Tuesday, January 24, 2012

ಕತ್ತಲಿದ್ದಿದ್ದಕ್ಕೇ ಬೆಳಗಾದದ್ದು !

22 ಜನವರಿ ಭಾನುವಾರದಂದು ವಿಜಯ ಕರ್ನಾಟಕದ ಲವಲವಿಕೆಯಲ್ಲಿ ಪ್ರಕಟವಾದ ನನ್ನ ಬರಹ .. ಲಹರಿ...


ಚಳಿಗೆ ದೂಳನ್ನು ಹೊದ್ದು ಮಲಗಿದ ರೋಡು ಮುದುಡಿ ಎಂದಿಗಿಂತ ಎರಡಡಿ ಸಣ್ಣದಾಗಿದೆ. ಪಕ್ಕದಲ್ಲೇ ದಂಡಿಯಾಗಿ ಬೆಳೆದ ಲಂಡನ್ ಗಿಡಗಳು ಒಂದನ್ನೊಂದು ತಬ್ಬಿಕೊಂಡು ಅಲ್ಲಾಡದೆ ನಿಂತಿವೆ ,ಮುತ್ತಿಡುತ್ತಿದ್ದ ಮಂಜಿನ ಹನಿಗಳಿಗೆ ಸೊಪ್ಪು ಹಾಕದೇ .ದೂರದಲ್ಲಿ ಒಂಟಿಯಾಗಿದ್ದ ಗುಲಾಬಿ ಮೊಗ್ಗೊಂದು ಸಣ್ಣಗೆ ಅದುರುತ್ತಿದೆ.


ರಾತ್ರಿ ಪಾಳಯದಲ್ಲಿದ್ದ ಹಾವುಗಳು ಮಲಗಿದ್ದ ರೋಡಿಗೆ ತೊಂದರೆ ಕೊಡಲು ಇಷ್ಟವಿಲ್ಲದೆ ಧೂಳಿನಲ್ಲಿ ಸದ್ದಾಗದಂತೆ ತೆವಳುತ್ತಿದೆ.ದಾರಿಯ ಮಧ್ಯೆ ಸಣ್ಣ ತೆವಳು ದಾರಿ !.ಕಾಡು ಪ್ರಾಣಿಗಳಿಗೆ ರಾತ್ರಿ ತುಂಬಾ ಚಿಕ್ಕದು; ಅರ್ಧ ಗದ್ದೆ ಹಾಳು ಮಾಡುವುದರೊಳಗೆ, ಹತ್ತು ಬಾಳೆಗಿಡ ಬಿಡ ಕೀಳುವುದರೊಳಗೆ ಮುಕ್ಕಾಲು ರಾತ್ರಿ ಮುಗಿದು ಹೋಗಿತ್ತು. ಉಳಿದದ್ದು ನಾಳೆ ನಮಗೇ ತಾನೆ ಎನ್ನುವ ಹಮ್ಮಿನೊಂದಿಗೆ ಹೊರಟು ನಿಂತ ಪ್ರಾಣಿಗಳಿಗೆ ತಾನೇ ಬೆಚ್ಚಿದ ಬೆರ್ಚಪ್ಪ "ನಮಸ್ಕಾರ ಪುನಃ ಬನ್ನಿ" ಎಂದು ಕೈ ಬೀಸುತ್ತಿರುವಂತೆ ಭಾಸವಾಗುತ್ತಿದೆ.


ತನಗೆ ಬೇಕಿದ್ದ ಅಕ್ಕಿ ಕಾಳುಗಳನ್ನೆಲ್ಲಾ ಡಬ್ಬಿಯಲ್ಲಿ ಹಾಕಿ ಮುಚ್ಚಿಟ್ಟ ಯಜಮಾನಿಯ ಮೇಲಿನ ಕೋಪದಿಂದ ಇಲಿಯೊಂದು ಹಳೆಯ ಬಟ್ಟೆಯ ಗಂಟನ್ನು ಸೇರಿಕೊಂಡಿತ್ತು . ಸಣ್ಣಗೆ ಬಟ್ಟೆಯನ್ನು ಕೊಚ್ಚಿ ಕೋಪ ಶಮನ ಮಾಡುವ ಪ್ರಯತ್ನದಲ್ಲಿ ಮಗ್ನವಾಗಿತ್ತು. ಯಜಮಾನಿಯ ಪಕ್ಕದಲ್ಲೇ ಹೊದಿಕೆಯ ಬದಿಯಲ್ಲಿ ಮಲಗಿದ್ದ ಬೆಕ್ಕಿಗೆ ತನ್ನ ಶಕ್ತಿ ಪ್ರದರ್ಶಿಸುವ ತವಕ. ಕಿರ್ ಕಿರ್ ಶಬ್ದ ಬಂದತ್ತ ಸಣ್ಣಗೆ ಕಣ್ಣು ಬಿಟ್ಟು ನೋಡಿ ಗುರಿಯನ್ನು ಸಿದ್ದಮಾಡಿಕೊಂಡು ಗಬಕ್ಕನೆ ಹಾರಿ ಇಲಿಯ ಕುತ್ತಿಗೆಗೇ ಬಾಯಿ ಹಾಕಿತ್ತು. ಇಲಿಯ ಕೋಪ ಮತ್ತು ಜೀವ ಎರಡೂ ತಣ್ಣಗಾಗಿತ್ತು. ಅರ್ಧ ತಿಂದು ಅರ್ಧ ಯಜಮಾನಿಯ ಪಕ್ಕದಲ್ಲೇ ಇಟ್ಟು ಏಳುವುದನ್ನೇ ಕಾಯುತ್ತಿತ್ತು. ಸಾಧನೆಗೆ ಬೆನ್ನು ತಟ್ಟುವವರು ಬೇಡವೇ ..?


ಆಗಲೇ ಕರಗುತ್ತಿದ್ದ ಚಂದ್ರನಿಗೆ ಸಡ್ಡು ಹೊಡೆಯುತ್ತಾ ಮೂಡಿ ಬಂದ ಬೆಳ್ಳಿ ಕೋಳಿಗೆ ಅದೇನು ಸೂಚನೆ ಕೊಟ್ಟಿತೋ ಎನೋ , ಬುಟ್ಟಿಯೊಳಗೆ ಬೆಚ್ಚಗೆ ಮಲಗಿದ್ದ ಕೋಳಿ ಗೇಣುದ್ದ ಕೊಕ್ಕನ್ನು ಮಾರುದ್ದ ಮಾಡಿ ಕೊ ಕೊ ಕ್ಕೊ ಕೋ ಎಂದು ಕೂಗಲಾರಂಬಿಸಿತು ; ಮರಿಗಳು ಮಾತ್ರ ಮಿಸುಕಾಡಲಿಲ್ಲ ಮನುಷ್ಯರಂತೆ


ಕೋಳಿಯ ಕೂಗನ್ನು ಕೇಳಿದ ಸೂರ್ಯ ಪೂರ್ವದಲ್ಲಿ ಮೆಲ್ಲನೆ ಕಣ್ಣು ಬಿಡಲಾರಂಬಿಸಿದ, ನಿನ್ನೆಯಷ್ಟೇ ಗರ್ಭಧರಿಸಿದ್ದ ಗುಲಾಬಿ ಗಿಡಕ್ಕೆ ಅದಾಗಲೇ ಪ್ರಸವ ವೇದನೆ !ಮೊಗ್ಗಿಗೆ ಅರಳುವ ತವಕ.ಚಳಿ ಹೆಚ್ಚಾದ ಸೂರ್ಯ ಕೂಡಾ ಮರದ ಮರೆಯಲ್ಲಿ ಅಡಗಿ ಅಡಗಿ ಏಳುವ ಪ್ರಯತ್ನ ಮಾಡುತ್ತಿದ್ದಾನೆ :ಚಳಿಗಾಲದಲ್ಲಿ ಸೂರ್ಯನೂ ಸೋಮಾರಿ. ಸಿಕ್ಕ ಸಿಕ್ಕವರನ್ನು ತಬ್ಬಿ ಮಲಗಿದ್ದ ಮಂಜಿನ ಹನಿಗಳಿಗೆ ಮಾತ್ರ ಪ್ರಣಯ ಭಂಗ.ಹುಲ್ಲು ಹಾಸಿನ ಜೇಡರ ಬಲೆಯಲ್ಲಿ ಮೆತ್ತಗೆ ಕುಳಿತಿದ್ದ ಹನಿಗಳು ಸೂರ್ಯ ಕಿರಣಗಳನ್ನು ಪ್ರತಿಫಲಿಸಿ ವಾಪಾಸು ಕಳಿಸುವ ವ್ಯರ್ಥ ಪ್ರಯತ್ನ ಮಾಡುತ್ತಿವೆ .ಅಪ್ಪಿ ಅನುಭವಿಸಿದ ರಸಗಳಿಗೆಗಳನ್ನು ನೆನೆದು ಒಲ್ಲದ ಮನಸ್ಸಿನಿಂದ ಕರಗುತ್ತಿವೆ.ಮನೆಯ ಮಾಡಿನ ಹಂಚಿನ ಸಂದಿಯಿಂದ,ಅಟ್ಟದಲ್ಲಿ ಹಾಸಿದ ಹುಲ್ಲಿನ ಮೇಲಿನಿಂದ, ಗುಲಾಬಿಯ ಮುಳ್ಳಿನ ತುದಿಯಿಂದ , ಮಲ್ಲಿಗೆಯ ಮರೆಯಿಂದ , ಎಳಸು ಎಲೆಗಳಿಂದ ಒಂದೊಂದೇ ಹನಿ ಮರೆಯಾಗುತ್ತಿದೆ. ಎಲ್ಲೆಲ್ಲೊ ಸಣ್ಣಗೆ ಹೊಗೆಯೆದ್ದ ರೀತಿ ತೊರುತ್ತಿದೆ. ಸೂರ್ಯನ ಮೇಲೆ ಮುನಿಸಿಕೊಂಡು ಉರಿದು ಬೀಳುತ್ತಿವೆಯೇನೊ ! ಗಿಡ ಮರ ಭೂಮಿಗೆ ಹಗುರಾದ ಅನುಭವ !.ರವಿಯ ಆಗಮನಕ್ಕೆ ಬೆತ್ತಲಾಗಿ ಮೈಯೊಡ್ಡಿ ನಿಂತಿವೆ.

ಸೂರ್ಯ
ರಶ್ಮಿಗೆ ಪುಳಕಗೊಂಡ ಒಂದೊಂದೇ ಹೂವುಗಳು ಅವನನ್ನೇ ತದೇಕ ದೃಷ್ಠಿಯಿಂದ ನೋಡಲಾರಂಬಿಸಿದವು. ಗಿಡಕ್ಕೆ ಸಾರ್ಥಕತೆಯ ಭಾವ. ಅದೆಲ್ಲಿದ್ದವೋ ದುಂಬಿಗಳು ಕೇಳಿಯೂ ಕೇಳಿಸದಂತೆ ಝೇಂಕಾರ ಮಾಡುತ್ತ ಹೂವಿನತ್ತ ದಾಂಗುಡಿಯಿಟ್ಟವು, ಅರಳಿದ್ದೇ ತಮಗೇನೋ ಎನ್ನುವಂತೆ. ನೋವಾಗದ ಹಾಗೆ ರೆಕ್ಕೆ ಬಡಿಯುತ್ತಲೇ ಮಧುವ ಹೀರಲಾರಂಬಿಸಿದವು. ಮೇಲೆ ಕೂತು ಹೂವು ಉದುರಿ ಹೊದರೆ ಎನ್ನುವ ಭಯ ಕಾಡುತ್ತಿರುವಂತೆ ಭಾಸವಾಗುತ್ತಿತ್ತು. ಮೃದು ಹೂವಿನ ತುಂಬಾ ಮಧು. ಆಕರ್ಷಣೆಯೋ ,ಆಲಿಂಗನವೋ, ಅವಲಂಬನೆಯೋ.. ಪ್ರತಿರೋಧ ಒಡ್ಡದೇ ಹೂವೂ ಕುಷಿ ಪಡುತ್ತಿತ್ತು.


ತನಗಿಂತ ಮೊದಲೆದ್ದ ಕೋಳಿಯನ್ನು ನೋಡಿ ಕಾಗೆಗೆ ಸಣ್ಣ ಅಸೂಯೆ ಶುರುವಾಗಿ ಕಾ ಕಾ ಎಂದು ಕೂಗಲು ಶುರುಮಾಡಿತ್ತು. ಕಾಗೆಯ ಕೂಗನ್ನು ಕೇಳಲಾಗದ ಉಳಿದ ಹಕ್ಕಿಗಳು ಎದ್ದು ಚಿಲಿಪಿಲಿ ಶುರುಮಾಡಿದವು. ನಿಶ್ಶಬ್ಧವಾಗಿ ನಿದ್ದೆ ಮಾಡುತ್ತಿದ್ದ ರೋಡು ಶಬ್ದಕ್ಕೆ ಅಂಜಿಪಕ್ಕನೇ ಎದ್ದಿತ್ತು.ತಬ್ಬಿ ನಿಂತ ಲಂಡನ್ ಗಿಡಗಳು ರೋಡನ್ನು ನೋಡಿ ನಾಚಿ ಸಡಿಲಗೊಂಡವು.


ರಾತ್ರಿಯಿಡೀ ಪ್ರಾಣಿಗಳ ಕಾಟಕ್ಕೆ ಕೂಗಿ ಸುಸ್ತಾಗಿ ಹರಕು ಗೋಣಿ ಚೀಲದ ಮಧ್ಯದಲ್ಲಿ ಮುದುಡಿ ಉರುಟಾಗಿ ಮಲಗಿದ ನಾಯಿ ಎದ್ದು ಸೂರ್ಯ ನಮಸ್ಕಾರ ಮಾಡಿ ಒಂದು ಸುತ್ತು ಹಾಕಿ ಮತ್ತೆ ಶವಾಸನಕ್ಕೆ ಶರಣಾಯಿತು. ಬಾಲ ಬೀಸುವುದನ್ನೂ ಮರೆತು ಮಲಗಿದ್ದ ದನಕ್ಕೆ ಕರುವಿನ ನೆನಪು ಬಂದಿದ್ದೇ ಕೆಚ್ಚಲು ಕಟ್ಟಿ ಎದ್ದು ಅಂಬಾ ಎಂದು ಕೂಗಲಾರಂಬಿಸಿತು,ಕ್ಷಣದಲ್ಲಿ ಕೊಟ್ಟಿಗೆ ಚಟುವಟಿಕೆಯ ಗೂಡಾಗಿತ್ತು. ಅಮ್ಮನ ಕರೆಗೇ ಕಾಯುತ್ತಿದ್ದ ಕರು ಅಂಬಾ ಕೇಳುತ್ತಲೇ ಕಟ್ಟಿದ ಹಗ್ಗವನ್ನೂ ಲೆಖ್ಖಿಸದೇ ಜೀಕುತ್ತಿತ್ತು.


ಗಡಿಯಾರದ, ಕೋಳಿಯ ಕೂಗಿನ ಹಂಗಿಲ್ಲದ ಅಮ್ಮ ಅದಾಗಲೇ ಎದ್ದಾಗಿತ್ತು . ಎದ್ದ ತಕ್ಷಣ ಮುಖ ದರ್ಶನ ಮಾಡಿಸಿದ ಬೆಕ್ಕಿಗೆ ಬೈದರೂ, ಅದರ ಬಾಯಲ್ಲಿದ್ದ ಇಲಿಯ ಅವಶೇಷವನ್ನು ನೋಡಿ ರಾತ್ರಿ ಇಲಿ ಹಾವಳಿ ಬೆಕ್ಕಿನ ದೆಸೆಯಿಂದ ಕಮ್ಮಿಯಾಗುತ್ತಿದೆಯೆಂದು ಕುಷಿಯಾದಳು. ಅಮ್ಮನ ಮಂದಹಾಸ ನೋಡಿದೊಡನೆಯೇ ಬೆಕ್ಕಿಗೆ ಒಂದು ಲೋಟ ಹಾಲು ಖಾತರಿಯಾಗಿ ಉಳಿದರ್ಧ ಇಲಿ ಕಚ್ಚಿಕೊಂಡು ಹುಲಿಯ ಗಾಂಭೀರ್ಯದಲ್ಲಿ ಹೊರ ನೆಡೆದಿತ್ತು.ಸೂರ್ಯ ತಡವಾದರೂ, ತಡವಾಗದ ಅಮ್ಮ ಅದಾಗಲೇ ಕೆಲಸಕ್ಕೆ ಕೈ ಹಾಕಿಯಾಗಿತ್ತು .ಹೊಸಲು ತೊಳೆದು, ಬಾಗಿಲು ಸಾರಿಸಿ ಸೂರ್ಯನ ಸ್ವಾಗತಕ್ಕೆ ರಂಗವಲ್ಲಿಯಿಟ್ಟಾಗಿತ್ತು. ಸೌದಿ ಒಲೆಯ ಎಷ್ಟು ಊದಿದರೂ ಉರಿಯದ ಬೆಂಕಿ ಹತ್ತಿಸುವ ಪ್ರಯತ್ನಕ್ಕೆ ಚಳಿ ಹೆದರಿ ಓಡಿತ್ತು.ಇನ್ನು ಊದುವುದು ಸಾಧ್ಯವೇ ಇಲ್ಲ ಎಂದು ಕೈ ಬಿಟ್ಟಾಗ ಅದ್ಯಾವ ಮಾಯದಲ್ಲೋ ಬೆಂಕಿ ಸಣ್ಣಗೆ ಹೊತ್ತಿತ್ತು ,ಚಳಿಯನ್ನು ತಾನೂ ತಡೆಯಲು ಸಾಧ್ಯವಿಲ್ಲ ಎನ್ನುವಂತೆ. ಅಂಬಾ ಕೂಗಿಗೆ ಅಮ್ಮನ ಕರುಳು ಚುರುಕ್ ಎಂದು ತನ್ನ ಮಕ್ಕಳ ನೆನಪಾಗಿ ಕೊಟ್ಟಿಗೆ ಚಾಕರಿಗೆ ಸಿದ್ದವಾದಳು.


ಸಾವಿರ ಸಾವಿರ ಇಂಥಾ ಬೆಳಗನ್ನು ನೋಡಿದ ಅಮ್ಮನಿಗೆ ಇದೇನೂ ಹೊಸತಾಗಿರಲಿಲ್ಲ , ಸವಿಯುವಷ್ಟು ಸಮಯವೂ ಇರಲಿಲ್ಲ. ಎರಡು ರಗ್ಗು,ಎರಡು ಕಂಬಳಿ ಹೊದ್ದು ಮಲಗಿದ ಮಗನಿಗೆ , ಅಷ್ಟೇ ಹೊದ್ದು ತೂಕಡಿಸಿ ಹತ್ತು ಹದಿನೈದು ಪುಸ್ತಕ ಎದುರಿಗಿಟ್ಟುಕೊಂಡು ಓದುತ್ತಿದ್ದ ಮಗಳಿಗೂ ಇದು ಕೇಳಿಯೂ ತಿಳಿಯದ ವಿಚಾರ !


ಅವರಿಗೆ ಗೊತ್ತಿರುವುದು ಕಾಫಿಯ ನಂತರದ ಬೆಳಗು ಮಾತ್ರ, ಕಾಫಿಯ ಹಿಂದಿರುವ ಅಮ್ಮನ ಕತ್ತಲು ಅಮ್ಮನಿಗೇ ಗೊತ್ತು !






Wednesday, January 18, 2012

ಹೇಳದೇ ಹೋಗು ಕಾರಣ

ಭಾರೀ ಸಮಯದ ನಂತರ ಬ್ಲಾಗಿನಲ್ಲಿ .. ಹತ್ತಾರು ಬರೆದೂ ಇಲ್ಲಿಗೆ ಬರದಿರಲು ಕಾರಣ ಹಲವಾರು.. :)




ಅರಗಿಸಿಕೊಳ್ಳಲಾರೆ ನಾ..
ಹೇಳದೇ ಹೋಗು ಕಾರಣ !


ಒಳಗೆ ಉರಿವ ಒಲವ ಭಾದೆ
ಹರಿದು ಬಂತು, ತಡೆಯದಾದೆ
ಅಳಿದ ಮೇಲೆ ನಿನ್ನ ಪ್ರೀತಿ
ಅಳುವು ತಾನೆ ನನ್ನ ಸಾಥಿ !
ಕೆಳಗೆ ಬಿದ್ದ ಹನಿಯ ತುಂಬಾ
ಹೊರಟು ನಿಂತ ನಿನ್ನ ಬಿಂಬ ..
ಅರಗಿಸಿಕೊಳ್ಳಲಾರೆ ನಾ..
ಹೇಳದೇ ಹೋಗು ಕಾರಣ !


ಕನಸಲ್ಲಿ ಬಾ ಎಂದೆ
ಕನಸಾದೆಯಲ್ಲೇ..
ವಶವಾಗು ಬಾ ಎಂದೆ
ವಿಷವಾದೆಯಲ್ಲೇ ..
ಅದ್ಯಾವ ಮೋಡಿ ಮರೆಸೀತು ನನ್ನ
ಅದೇಕೆ ಇಂತಾ ನಿರಾಕರಣ
ಅರಗಿಸಿಕೊಳ್ಳಲಾರೆ ನಾ..
ಹೇಳದೇ ಹೋಗು ಕಾರಣ !


ಸತ್ತು ಹೋಗಿದೆ ಮನಸು
ಅರ್ಥವಾಗದು ಏನೂ..
ವ್ಯರ್ಥವಾಗುವ ಮಾತು
ಸಾವಿರ ಸಾರಿ ಹೇಳಿದರೂನೂ
ಆದ ಗಾಯ ಮಾಯಬೇಕು
ಅಲ್ಲಿ ತನಕ ಕಾಯಬೇಕು
ಬಿಟ್ಟ ಮೇಲೆ ನೀನು ನನ್ನ
ಸುಮ್ಮನೇಕೆ ಕಾಲಹರಣ
ಅರಗಿಸಿಕೊಳ್ಳಲಾರೆ ನಾ..
ಹೇಳದೇ ಹೋಗು ಕಾರಣ !