Wednesday, March 30, 2011

ಒಂದು ಖುಷಿ ವಿಚಾರ

ನನ್ನ ಚೊಚ್ಚಲ ಕವನ ಸಂಕಲನ "ತೆರೆ ಬಾರದ ತೀರದಲ್ಲಿ ಮೂಡಿದ ಹೆಜ್ಜೆ ಗುರುತು" ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿಸಲು ಆಯ್ಕೆಯಾಗಿದೆ ಎಂದು ಹೇಳಲು ಖುಷಿಯಾಗುತ್ತಿದೆ. ಪ್ರಕಟಣಾ ಕಾರ್ಯಕ್ರಮದ ದಿನಾಂಕ ಇನ್ನು ನಿಗದಿಯಾಗಿಲ್ಲ.... ನಿಮ್ಮ ಪ್ರೋತ್ಸಾಹ ಎಂದಿನಂತೆ ಎಂದೆಂದೂ ಮುಂದುವರಿಯಲಿ... ಪುಸ್ತಕ ಪ್ರಿಂಟ್ ಆದ ಮೇಲೆ ಹೇಳುತ್ತೇನೆ... ಕೊಳ್ಳಲು ಮರಿಯಬೇಡಿ :).... ಕನ್ನಡಪ್ರಭದಲ್ಲಿ ಬಂದಿದ್ದನ್ನು ಲಗತ್ತಿಸಿದ್ದೇನೆ.... ಇನ್ನೂ ಖುಷಿಯ ವಿಚಾರವೆಂದರೆ ಗೆಳೆಯ ನಾಗರಾಜ್ ವೈದ್ಯನ ಕವನ ಸಂಕಲನವೂ ಆಯ್ಕೆಯಾಗಿದೆ.....



ಪ್ರೋತ್ಸಾಹವಿರಲಿ..


ಪ್ರೀತಿಯಿಂದ ಪ್ರವಿ

Tuesday, March 8, 2011

ಬೆಲೆ ಹೆಚ್ಚಿಸಿಕೊಂಡ ಗಾಂಧಿ ಬಡವನಾದ




ಒಂದು ಎರಡು ಐದು ರೂಪಾಯಿ
ನೋಟಿನಲ್ಲಿದ್ದ ಗಾಂಧೀಜಿ
ಕಳೆದು ಹೋಗಿದ್ದಾನೆ..
ನೋಟಿನೊಂದಿಗೆ....

ನೂರು ಐನೂರು ಸಾವಿರ
ಗಾಂಧಿ ಬೆಲೆ ಏರುತ್ತಿದೆ ಮುಗಿಲೆತ್ತರ
ಬಡವನಿಂದ ಬಹಳ ದೂರ
ಸಿಗದೆ ದೈನೇಸಿಯಾಗಿ ಕೈ ಚಾಚಿದವನು
ಗೊಣಗುತ್ತಿದ್ದಾನೆ..
"
ನೋಟಿಗೆ ಬರುವುದಕ್ಕೂ ಮೊದಲು
ನಮ್ಮವನಾಗಿದ್ದನಿವ ... "

ಕಟ್ಟು ಕಟ್ಟು ನೋಟಿನಲ್ಲಿ
ಕಟ್ಟಿ ಹಾಕಲಾಗಿದೆ..
ಬದಲಾದ ಕೈಗಳೆಷ್ಟೋ..
ಬಳಸಿ ಬಳಲಿಸಿದವರೆಷ್ಟೋ...
ಅದೇ ಹಳೇ ಸೋಡಾ ಗ್ಲಾಸಿನಲ್ಲಿ
ಸುಮ್ಮನೆ ನೋಡುತ್ತಿದ್ದಾನೆ
ದೃಷ್ಟಿಯಿಲ್ಲದವರಂತೆ..
ಕಪ್ಪು ಕನ್ನಡಕ ಹಾಕುವ
ಕಾಮಗಾರಿ ಭರದಿಂದ ಸಾಗಿದೆ...

ಬೊಚ್ಚು ಬಾಯಿಯ ಬಿಚ್ಚು
ನಗುವಿನಲ್ಲಿ ಕಂಡಿದ್ದು..
ಅಟ್ಟಹಾಸ ತಡೆಯಲಾಗದ ಅಸಹಾಯಕತೆ
ಅಟ್ಟಿಸಿ ಹೊರಟವರ ನೋಡಿ ನಿಟ್ಟುಸಿರು
ಗೆದ್ದಲು ಹಿಡಿದ ಕೋಲು
ದಪ್ಪ ಹರಳಿನ ಹಿಂದೆ
ದೃಷ್ಠಿ ಬತ್ತಿದ ಕಣ್ಣು
ಬೆಲೆ ಏರಿದಂತೆಲ್ಲಾ ಗಾಂಧಿ
ಬಡವನಾಗುತ್ತಿದ್ದಾನೆ...
ಇವನೀಗ ದಿವ್ಯ ಮೌನಿ..
ಗಾಂಧಿಗೂ ಗೊತ್ತು ಇದು ಗಾಂಧಿಕಾಲವಲ್ಲ !!!!