಟ್ಟಿದೆ ನೋಡು .. ಇಂದು ಕೇಳಲೇ ಬೇಕು .. ಏನು ಗೊತ್ತೆನೇ ಹುಡುಗಿ !.. ನಿನ್ನನ್ನೇ ! ನಿನ್ನನ್ನು ಬಿಟ್ಟು ಬೇರೇನನ್ನು ಕೇಳಲೇ ! ?

ಹೆಸರೇ ಗೊತ್ತಿಲ್ಲ ನನಗೆ .. ಅದಾಗಲೇ ಉಸಿರಾಗಿಬಿಟ್ಟೆಯಲ್ಲೇ !..

ಬೇಗ ಸಿಗು .. ಕೊನೆ ಪಕ್ಷ ತಡವಾಗಿಯಾದರೂ ಸಿಗು ! ಇಲ್ಲದಿದ್ದರೆ ಬರೀ ನಿನ್ನ ನೆನಪಿನೊಂದಿಗೆ ಪೂರ್ತಿ ಜೀವನ ಕಳೆದುಬಿಟ್ಟೇನು ಎಚ್ಚರಿಕೆ !

ಕಾಯುತ್ತಿರುವ ನಿನ್ನವನಾ ?
ಪ್ರವಿ
9986227060


Tuesday, January 24, 2012

ಕತ್ತಲಿದ್ದಿದ್ದಕ್ಕೇ ಬೆಳಗಾದದ್ದು !

22 ಜನವರಿ ಭಾನುವಾರದಂದು ವಿಜಯ ಕರ್ನಾಟಕದ ಲವಲವಿಕೆಯಲ್ಲಿ ಪ್ರಕಟವಾದ ನನ್ನ ಬರಹ .. ಲಹರಿ...


ಚಳಿಗೆ ದೂಳನ್ನು ಹೊದ್ದು ಮಲಗಿದ ರೋಡು ಮುದುಡಿ ಎಂದಿಗಿಂತ ಎರಡಡಿ ಸಣ್ಣದಾಗಿದೆ. ಪಕ್ಕದಲ್ಲೇ ದಂಡಿಯಾಗಿ ಬೆಳೆದ ಲಂಡನ್ ಗಿಡಗಳು ಒಂದನ್ನೊಂದು ತಬ್ಬಿಕೊಂಡು ಅಲ್ಲಾಡದೆ ನಿಂತಿವೆ ,ಮುತ್ತಿಡುತ್ತಿದ್ದ ಮಂಜಿನ ಹನಿಗಳಿಗೆ ಸೊಪ್ಪು ಹಾಕದೇ .ದೂರದಲ್ಲಿ ಒಂಟಿಯಾಗಿದ್ದ ಗುಲಾಬಿ ಮೊಗ್ಗೊಂದು ಸಣ್ಣಗೆ ಅದುರುತ್ತಿದೆ.


ರಾತ್ರಿ ಪಾಳಯದಲ್ಲಿದ್ದ ಹಾವುಗಳು ಮಲಗಿದ್ದ ರೋಡಿಗೆ ತೊಂದರೆ ಕೊಡಲು ಇಷ್ಟವಿಲ್ಲದೆ ಧೂಳಿನಲ್ಲಿ ಸದ್ದಾಗದಂತೆ ತೆವಳುತ್ತಿದೆ.ದಾರಿಯ ಮಧ್ಯೆ ಸಣ್ಣ ತೆವಳು ದಾರಿ !.ಕಾಡು ಪ್ರಾಣಿಗಳಿಗೆ ರಾತ್ರಿ ತುಂಬಾ ಚಿಕ್ಕದು; ಅರ್ಧ ಗದ್ದೆ ಹಾಳು ಮಾಡುವುದರೊಳಗೆ, ಹತ್ತು ಬಾಳೆಗಿಡ ಬಿಡ ಕೀಳುವುದರೊಳಗೆ ಮುಕ್ಕಾಲು ರಾತ್ರಿ ಮುಗಿದು ಹೋಗಿತ್ತು. ಉಳಿದದ್ದು ನಾಳೆ ನಮಗೇ ತಾನೆ ಎನ್ನುವ ಹಮ್ಮಿನೊಂದಿಗೆ ಹೊರಟು ನಿಂತ ಪ್ರಾಣಿಗಳಿಗೆ ತಾನೇ ಬೆಚ್ಚಿದ ಬೆರ್ಚಪ್ಪ "ನಮಸ್ಕಾರ ಪುನಃ ಬನ್ನಿ" ಎಂದು ಕೈ ಬೀಸುತ್ತಿರುವಂತೆ ಭಾಸವಾಗುತ್ತಿದೆ.


ತನಗೆ ಬೇಕಿದ್ದ ಅಕ್ಕಿ ಕಾಳುಗಳನ್ನೆಲ್ಲಾ ಡಬ್ಬಿಯಲ್ಲಿ ಹಾಕಿ ಮುಚ್ಚಿಟ್ಟ ಯಜಮಾನಿಯ ಮೇಲಿನ ಕೋಪದಿಂದ ಇಲಿಯೊಂದು ಹಳೆಯ ಬಟ್ಟೆಯ ಗಂಟನ್ನು ಸೇರಿಕೊಂಡಿತ್ತು . ಸಣ್ಣಗೆ ಬಟ್ಟೆಯನ್ನು ಕೊಚ್ಚಿ ಕೋಪ ಶಮನ ಮಾಡುವ ಪ್ರಯತ್ನದಲ್ಲಿ ಮಗ್ನವಾಗಿತ್ತು. ಯಜಮಾನಿಯ ಪಕ್ಕದಲ್ಲೇ ಹೊದಿಕೆಯ ಬದಿಯಲ್ಲಿ ಮಲಗಿದ್ದ ಬೆಕ್ಕಿಗೆ ತನ್ನ ಶಕ್ತಿ ಪ್ರದರ್ಶಿಸುವ ತವಕ. ಕಿರ್ ಕಿರ್ ಶಬ್ದ ಬಂದತ್ತ ಸಣ್ಣಗೆ ಕಣ್ಣು ಬಿಟ್ಟು ನೋಡಿ ಗುರಿಯನ್ನು ಸಿದ್ದಮಾಡಿಕೊಂಡು ಗಬಕ್ಕನೆ ಹಾರಿ ಇಲಿಯ ಕುತ್ತಿಗೆಗೇ ಬಾಯಿ ಹಾಕಿತ್ತು. ಇಲಿಯ ಕೋಪ ಮತ್ತು ಜೀವ ಎರಡೂ ತಣ್ಣಗಾಗಿತ್ತು. ಅರ್ಧ ತಿಂದು ಅರ್ಧ ಯಜಮಾನಿಯ ಪಕ್ಕದಲ್ಲೇ ಇಟ್ಟು ಏಳುವುದನ್ನೇ ಕಾಯುತ್ತಿತ್ತು. ಸಾಧನೆಗೆ ಬೆನ್ನು ತಟ್ಟುವವರು ಬೇಡವೇ ..?


ಆಗಲೇ ಕರಗುತ್ತಿದ್ದ ಚಂದ್ರನಿಗೆ ಸಡ್ಡು ಹೊಡೆಯುತ್ತಾ ಮೂಡಿ ಬಂದ ಬೆಳ್ಳಿ ಕೋಳಿಗೆ ಅದೇನು ಸೂಚನೆ ಕೊಟ್ಟಿತೋ ಎನೋ , ಬುಟ್ಟಿಯೊಳಗೆ ಬೆಚ್ಚಗೆ ಮಲಗಿದ್ದ ಕೋಳಿ ಗೇಣುದ್ದ ಕೊಕ್ಕನ್ನು ಮಾರುದ್ದ ಮಾಡಿ ಕೊ ಕೊ ಕ್ಕೊ ಕೋ ಎಂದು ಕೂಗಲಾರಂಬಿಸಿತು ; ಮರಿಗಳು ಮಾತ್ರ ಮಿಸುಕಾಡಲಿಲ್ಲ ಮನುಷ್ಯರಂತೆ


ಕೋಳಿಯ ಕೂಗನ್ನು ಕೇಳಿದ ಸೂರ್ಯ ಪೂರ್ವದಲ್ಲಿ ಮೆಲ್ಲನೆ ಕಣ್ಣು ಬಿಡಲಾರಂಬಿಸಿದ, ನಿನ್ನೆಯಷ್ಟೇ ಗರ್ಭಧರಿಸಿದ್ದ ಗುಲಾಬಿ ಗಿಡಕ್ಕೆ ಅದಾಗಲೇ ಪ್ರಸವ ವೇದನೆ !ಮೊಗ್ಗಿಗೆ ಅರಳುವ ತವಕ.ಚಳಿ ಹೆಚ್ಚಾದ ಸೂರ್ಯ ಕೂಡಾ ಮರದ ಮರೆಯಲ್ಲಿ ಅಡಗಿ ಅಡಗಿ ಏಳುವ ಪ್ರಯತ್ನ ಮಾಡುತ್ತಿದ್ದಾನೆ :ಚಳಿಗಾಲದಲ್ಲಿ ಸೂರ್ಯನೂ ಸೋಮಾರಿ. ಸಿಕ್ಕ ಸಿಕ್ಕವರನ್ನು ತಬ್ಬಿ ಮಲಗಿದ್ದ ಮಂಜಿನ ಹನಿಗಳಿಗೆ ಮಾತ್ರ ಪ್ರಣಯ ಭಂಗ.ಹುಲ್ಲು ಹಾಸಿನ ಜೇಡರ ಬಲೆಯಲ್ಲಿ ಮೆತ್ತಗೆ ಕುಳಿತಿದ್ದ ಹನಿಗಳು ಸೂರ್ಯ ಕಿರಣಗಳನ್ನು ಪ್ರತಿಫಲಿಸಿ ವಾಪಾಸು ಕಳಿಸುವ ವ್ಯರ್ಥ ಪ್ರಯತ್ನ ಮಾಡುತ್ತಿವೆ .ಅಪ್ಪಿ ಅನುಭವಿಸಿದ ರಸಗಳಿಗೆಗಳನ್ನು ನೆನೆದು ಒಲ್ಲದ ಮನಸ್ಸಿನಿಂದ ಕರಗುತ್ತಿವೆ.ಮನೆಯ ಮಾಡಿನ ಹಂಚಿನ ಸಂದಿಯಿಂದ,ಅಟ್ಟದಲ್ಲಿ ಹಾಸಿದ ಹುಲ್ಲಿನ ಮೇಲಿನಿಂದ, ಗುಲಾಬಿಯ ಮುಳ್ಳಿನ ತುದಿಯಿಂದ , ಮಲ್ಲಿಗೆಯ ಮರೆಯಿಂದ , ಎಳಸು ಎಲೆಗಳಿಂದ ಒಂದೊಂದೇ ಹನಿ ಮರೆಯಾಗುತ್ತಿದೆ. ಎಲ್ಲೆಲ್ಲೊ ಸಣ್ಣಗೆ ಹೊಗೆಯೆದ್ದ ರೀತಿ ತೊರುತ್ತಿದೆ. ಸೂರ್ಯನ ಮೇಲೆ ಮುನಿಸಿಕೊಂಡು ಉರಿದು ಬೀಳುತ್ತಿವೆಯೇನೊ ! ಗಿಡ ಮರ ಭೂಮಿಗೆ ಹಗುರಾದ ಅನುಭವ !.ರವಿಯ ಆಗಮನಕ್ಕೆ ಬೆತ್ತಲಾಗಿ ಮೈಯೊಡ್ಡಿ ನಿಂತಿವೆ.

ಸೂರ್ಯ
ರಶ್ಮಿಗೆ ಪುಳಕಗೊಂಡ ಒಂದೊಂದೇ ಹೂವುಗಳು ಅವನನ್ನೇ ತದೇಕ ದೃಷ್ಠಿಯಿಂದ ನೋಡಲಾರಂಬಿಸಿದವು. ಗಿಡಕ್ಕೆ ಸಾರ್ಥಕತೆಯ ಭಾವ. ಅದೆಲ್ಲಿದ್ದವೋ ದುಂಬಿಗಳು ಕೇಳಿಯೂ ಕೇಳಿಸದಂತೆ ಝೇಂಕಾರ ಮಾಡುತ್ತ ಹೂವಿನತ್ತ ದಾಂಗುಡಿಯಿಟ್ಟವು, ಅರಳಿದ್ದೇ ತಮಗೇನೋ ಎನ್ನುವಂತೆ. ನೋವಾಗದ ಹಾಗೆ ರೆಕ್ಕೆ ಬಡಿಯುತ್ತಲೇ ಮಧುವ ಹೀರಲಾರಂಬಿಸಿದವು. ಮೇಲೆ ಕೂತು ಹೂವು ಉದುರಿ ಹೊದರೆ ಎನ್ನುವ ಭಯ ಕಾಡುತ್ತಿರುವಂತೆ ಭಾಸವಾಗುತ್ತಿತ್ತು. ಮೃದು ಹೂವಿನ ತುಂಬಾ ಮಧು. ಆಕರ್ಷಣೆಯೋ ,ಆಲಿಂಗನವೋ, ಅವಲಂಬನೆಯೋ.. ಪ್ರತಿರೋಧ ಒಡ್ಡದೇ ಹೂವೂ ಕುಷಿ ಪಡುತ್ತಿತ್ತು.


ತನಗಿಂತ ಮೊದಲೆದ್ದ ಕೋಳಿಯನ್ನು ನೋಡಿ ಕಾಗೆಗೆ ಸಣ್ಣ ಅಸೂಯೆ ಶುರುವಾಗಿ ಕಾ ಕಾ ಎಂದು ಕೂಗಲು ಶುರುಮಾಡಿತ್ತು. ಕಾಗೆಯ ಕೂಗನ್ನು ಕೇಳಲಾಗದ ಉಳಿದ ಹಕ್ಕಿಗಳು ಎದ್ದು ಚಿಲಿಪಿಲಿ ಶುರುಮಾಡಿದವು. ನಿಶ್ಶಬ್ಧವಾಗಿ ನಿದ್ದೆ ಮಾಡುತ್ತಿದ್ದ ರೋಡು ಶಬ್ದಕ್ಕೆ ಅಂಜಿಪಕ್ಕನೇ ಎದ್ದಿತ್ತು.ತಬ್ಬಿ ನಿಂತ ಲಂಡನ್ ಗಿಡಗಳು ರೋಡನ್ನು ನೋಡಿ ನಾಚಿ ಸಡಿಲಗೊಂಡವು.


ರಾತ್ರಿಯಿಡೀ ಪ್ರಾಣಿಗಳ ಕಾಟಕ್ಕೆ ಕೂಗಿ ಸುಸ್ತಾಗಿ ಹರಕು ಗೋಣಿ ಚೀಲದ ಮಧ್ಯದಲ್ಲಿ ಮುದುಡಿ ಉರುಟಾಗಿ ಮಲಗಿದ ನಾಯಿ ಎದ್ದು ಸೂರ್ಯ ನಮಸ್ಕಾರ ಮಾಡಿ ಒಂದು ಸುತ್ತು ಹಾಕಿ ಮತ್ತೆ ಶವಾಸನಕ್ಕೆ ಶರಣಾಯಿತು. ಬಾಲ ಬೀಸುವುದನ್ನೂ ಮರೆತು ಮಲಗಿದ್ದ ದನಕ್ಕೆ ಕರುವಿನ ನೆನಪು ಬಂದಿದ್ದೇ ಕೆಚ್ಚಲು ಕಟ್ಟಿ ಎದ್ದು ಅಂಬಾ ಎಂದು ಕೂಗಲಾರಂಬಿಸಿತು,ಕ್ಷಣದಲ್ಲಿ ಕೊಟ್ಟಿಗೆ ಚಟುವಟಿಕೆಯ ಗೂಡಾಗಿತ್ತು. ಅಮ್ಮನ ಕರೆಗೇ ಕಾಯುತ್ತಿದ್ದ ಕರು ಅಂಬಾ ಕೇಳುತ್ತಲೇ ಕಟ್ಟಿದ ಹಗ್ಗವನ್ನೂ ಲೆಖ್ಖಿಸದೇ ಜೀಕುತ್ತಿತ್ತು.


ಗಡಿಯಾರದ, ಕೋಳಿಯ ಕೂಗಿನ ಹಂಗಿಲ್ಲದ ಅಮ್ಮ ಅದಾಗಲೇ ಎದ್ದಾಗಿತ್ತು . ಎದ್ದ ತಕ್ಷಣ ಮುಖ ದರ್ಶನ ಮಾಡಿಸಿದ ಬೆಕ್ಕಿಗೆ ಬೈದರೂ, ಅದರ ಬಾಯಲ್ಲಿದ್ದ ಇಲಿಯ ಅವಶೇಷವನ್ನು ನೋಡಿ ರಾತ್ರಿ ಇಲಿ ಹಾವಳಿ ಬೆಕ್ಕಿನ ದೆಸೆಯಿಂದ ಕಮ್ಮಿಯಾಗುತ್ತಿದೆಯೆಂದು ಕುಷಿಯಾದಳು. ಅಮ್ಮನ ಮಂದಹಾಸ ನೋಡಿದೊಡನೆಯೇ ಬೆಕ್ಕಿಗೆ ಒಂದು ಲೋಟ ಹಾಲು ಖಾತರಿಯಾಗಿ ಉಳಿದರ್ಧ ಇಲಿ ಕಚ್ಚಿಕೊಂಡು ಹುಲಿಯ ಗಾಂಭೀರ್ಯದಲ್ಲಿ ಹೊರ ನೆಡೆದಿತ್ತು.ಸೂರ್ಯ ತಡವಾದರೂ, ತಡವಾಗದ ಅಮ್ಮ ಅದಾಗಲೇ ಕೆಲಸಕ್ಕೆ ಕೈ ಹಾಕಿಯಾಗಿತ್ತು .ಹೊಸಲು ತೊಳೆದು, ಬಾಗಿಲು ಸಾರಿಸಿ ಸೂರ್ಯನ ಸ್ವಾಗತಕ್ಕೆ ರಂಗವಲ್ಲಿಯಿಟ್ಟಾಗಿತ್ತು. ಸೌದಿ ಒಲೆಯ ಎಷ್ಟು ಊದಿದರೂ ಉರಿಯದ ಬೆಂಕಿ ಹತ್ತಿಸುವ ಪ್ರಯತ್ನಕ್ಕೆ ಚಳಿ ಹೆದರಿ ಓಡಿತ್ತು.ಇನ್ನು ಊದುವುದು ಸಾಧ್ಯವೇ ಇಲ್ಲ ಎಂದು ಕೈ ಬಿಟ್ಟಾಗ ಅದ್ಯಾವ ಮಾಯದಲ್ಲೋ ಬೆಂಕಿ ಸಣ್ಣಗೆ ಹೊತ್ತಿತ್ತು ,ಚಳಿಯನ್ನು ತಾನೂ ತಡೆಯಲು ಸಾಧ್ಯವಿಲ್ಲ ಎನ್ನುವಂತೆ. ಅಂಬಾ ಕೂಗಿಗೆ ಅಮ್ಮನ ಕರುಳು ಚುರುಕ್ ಎಂದು ತನ್ನ ಮಕ್ಕಳ ನೆನಪಾಗಿ ಕೊಟ್ಟಿಗೆ ಚಾಕರಿಗೆ ಸಿದ್ದವಾದಳು.


ಸಾವಿರ ಸಾವಿರ ಇಂಥಾ ಬೆಳಗನ್ನು ನೋಡಿದ ಅಮ್ಮನಿಗೆ ಇದೇನೂ ಹೊಸತಾಗಿರಲಿಲ್ಲ , ಸವಿಯುವಷ್ಟು ಸಮಯವೂ ಇರಲಿಲ್ಲ. ಎರಡು ರಗ್ಗು,ಎರಡು ಕಂಬಳಿ ಹೊದ್ದು ಮಲಗಿದ ಮಗನಿಗೆ , ಅಷ್ಟೇ ಹೊದ್ದು ತೂಕಡಿಸಿ ಹತ್ತು ಹದಿನೈದು ಪುಸ್ತಕ ಎದುರಿಗಿಟ್ಟುಕೊಂಡು ಓದುತ್ತಿದ್ದ ಮಗಳಿಗೂ ಇದು ಕೇಳಿಯೂ ತಿಳಿಯದ ವಿಚಾರ !


ಅವರಿಗೆ ಗೊತ್ತಿರುವುದು ಕಾಫಿಯ ನಂತರದ ಬೆಳಗು ಮಾತ್ರ, ಕಾಫಿಯ ಹಿಂದಿರುವ ಅಮ್ಮನ ಕತ್ತಲು ಅಮ್ಮನಿಗೇ ಗೊತ್ತು !


Wednesday, January 18, 2012

ಹೇಳದೇ ಹೋಗು ಕಾರಣ

ಭಾರೀ ಸಮಯದ ನಂತರ ಬ್ಲಾಗಿನಲ್ಲಿ .. ಹತ್ತಾರು ಬರೆದೂ ಇಲ್ಲಿಗೆ ಬರದಿರಲು ಕಾರಣ ಹಲವಾರು.. :)
ಅರಗಿಸಿಕೊಳ್ಳಲಾರೆ ನಾ..
ಹೇಳದೇ ಹೋಗು ಕಾರಣ !


ಒಳಗೆ ಉರಿವ ಒಲವ ಭಾದೆ
ಹರಿದು ಬಂತು, ತಡೆಯದಾದೆ
ಅಳಿದ ಮೇಲೆ ನಿನ್ನ ಪ್ರೀತಿ
ಅಳುವು ತಾನೆ ನನ್ನ ಸಾಥಿ !
ಕೆಳಗೆ ಬಿದ್ದ ಹನಿಯ ತುಂಬಾ
ಹೊರಟು ನಿಂತ ನಿನ್ನ ಬಿಂಬ ..
ಅರಗಿಸಿಕೊಳ್ಳಲಾರೆ ನಾ..
ಹೇಳದೇ ಹೋಗು ಕಾರಣ !


ಕನಸಲ್ಲಿ ಬಾ ಎಂದೆ
ಕನಸಾದೆಯಲ್ಲೇ..
ವಶವಾಗು ಬಾ ಎಂದೆ
ವಿಷವಾದೆಯಲ್ಲೇ ..
ಅದ್ಯಾವ ಮೋಡಿ ಮರೆಸೀತು ನನ್ನ
ಅದೇಕೆ ಇಂತಾ ನಿರಾಕರಣ
ಅರಗಿಸಿಕೊಳ್ಳಲಾರೆ ನಾ..
ಹೇಳದೇ ಹೋಗು ಕಾರಣ !


ಸತ್ತು ಹೋಗಿದೆ ಮನಸು
ಅರ್ಥವಾಗದು ಏನೂ..
ವ್ಯರ್ಥವಾಗುವ ಮಾತು
ಸಾವಿರ ಸಾರಿ ಹೇಳಿದರೂನೂ
ಆದ ಗಾಯ ಮಾಯಬೇಕು
ಅಲ್ಲಿ ತನಕ ಕಾಯಬೇಕು
ಬಿಟ್ಟ ಮೇಲೆ ನೀನು ನನ್ನ
ಸುಮ್ಮನೇಕೆ ಕಾಲಹರಣ
ಅರಗಿಸಿಕೊಳ್ಳಲಾರೆ ನಾ..
ಹೇಳದೇ ಹೋಗು ಕಾರಣ !