Tuesday, November 16, 2010

ಮುರಿದು ಮೌನ ಹಾಡು ಗಾನ


ಮನದ
ಮಾಮರದಲ್ಲಿ
ಅಡಗಿರುವ ಕೋಗಿಲೆಯೇ
ಮೌನವೇಕೇ? ನಿನಗೆ ಮೌನವೇಕೇ?

ರೆಂಬೆ ಕೊಂಬೆಯಲೂ ಚೆಲುವು ಚಿಗುರಿತ್ತು ಅಂದು
ಮರದ ತುಂಬೆಲ್ಲಾ ಹಸಿರಿನಾ ಸಿಂಧು
ಎಲೆಗಳ ಮರೆಯಿಂದ ಕುಹೂ ಕುಹೂ ಗಾನ
ಹಾಡಿದ್ದ ಕೋಗಿಲೆಯೇ ಇಂದೇಕೆ ಮೌನ?

ಮನದ
ಮಾಮರದಲ್ಲಿ...

ಪ್ರೀತಿ ಹರಿದಿತ್ತು ಧಮನಿ ಧಮನಿಯಲೂ
ಭೀತಿಯಿರದೇ.. ಅದು ಸಂತಸದಾ ಬಾಳು
ಕಣ ಕಣದಲ್ಲೂ ವಸಂತನಾ ಆಗಮನ
ಅಂದು ಹಾಡಿದ್ದ ನೀನು ಇಂದೇಕೆ ಮೌನ ?

ಮನದ
ಮಾಮರದಲ್ಲಿ...

ಬಂದೆಯಾಕೇ ಬಾಳಿನಲ್ಲಿ ಶಿಶಿರ
ನಿಲ್ಲಿಸಲು ನನ್ನ ಪ್ರೀತಿ ಉಸಿರ..
ಬೆತ್ತಲಾಗಿದೆ ಮರವೀಗ ಎಲೆ ಉದುರಿ
ಬತ್ತಿ ಹೋಗಿದೆ ಮನ ಪ್ರೀತಿ ಚದುರಿ..

ಮನದ ಮಾಮರದಲ್ಲಿ...

ಹಾಡಲಾರೆಯಾ ಕೋಗಿಲೆಯೇ ಒಂದು ಸಲ
ಹುಡುಕಿ ಬರುವಂತೆ ವಸಂತ ನಿನ್ನ ಮೂಲ
ಹಾಡು ನೀ ಮತ್ತೆ ಚಿಗುರುವಂತೆ ಮರದ ಎಲೆ
ಹಾಡು ನೀ ಮತ್ತೆ ಹುಟ್ಟುವಂತೆ ಪ್ರೀತಿ ಸೆಲೆ

ಮನದ ಮಾಮರದಲ್ಲಿ
ಅಡಗಿರುವ ಕೋಗಿಲೆಯೇ..
ಮೌನವೇನಾ?ಮುರಿದು ಹಾಡು ಗಾನ
Monday, October 25, 2010

ಕಲ್ಪನೆಯ ಪ್ರೀತಿಪಾತ್ರಳಿಗೆ ಒಂದು ಪ್ರೀತಿ ಪತ್ರಹಾಯ್
ಗೆಳತಿ,

ಹೇಗಿದ್ದೀಯಾ? ಚೆನ್ನಾಗಿದ್ದೀಯ ನನಗೆ ಗೊತ್ತು ,ಜಸ್ಟ್ ನಿನಗೆ ಫೋನ್ ಮಾಡಿನೇ ನಾನು ಪತ್ರ ಬರೆಯಲು ಕೂತಿದ್ದು. ಇದೇನಿದು ಹತ್ತು ನಿಮಿಷಕ್ಕೊಂದು ಮೆಸ್ಸೇಜ್ ಗಂಟೆಗೊಂದು ಕಾಲ್ ಮಾಡುವವನು ಪತ್ರ ಬರೆಯುತ್ತಿದ್ದಾನ ಎಂದು ಆಶ್ಚರ್ಯ ಪಡಬೇಡ. ತುಂಡು ತುಂಡು
ಮೆಸ್ಸೇಜ್ ನಲ್ಲಿ ತುಂಡು ತುಂಡಾಗಿ ನನ್ನ ಮನಸಿನ ಭಾವನೆಗಳನ್ನು ಹೇಳಲಿಕ್ಕೆ ಸರಿ ಕಾಣಿಸಲಿಲ್ಲ.ಫೋನಿನಲ್ಲೂಹೇಳಲು ಇಸ್ಟವಾಗಲಿಲ್ಲ,ಫೋನ್ ಮಾಡಿದರೆ ನಿನ್ನ ಮಾತನ್ನು ಕೇಳುತ್ತಾ ಇರಬೇಕು ಅನ್ನಿಸುತ್ತೆ. ಇಂಪಾದ ದನಿ ಕೇಳಿದಸ್ಟೂಚಂದ. ಅದಕ್ಕೇ ಬೆರೇನನ್ನೂ ಹೇಳದೇ ಸುಮ್ಮನಿದ್ದುಬಿಡುವುದು.

ಹೇಯ್ ಪತ್ರ ಬರಿತಾ ಇರೋದು ಯಾಕೆ ಗೊತ್ತಾ? ನಾನು ಜಸ್ಟ್ ಜಡಿ ಮಳೆಯಲ್ಲಿ ತೋಯ್ದು ಬಂದು ಫ್ರೆಶ್ ಆದೆ.ನೀನದೆಸ್ಟುನೆನಪಾದೆ
ಗೊತ್ತಾ? ಜೊತೆಯಿರಬೇಕಿತ್ತು ಕಣೇ ! ಬೆಳ್ಳಗೆ ಹೊಳೆಯುತ್ತಿದ್ದ ಚಂದ್ರನನ್ನು ಕಾರ್ಮೋಡ ಕವಿದಾಗ ಧೋ ಎಂದು ಮಳೆ , ಚಂದ್ರನೇ ಅಳುತ್ತಿದ್ದಾನೋ ಎನ್ನುವಂತೆ.ನಿನ್ನನ್ನು ಮಿಸ್ ಮಾಡಿಕೊಂಡ ನನ್ನ ಕಣ್ಣಲ್ಲೂ ನೀರು, ನೀ ಜೊತೆಯಿಲ್ಲವಲ್ಲ ಎನ್ನುವದುಃಖಕ್ಕೆ ಇರಬೇಕು, ಕಾರಣ ನನಗೂ ಗೊತ್ತಾಗಲಿಲ್ಲ. ಕಣ್ಣೀರು ಬಂದಿದ್ದು ನನ್ನ ಮನಸ್ಸಿಗೆ ಗೊತ್ತಾಯಿತೇ ಹೊರತು ಜೋರು ಮಳೆಹನಿಯಲ್ಲಿ ಕೆನ್ನೆಗೆ ಅನುಭವವಾಗಲಿಲ್ಲ. ಆದರೆ ನಿನ್ನ ಬೆಟ್ಟದಸ್ಟು ಪ್ರೀತಿ ನೆನೆದಾಗ ತುಟಿಯಂಚಿನಲ್ಲಿ ಹೂ ನಗೆ ಬಂದಿದ್ದು ಮಾತ್ರಸುಳ್ಳಲ್ಲ. ಮಿಂಚು ಕೋರೈಸಿ ನಗುವಿನ ಹೊಳಪೇರಿಸಿತ್ತು.ಮೆಲ್ಲನೆ ಚಂದ್ರನೂ ಹೊರ ಬಂದು ನನಗೆ ಸಾಥ್ ನೀಡಿದ್ದ, ಜೊತೆನೇನೆಡೆದಿದ್ದ. ಮಳೆ ತುಂತುರಿಗೆ ಇಳಿದಿತ್ತು.

ರೂಮ್ ಸೇರುವ ಹೊತ್ತಿಗಾಗಲೇ ಮಳೆಯಿಂದ ಮೈ ಪೂರ್ತಿ ಒದ್ದೆ ..ಮನಸ್ಸೂ ಕೂಡ ನಿನ್ನ ನೆನಪಿನಿಂದ. ಜೊತೆ ಬರುತ್ತಿದ್ದ ಚಂದ್ರತುಂತುರು ಮಳೆ ಒಳಗೆ ಬರಲಿಲ್ಲ. ನೆನಪು ಮಾತ್ರ ಬಿರುಗಾಳಿಯಂತೆ ಮತ್ತೆ ನುಗ್ಗಿ ಬಂತು. ನೀನಿರಬೇಕಿತ್ತು ಕಣೆ.. ಗರಿ ಗರಿ ಟವೆಲ್ನಲ್ಲಿ ತಲೆ ಒರೆಸುತ್ತಾ ನೀನೂ ಮೈಯನ್ನು ಒದ್ದೆ ಮಾಡಿಕೊಂಡು .. ಪ್ರೀತಿ ಬೆರೆತ ಬಿಸಿ ಬಿಸಿ ಕಾಫಿಯನ್ನು ನೀನೊಂದು ಸಿಪ್ಪುನಾನೊಂದು ಸಿಪ್ಪು ಹೀರುತ್ತಾ... ಆಫೀಸಿನಲ್ಲಿ ನಡೆದುದ್ದೆಲ್ಲಾ ನಾ ನಿನಗೆ ಹೇಳುತ್ತಾ.. ಬೆಳಗ್ಗೆಯಿಂದ ಒಬ್ಬಳೇ ಬೇಸರವಾಗಿಫೋನಾಯಿಸಿದ ನಿನ್ನ ಗೆಳತಿಯರ ಸಂಸಾರದ ಬಗ್ಗೆ ಕೇಳುತ್ತಾ.. ಕೊನೆಗೆ ಹೇಳೋ,ನೀನಿಲ್ಲದೇ ಎಷ್ಟು ಕಷ್ಟ ಗೊತ್ತಾ ಕಳೆಯೋದುಎನ್ನುವ ಮಾತಿಗೆ ಕಾಯುತ್ತಾ.. ಎಸ್ಟೆಲ್ಲಾ ಆಸೆಯಾಯ್ತು ಗೊತ್ತಾ? ನೀನಿದ್ದಲ್ಲಿಗೆ ಓಡಿ ಬಂದು ಮತ್ತೊಂದು ಸಲ ಇಬ್ಬರೂ ಕೈ ಕೈಹಿಡಿದು ಮಳೆಯಲ್ಲಿ ನೆನೆಯಬೇಕೆನಿಸುವಸ್ಟು.ಕುಂತಲ್ಲೆ ಸಾವಿರ ಕನಸುಗಳು.

ಮುಂದಿನ ವರುಷ ಸಮಯಕ್ಕೆ ಕನಸುಗಳೆಲ್ಲಾ ನನಸಾಗಿರುತ್ತವೆ ತಾನೆ? ಇಬ್ಬರ ಮನೆಯಲ್ಲೂ ಒಪ್ಪಿರುವಾಗ , ಮನಸುಗಳೆರಡೂ ಕಲೆತಿರುವಾಗ.. ಒಂದು ವರ್ಷ ಕಸ್ಟವೇ.. ಆದರೂ ನಿನ್ನ ಓದು.. ನಿನ್ನ ಆಸೆ ನಾನು ಹೇಗೆ ಬೇಡ ಎನ್ನಲಿ . ನಿನ್ನಓದಿಗೆ ಶುಭ ಕೋರುತ್ತಾ .. ಮುಂದಿನ ವರ್ಷ ನನಸಾಗುವ ಕನಸಿನಲ್ಲಿ ಮುಳುಗುತ್ತಿದ್ದೇನೆ.. ಆಂ ಏನಂದೇ .. ಅದಕ್ಕೂ ಮುಂದಿನವರ್ಷ..? .. ಗೊತ್ತಾಯ್ತು ಬಿಡು.. ಛೀ ಕಳ್ಳಿ !!!!

ಕಷ್ಟ ಸುಖ ಫೋನಿನಲ್ಲಿ ಮಾತನಾಡೋಣ. ಮೆಸ್ಸೇಜ್ ನಲ್ಲಿ ಕಾಲೆಳೆಯುವುದಂತೂ ಇದ್ದೇ ಇದೆ.

internals ಆದ ಮೇಲೆ ನೀನು ಒಂದು ಪತ್ರ ಬರೆಯುತ್ತೀಯಲ್ಲಾ? ನಿನ್ನ ಮನದ ಭಾವನೆಯನ್ನು ಬಸಿದು..

ನಿನ್ನ ಪತ್ರಕ್ಕೆ ಕಾಯುತ್ತಿರುವ ನಿನ್ನ ಹೃದಯದ ಕಳ್ಳ

ಪ್ರವಿ

Friday, September 17, 2010

ಭವತಿ ಭಿಕ್ಷಾಂದೇಹಿ !!!
ಹೆಸರು
ನೋಡಿದೊಡನೆ ನೆನಪಿಗೆ ಬರುವುದು ವಟುಗಳು ಭಿಕ್ಷಾಪಾತ್ರೆ ಹಿಡಿದಿರುವುದು.ಉಪನಯನದ ನಂತರ ಕೇವಲ ಬದುಕಿನಕಷ್ಟ ಗೊತ್ತಾಗಲಿ ಎಂದು ಕಳಿಸುವ ಒಂದು ಕ್ರಿಯೆ ಮಾತ್ರವಾಗಿತ್ತು .ಆದರೆ ನಾನು ಹೇಳ ಹೊರಟಿರುವುದು ಅವರ ಬಗ್ಗೆ ಅಲ್ಲ.ಪ್ರತೀ ಊರಿನಲ್ಲಿ, ಪ್ರತಿ ಪೇಟೆಯಲ್ಲಿ, ಕಂಡ ಕಂಡ ಸಿಗ್ನಲ್ ಗಳಲ್ಲಿ ಹಿಂಡು ಹಿಂಡಾಗಿ ಬರುವ ,ಭಿಕ್ಷಾಟನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರ ಬಗ್ಗೆ.ಕೆಲವೊಬ್ಬರು ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕು ಭಿಕ್ಷುಕರಾಗಿರುತ್ತಾರೆ,ಹಲವಾರು ಜನ ಭಿಕ್ಷೆ ಬೇದುವುದಕ್ಕೇ ಪರಿಸ್ಥಿತಿ ಸೃಸ್ಠಿಸಿಕೊಳ್ಳುತ್ತಾರೆ.ದೇಹದಲ್ಲಿ ಶಕ್ತಿಯಿದ್ದೂ, ತೋಳಿನಲ್ಲಿ ಬಲವಿದ್ದರೂ ,ಕಷ್ಟಪಟ್ಟು ದುಡಿಯಲಾಗದ ಸೋಮಾರಿಗಳು ಹೊಟ್ಟೆಪಾಡಿಗೆ ಕಂಡು ಕೊಳ್ಳುವ ಮಾರ್ಗ ಭಿಕ್ಷಾಟನೆ.ಇವರಿಗೆ ದಿನಕ್ಕೊಂದು ಅಂಗವಿಕಲತೆ,ದಿನಕ್ಕೊಂದು ಸಿಗ್ನಲ್..ಬೇಡುವುದಕ್ಕೆ ಸಾವಿರ ಕಾರಣಗಳು.ಇಂತಹವರನ್ನು ಖಂಡಿತಾ ಹಣ ನೀಡಿ ಪ್ರೋತ್ಸಾಹಿಸಬಾರದು

ಪರಿಸ್ಥಿತಿ
ಒತ್ತಡಕ್ಕೆ ಸಿಲುಕಿ ಭಿಕ್ಷುಕರಾಗುವವರ ಕಥೆಯೇ ಬೇರೆ.ಜೀವನ ಪೂರ್ತಿ ಸಂಸಾರಕ್ಕಗಿ ದುಡಿದು, ಇನ್ನು ದೇಹದಲ್ಲಿ ತ್ರಾಣವಿಲ್ಲದಾಗ ಅದೇ ಸಂಸಾರ ಅವನ/ ಹೊರ ಹಾಕಿದಾಗ ಅನಿವಾರ್ಯವಾಗಿ ಭಿಕ್ಷಾಟನೆಗೆ ಇಳಿಯಬೇಕಾಗುತ್ತದೆ. ಯಾರು ವಾರಸುದಾರರಿಲ್ಲದಿದ್ದಾಗ ದುಡಿಯುವ ಅಂಗಗಳೂ ಊನವಾದಾಗ ಹೊಟ್ಟೆಪಾಡು,ಅಸಹಾಯಕತೆ.. ಬೇರೆಯವರ ಮುಂದೆ ಕೈಚಾಚುವಂತೆ ಮಾಡುತ್ತದೆ .ನನ್ನ ಪ್ರಕಾರ ಇವರಿಗೆ ಭಿಕ್ಷೆ ನೀಡುವುದರಲ್ಲಿ ಯಾವ ತಪ್ಪಿಲ್ಲ..

ಇನ್ನೊಂದು ಆಘಾತಕಾರಿ ಸಂಗತಿ ಎಂದರೆ ಭಿಕ್ಷಾಟನೆ ಧಂದೆಯಾಗಿ ಬೆಳೆದಿರುವುದು.ಶಾಲೆಗೆ ಹೋಗಬೇಕಾದ ಮಕ್ಕಳು,ಅನಾಥಮಕ್ಕಳನ್ನು ಹಿಡಿದು ತಂದು ಊರು ಕೇರಿ ಗೊತ್ತಿಲ್ಲದ ಜಾಗದಲ್ಲಿ ಭಿಕ್ಷಾಟನೆಗಿಳಿಸುತ್ತಾರೆ.ಬೇಡಲೇಬೇಕು ,ಇಲ್ಲದಿದ್ದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ.ಒಂದೊಂದು ಮಕ್ಕಳಿಗೆ ಒಂದೊಂದು ಜಾಗಕ್ಕೆ , ವಯಸ್ಸಿಗೆ ತಕ್ಕಂತೆ ಟಾರ್ಗೆಟ್.ಅಸ್ಟು ಹಣ ಗಳಿಸಲೇ ಬೇಕು.ಇದರಲ್ಲಿ ಮಕ್ಕಳಿಗೆ ನಯಾಪೈಸೆಯೂ ದೊರೆಯುವುದಿಲ್ಲ ಎಲ್ಲಾ ಧಂದೆಗಿಳಿಸಿದವರಿಗೆ.ಇವರಿಗೆ ಹಿಡಿ ಕೂಳು ಸಿಕ್ಕರೆ ಹೆಚ್ಚು .ಭಿಕ್ಷೆ ಸರಿಯಾಗಿ ಸಿಗದಿದ್ದರೆ ಟಾರ್ಗೆಟ್ ರೀಚ್ ಆಗಲು ಪಿಕ್ ಪಾಕೆಟ್ ಮಾಡಲೂ ಹೆದರುವುದಿಲ್ಲ.ಹಾಗಾದರೆ ಇಂತವರಿಗೆ ಭಿಕ್ಷೆ ನೀಡಬೇಕೆ? ನನಗೂ ಗೊತ್ತಿಲ್ಲ..

ಎಲ್ಲ
ಯೋಚಿಸಿದಾಗ ಸಂಪೂರ್ಣ ಭಿಕ್ಷಾಟನೆ ನಿರ್ಮೂಲನೆ ಸಾಧ್ಯವೇ?ಎನ್ನುವ ಜಿಜ್ನಾಸೆ ಮೂಡುವುದು ಸಹಜ.ಸ್ವಲ್ಪ ಕಷ್ಟವಾದರೂ ಖಂಡಿತ ಸಾಧ್ಯ. ಎಲ್ಲರಲ್ಲಿ ಒಂದು ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕೆಂಬ ಕಳಕಳಿ ಬರಬೇಕು ಅಸ್ಟೇ .ದುಡಿದು ತಿನ್ನಲು ಸಾಧ್ಯವಿರುವವರಿಗೆ,ಸ್ವಾಭಿಮಾನ ಆತ್ಮವಿಶ್ವಾಸ ಹುಟ್ಟಿಸಿ ದುಡಿಯಲು ಅವಕಾಶ ನೀಡಬೇಕು.ಸ್ವಲ್ಪ ಅಂಗವಿಕಲತೆಯುಳ್ಳವರಿಗೆ, ಅವರಿಗೆ ಸಾಧ್ಯವಾಗುವಂತಹ ಕೆಲಸದಲ್ಲಿ ತರಬೇತಿ ಕೊಟ್ಟು ಬದುಕು ರೂಪಿಸಿಕೊಳ್ಳಲು ಸಹಾಯ ಮಾಡಬೇಕು.ಮಕ್ಕಳನ್ನು ದಂದಾಗಾರರ ಕಪಿಮುಷ್ಠಿಯಿಂದ ತಪ್ಪಿಸಿ,ತಿಳಿ ಹೇಳಿ ಓದಲು ನೆರವಾಗಬೇಕು. ಏನೂ ಮಾಡಲಾಗದ ಮುದುಕರು ಅಂಗವಿಕಲರಿಗೆ ಅವರಿಗೆಂದೇ ಇರುವ ಜಾಗಕ್ಕೆ ಸೇರಿಸಬೇಕು.ದಾನಿಗಳಿಂದ ಸಂಗ್ರಹಿಸಿ ಬದುಕಲು ನೆರವಾಗಬೇಕು.ಒಬ್ಬರಿಂದ ಇದು ಅಸಾಧ್ಯ, ಒಂದು ಸಂಸ್ಥೆಯಿಂದ , ಸರ್ಕಾರದಿಂದ ಮಾತ್ರ ಇದನ್ನು ಕಾರ್ಯರೂಪಕ್ಕೆ ತರಲು ಸಾಧ್ಯ.

ಭಿಕ್ಷುಕರ
ಉದ್ದಾರಕ್ಕೆಂದೇ ಇರುವ ಪುನರ್ವಸತಿ ಕೇಂದ್ರದ ಬಗ್ಗೆ ಎಲ್ಲರಿಗೂ ತಿಳಿದದ್ದೇ."ಭಿಕ್ಷೆ ಬೇಡಿದರೆ-ಒಂದು ದಿನ ಸಿಗದಿದ್ದರೂ-ಕೊನೇ ಪಕ್ಷ ಜೀವವಾದರೂ ಉಳಿಯುತ್ತದೆ ಇಲ್ಲಿದ್ದರೆ ಅದೂ ಇಲ್ಲ" ಎನ್ನೋ ಭಾವನೆ ಭಿಕ್ಷುಕರಲ್ಲಿಮೂಡುವಂತಾಗಿದೆ.ಸತ್ತ ಜೀವಕ್ಕೆ ಲೆಖ್ಖವೂ ಇಲ್ಲ ಬೆಲೆಯೂ ಇಲ್ಲ.ಹೇಳಿಕೇಳಿಕೊಳ್ಳುವವರೂ ಮೊದಲೇ ಇಲ್ಲ.ಬದುಕು ಕಟ್ಟಿಕೊಳ್ಳಲುಬಂದವರು ಜೀವ ಉಳಿಸಿಕೊಳ್ಳಲು ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗುವ ಸಂದರ್ಭ ಬಂದಿದ್ದು ವಿಪರ್ಯಾಸ.ಬರೆದಸ್ಟೂ ಇದೆ ಬಿಡಿ ಅಲ್ಲಿನ ಅವ್ಯವಸ್ಥೆ....

ಅಸಹಾಯಕತೆ,ಅಂಗವಿಕಲತೆ , ಪರಿಸ್ಥಿತಿಯ ಒತ್ತಡದಿಂದ ಹೇಗೆ ಭಿಕ್ಷಾಟನೆಗಿಳಿಯುತ್ತರೆ , ಹೇಗೆ ಅನಿವಾರ್ಯವಾಗುತ್ತದೆಎನ್ನುವುದಕ್ಕೆ ಸಣ್ಣ ಕವನ.
ಹಾಗಂತ ನಾನು ಖಂಡಿತ ಭಿಕ್ಷಾಟನೆಯನ್ನು ಪ್ರೋತ್ಸಾಹಿಸುವುದಿಲ್ಲ.

ಅಮ್ಮ
..ಅಮ್ಮ ,ಅಣ್ಣ ಅಣ್ಣ..
ನೋಡಿ ನೋಡಿ ಬದಲಿಸಬೇಕು ಮಾತಿನ ಬಣ್ಣ
ಪೂರ್ವಕೃತ ? ಸ್ವಯಂಕೃತ ?
ಅಂತೂ ಪರಾಧೀನ..

ಛೀ,ತೂ ಮುಂದಕ್ಕೆ ಹೋಗು..
ದುಡಿದು ತಿನ್ನಲಿಕ್ಕೇನು ದಾಡಿ
ಅಂಗವಿಕಲತೆಯ ಸೋಗು
ನೋಡಲೂ ಇಲ್ಲ ನನ್ನ,ಎಲ್ಲರಲೂ ಒಂದೇ ನುಡಿ

ಅಂದು,ರಟ್ಟೆ ಮುರಿದು ಹೊಟ್ಟೆ ಕಟ್ಟಿಕೊಂಡೆ
ನನ್ನದೊಂದೇ ಅಲ್ಲ,ನನ್ನವರ ಹೊಣೆಯೂ ನಂದೇ..
ಏನೂ ಗಿಟ್ಟಿಸಲಾಗದೀಗ ನನ್ನಿಂದ..
ಸತ್ತಿರುವ ಮುದುಕ.
ಮೈ ನಡುಕ..
ಕಿವಿ ದೂರ..ಕಣ್ಣಲ್ಲಿ ಪೊರೆ
ನನ್ನ ದೇಹ ನನಗೇ ಹೊರೆ..
ನನ್ನವರಿಗೂ...
ಇಂದೋ ನಾಳೆನೋ
ಬದುಕಬೇಕಲ್ಲ ಅಲ್ಲಿವರೆಗೂ..
ಹೊಟ್ಟೆ ಪಾಡು,ಹೊರಡು ಮುಂದೆ
ಭವತಿ ಭಿಕ್ಷಾಂದೇಹಿ..
ಅಸಹಾಯಕ. ನಾನೊಬ್ಬ ಭಿಕ್ಷುಕ..

ಹೋಗಾಚೆ ದೂರ
ಶಾಲೆಗೆ ಹೋಗಬೇಕಾದ ಪೋರ..
ಆಗುವುದಿಲ್ಲವೇ ನಾಚಿಕೆ..
ಹೀಗೆ ಕೈ ಚಾಚುವುದಕೆ..

ಶಾಲೆ,ಹೆಸರು ಕೇಳಿದೊಡೆ
ಕಣ್ಣಲ್ಲಿ ನೂರು ಕನಸು
ಕನಸಷ್ಟೆ,ಸೇರಿಸುವರಾರು
ಆಗಲೇ ಕಳೆಯುತಿದೆ ವಯಸು
ಬೇಡಲೇಬೇಕು ಅನಿವಾರ್ಯ
ಅವರು?? ವಹಿಸಿದ್ದ ಕಾರ್ಯ..
ನಿನ್ನೆ ಕಣ್ಣೆರಡು ಕಾಣ..
ಇಂದು ಕಾಲೊಂದು ಊನ
ನಾಳೆ ಮತ್ತೊಂದು ..ಚಾಚಲೇಬೇಕು ಕೈನ
ಜಾಗ ಬದಲು..
ತಪ್ಪಿದರೆ ಚಾಟಿ.. ಬಾರುಕೋಲು
ತಪ್ಪದಿರೆ? ಬೇಡಿದ್ದು ಅವರಿಗೆ
ಹಿಡಿಕೂಳು ಹೊಟ್ಟೆಗೆ..ಹುಟ್ಟಿದ ತಪ್ಪಿಗೆ
ಹೊಟ್ಟೆಪಾಡು ಹೊರಡು ಮುಂದೆ
ಭವತಿ ಭಿಕ್ಷಾಂದೇಹಿ..
ಬಾಲಕ,ಅಮಾಯಕ..ನಾನೊಬ್ಬ ಭಿಕ್ಷುಕ


ಚಿಲ್ಲರೆ ಇಲ್ಲ ಛೀ,ತೂ ಅನ್ನುವ ಮುನ್ನ ಒಮ್ಮೆ ಯೋಚಿಸಿ.ಹಾಗೆ ಭಿಕ್ಷೆ ನೀಡುವ ಮುನ್ನ ಒಂದಲ್ಲ ಎರಡು ಸಲ ಯೋಚಿಸಿ ದುಡಿದುತಿನ್ನುವ ಸಮರ್ಥನಿರುವವನಿಗೆ ಕೊಡುವುದರಲ್ಲಿ ಯಾವ ಅರ್ಥವೂ ಇಲ್ಲ....

ಆತ್ಮವಿಶ್ವಾಸವಿದ್ದರೆ,ಸ್ವಲ್ಪ ಶಕ್ತಿಯಿದ್ದರೆ .. ಸಾಮಾನ್ಯ ಅಂಗವಿಕಲತೆ ಅಂಗವಿಕಲತೆಯಲ್ಲ ಸ್ವಾಭಿಮಾನಿಯಾಗಿಬದುಕಬಹುದೆನ್ನುವುದಕ್ಕೆ ಕೆಳಗಿನ ವೀಡಿಯೋ ನೋಡಿ

http://www.youtube.com/watch?v=8YF-ES8Q1zk

"IGNORANCE OF ABILITY BRINGS DISABILITY"

ಪ್ರೀತಿಯಿಂದ ಪ್ರವಿFriday, August 27, 2010

ನೀನೇನಾ?ನೀನೇ-ನಾ !!!


ಮುಂಜಾನೆ ವೇಳೆ
ಹಸಿರೆಲೆಯ ಮೇಲೆ
ಇಬ್ಬನಿ ಕಟ್ಟಿದೆ ಮುತ್ತಿನ ತೋರಣ
ಹನಿಹನಿಗಳಲ್ಲಿ
ಹೂ ನಗೆಯ ಚೆಲ್ಲಿ
ಕಾಡುತಿಹ ಬಿಂಬವದು ನೀನೇನಾ?

ಸೋಕಲು ಸೂರ್ಯನ
ಬೆಚ್ಚನೆ ಕಿರಣ
ಇಬ್ಬನಿ ಕರಗಿದೆ ಹೇಳದೇ ಕಾರಣ
ಹನಿಯಲಿ ಹೊಳೆಯುತ
ಸುಮ್ಮನೆ ನಾಚುತಾ
ಕಣ್ತಪ್ಪಿಸಿ ಕಾಣೆಯಾದ ಕಿನ್ನರಿ ನೀನೇನಾ?

ಎಲೆಗಳ ಮರೆಯಲಿ
ಹಕ್ಕಿಯ ಚಿಲಿಪಿಲಿ
ಮತ್ತದೋ ಕೋಗಿಲೆ ಮಂಜುಳ ಗಾನ
ಮಧುರದಿ ಹಾಡಿದ
ಮನವನು ತಣಿಸಿದ
ಕೇಳಲು ಮುದವಾದ ದನಿಯದು ನೀನೇನಾ?

ಮುಸ್ಸಂಜೆ ಸಮಯ
ಸೌಂದರ್ಯಮಯ
ಆಗಸದ ರಂಗೋಲಿಗೆ ನೇಸರನದೇ ಬಣ್ಣ
ಮನ ಕಣಕಣದಲ್ಲೂ
ಕಾಮನಬಿಲ್ಲು
ಮೂಡಿಸಿ ಮಾಯವಾದ ಮೋಹಿನಿ ನೀನೇನಾ?

ಕನ್ನಡಿ ತುಂಬಾ
ನಿನ್ನದೇ ಪ್ರತಿಬಿಂಬ
ಕಾಣದಾದೆ ನನ್ನೇ ನಾ,ನಾನಿನ್ನು ನಾನಾಗಿ ಉಳಿದೇನಾ?
ಎಲ್ಲೆಲ್ಲೂ ನೀನೇ
ಆವರಿಸಿದೆ ನನ್ನೇ
ಉಳಿದಿಲ್ಲ ಅನುಮಾನ,ಈಗ ನೀನೇ-ನಾ !!!

ಪ್ರೀತಿಯಿಂದ ಪ್ರವಿ
Friday, August 13, 2010

ಹೆಸರಿನ ಹುಚ್ಚು ಹತ್ತಿದಾಗ !!!ಕವನದ ಮೇಲೆ ಕಥೆ.. ಕವನದಂತಾ ಕಥೆ.. ಕಥೆನೇ ಹೌದಾ? ಏನೊ ಒಂದು.." ಹೆಸರಿನ ಹುಚ್ಚು ಹತ್ತಿದಾಗ" ಕಥೆಯಲ್ಲದ ಕಥೆ.. ಓದಿ ನಿಮ್ಮಭಿಪ್ರಾಯ ಹೇಳಿ..

ಪ್ರೀತಿಯಿಂದ ಪ್ರವಿ


ಅವನು ಮನಸ್ಸಿಟ್ಟು ಬರೆದಿದ್ದೆಲ್ಲಾ ಕವನ.ಸುಮ್ಮನೆ ಖುಷಿ ಆದಾಗ ,ದುಃಖ ಆದಾಗ ಏನೇನೋ ಗೀಚುತ್ತಿದ್ದ.ಬಾಳಿನ ಅನರ್ಥಗಳೆಲ್ಲಾಕವನದಲ್ಲಿ ಅರ್ಥ ಕಂಡುಕೊಳ್ಳುತ್ತಿದ್ದವು.ಅವನ್ಯಾವತ್ತೂ ಕವನ ಬರೆಯಬೇಕೆಂದು ಕೂರುತ್ತಿರಲಿಲ್ಲ,ಆದರೆ ಭಾವ ತೀವ್ರತೆಯಾದಾಗ ಕೂತಲ್ಲೆಲ್ಲಾ ಕವನ ಹುಟ್ಟುತ್ತಿತ್ತು.ಹೇಳಿಕೊಳ್ಳುವಂಥಾ ಗೆಳೆಯರೂ ಕೂಡಾ ಅಷ್ಟಿರಲಿಲ್ಲ. ಹೇಳಿಕೊಳ್ಳುವುದಕ್ಕೆ ಅವನಿಗೆ ಗೆಳೆಯರೂ ಬೇಕಿರಲಿಲ್ಲ.ಮನಸ್ಸಿನೊಂದಿಗೇ ಮಾತುಕತೆ,ಮಂಥನ ನೆಡೆದಾಗಲೆಲ್ಲಾ ಪದಗಳ ಜನನ ,ಪದ ಪೊಣಿಸಿ ಕವನ.

ಜಾಲಿ
ಮೂಡಿನಲ್ಲಿದ್ದಾಗ ಮನೆಯಲ್ಲೇ ಜೋಲಿ ಹೊಡೆಯುತ್ತಿದ್ದ.ಕುಳಿತಲ್ಲೆಯೇ ಕನಸು ಕಟ್ಟುತ್ತಿದ್ದ ,ಕನಸಿನರಮನೆಯಲ್ಲಿ ರಾಜಕುಮಾರನಾಗಿ ರಾರಾಜಿಸುತ್ತಿದ್ದ.ವಾಸ್ತವಕ್ಕೆ ಬಂದಾಗ ಮನಸ್ಸು ಸಂತೋಷದ ಆಗಸದಲ್ಲಿ ತೇಲುತ್ತಿತ್ತು.ತೀರಾ ದುಃಖವಾದಾಗ ಮಾತ್ರ ಅವನ ಸಂಗಾತಿ ಹೊಳೆ ತೀರ. ಸಣ್ಣಗೆ ಜುಳುಜುಳು ಹರಿಯುವ ಹೊಳೆ,ಮಾಮರದಲ್ಲಿ ಅಡಗೆ ಕುಳಿತ ಕೋಗಿಲೆಯಕೂಗು,ಕಣ್ಣು ಹಾಯಿಸಿದಷ್ಟೂ ಕಾಣಿಸುವ ಹಸಿರು, ಕಾಳನ್ನರಸುತ್ತಿರುವ ಹಕ್ಕಿಗಳ ಹಿಂಡು,ಕೂಳನ್ನರಸುತ್ತಿರುವ ಜಾನುವಾರುಗಳು ನೋಡುತ್ತಾ ಕುಳಿತರೆ ಮನಸಿಗೇನೋ ಮುದ.ದುಃಖವೂ ಕೂಡ ನೀರಿನೊಂದಿಗೆ ಹರಿಯುತ್ತಾ ಹೊಗುತ್ತಿತ್ತು.ತಂಗಾಳಿ ಸಾಂತ್ವನದ ಸ್ಪರ್ಷ ನೀಡುತ್ತಿತ್ತು,ಸುಮ್ಮನೆ ಬೆನ್ನು ತಟ್ಟುತ್ತಿತ್ತು .ಬದುವಿನಲ್ಲಿದ್ದ ಗರಿಕೆ ಹುಲ್ಲು,ಎಸ್ಟೇ ತುಳಿದರೂ ಸ್ವಲ್ಪ ಅವಕಾಶ ಸಿಕ್ಕಿದರೆ ಸಾಕು ಚಿಗುರುವೆವು ಎನ್ನುತ್ತಾ ಆಶಾವಾದಿಯಾಗಿದ್ದವು, ನೊಂದ ಮನಸ್ಸಿಗೆ ಸಮಾಧಾನ ಹೇಳುತ್ತಿದ್ದವು. ಕೋಗಿಲೆ ತಾನು ಹಾಡಲು ಇವನ ಸಾಹಿತ್ಯ ಬೇಡುತ್ತಿದ್ದವು .ಅರಿವಿಲ್ಲದಂತೆ ಮನಸ್ಸಿನಲ್ಲಿ ಕವನ ಹುಟ್ಟಿ ಹಾಡಾಗುತ್ತಿತ್ತು.ಎದೆಯ ಭಾವಕ್ಕೆ ರಾಗವೇಕೆ? ಹೊಳೆಯ ಜುಳುಜುಳು ,ಹಕ್ಕಿಯ ಕಿಚಪಿಚ ತಾಳವಾಗುತ್ತಿತ್ತು.ಕೋಗಿಲೆ ದನಿಗೂಡಿಸುತ್ತಿತ್ತು, ಗರಿಕೆ ತಲೆದೂಗುತ್ತಿತ್ತು.ಹೃದಯ ಹಗುರವಾಗಿ ,ಮನಸು ಹೊಸತೊಂದು ಕನಸು ಕಟ್ಟುತ್ತಿತ್ತು.ದುಃಖ ದೂರವಾಗಿರುತ್ತಿತ್ತು.ಅದ್ಭುತವಾದ ಕವಿತೆಯೊಂದಿಗೆ ಮನೆಗೆ ವಾಪಾಸಗುತ್ತಿದ್ದ.

ದುಃಖದಲ್ಲಿದ್ದಷ್ಟು ತೀವ್ರತೆ ಖುಷಿಯಲ್ಲಿರುವುದಿಲ್ಲ,ಅದು ನೇರವಾಗಿ ಹೃದಯಕ್ಕೇ ತಟ್ಟುತ್ತದೆ.ತಟ್ಟುವುದು ಮಾತ್ರವಲ್ಲ ಒಳಹೋಗಿ ಕುಳಿತುಬಿಡುತ್ತದೆ.ಸಮಾಧಾನವಾಗುವುದು ಹೊರ ಹಾಕಿದಾಗ ಮಾತ್ರ , ಕಣ್ಣೀರು ರೂಪದಲ್ಲೋ,ಬೇರೆಯವರೊಂದಿಗೆ ಮಾತಿನರೂಪದಲ್ಲೋ, ಕವನದ ರೂಪದಲ್ಲೋ ..ಇವನಿಗೆ ಕಣ್ಣೀರೆಲ್ಲಾ ಕವನಗಳಾಗಿ ಹರಿಯುತ್ತಿದ್ದವು ...

ಅದೆಲ್ಲಿಂದ
ಬಂತೋ ಅದೊಂದು ದಿನ ಅವನಿಗೆ ಹೆಸರು ಮಾಡಬೇಕೆಂಬ ಹುಚ್ಚು ಯೋಚನೆ.ಯಾರ್ಯಾರೋ ಪ್ರಸಿದ್ಧಿ ಅಗಿರುವಾಗ ತಾನು ಇಷ್ಟೆಲ್ಲ್ಲಾ ಬರೆದೂ ಯಾಕೆ ಸುಮ್ಮನಿರಬೇಕೆಂಬ ಆಲೋಚನೆ.ಸರಿ, ಮೊದಲನೇ ಮೆಟ್ಟಿಲಾಗಿ ಕಂಡ ಕಂಡ ಪತ್ರಿಕೆಗೆಲ್ಲಾ ತಾನು ಬರೆದ ಕವನ ಕಳಿಸತೊಡಗಿದ.ಮೊದಲೆಲ್ಲಾ ಮೂಲೆಯಲ್ಲೆಲ್ಲೋ ಒಂದು ಕಡೆ ಅಚ್ಚಾಗುತ್ತಿದ್ದ ಕವನ ದಿನ ಕಳೆದಂತೆ ಜನಪ್ರಿಯವಾಗತೊಡಗಿತು.ಪತ್ರಿಕೆಯವರೇ ಖುದ್ದಾಗಿ ಕೇಳಿ ಪ್ರಕಟಿಸತೊಡಗಿದರು.ಹೆಸರಿಲ್ಲದವನು,ಹೆಸರಿಗಾಗಿ ಹಂಬಲಿಸಿದವನು ಹೆಸರುವಾಸಿಯಾದ.

ಹಣ
ಅಥವಾ ಹೆಸರು ಬಂದಂತೆಲ್ಲಾ ಇನ್ನೂ ಬೇಕೆನ್ನುವುದು ಮನುಷ್ಯನ ಸ್ವಭಾವ ಅಥವಾ ದೌರ್ಭಲ್ಯ ಅನ್ನಬಹುದು.ಇನ್ನೊಂದುಮಾತಿನಲ್ಲಿ ಹೇಳುವುದಾದರೆ ಹಣವಿದ್ದ ಕಡೆ ಹಣ, ಹೆಸರಿದ್ದ ಕಡೆ ಹೆಸರು ತನ್ನಂತಾನೆ ಬರುತ್ತಾ ಹೋಗುತ್ತೆ.ನೀರಿದ್ದ ಕಡೆ ನೀರುಹರಿಯುತ್ತಲ್ಲ ಹಾಗೆ !!!.

ದಿನೇ ದಿನೇ ಬೆಳೆಯುತ್ತಾ ಹೋದ ಇವನ ಕವನಗಳಿಗೀಗ ಬಹಳ ಬೇಡಿಕೆ.ಇವನ ತೂಕವೂ ಹೆಚ್ಚುತ್ತಾ ಹೋಯಿತು.ಭಾವನೆಗಳಿಗೆ ಬರೆಯುತ್ತಿದ್ದ ಬೆಲೆಕಟ್ಟಲಾಗದ ಕವನ ಇವನು ಕೇಳಿದಷ್ಟು ಬೆಲೆಗೆ ಬಿಕರಿಯಾಗುತ್ತಿದ್ದವು.ಮನಸ್ಸಿರಲಿ,ಬಿಡಲಿ ಬರೆಯಬೇಕಿತ್ತು ಬರೆಯುತ್ತಿದ್ದ.. ಹಣಕ್ಕಾಗೆ ..ಹೆಸರಿಗಾಗಿ.ಪ್ರಸಿದ್ಧಿಯಾದ ಇವನ ಸುತ್ತಲೂ, ಹೋದಲ್ಲೆಲ್ಲಾ ಅಭಿಮಾನಿಗಳ ಹಿಂಡು .ಗೀಚಿದ್ದೆಲ್ಲಾಅತ್ಯದ್ಭುತವೆಂದು ಓದುವ ಜನ (ಪ್ರಸಿದ್ದಿಗೆ ಬಂದರೆ ಹೀಗೇ).ಬರಿದಾದ ಭಾವನೆಗೂ ಸಂಭಾವನೆ!!
..

ಒಳಗಿದ್ದ ಕವಿ ನಿಜ ಹೃದಯ ಬದುಕಲೂ ಆಗದೇ ಸಾಯಲೂ ಆಗದೆ ಒದ್ದಾಡುತ್ತಿತ್ತು. ದಿನ ಆಕಸ್ಮಿಕ ಅವಘಡಗಳಿಂದ ಒದ್ದಾಡುತ್ತಿದ್ದಅವನ ಮನ ಏಕಾಂತ ಬಯಸುತ್ತಿತ್ತು.ಅದಕ್ಯಾವ ಹಣವೂ ಬೇಕಿರಲಿಲ್ಲ,ಹೆಸರಿನ ಹಂಗೂ ಕೂಡ ಇರಲಿಲ್ಲ.ಬೇಕಿದ್ದಿದ್ದು ಪುಟ್ಟದೊಂದು ಸಮಾಧಾನ, ಯಾರೂ ಇರದ ಹೊಳೆದಂಡೆ, ಕೋಗಿಲೆಯ ನಾದಸ್ಪರ್ಷ.. ಹಸಿರು ಗದ್ದೆಯ, ಚಿಲಿಪಿಲಿ ಹಕ್ಕಿಗಳ ಸಾಂತ್ವನ ಅಷ್ಟೇ..

ಹೊರಗೆ ಕಾಲಿಟ್ಟ ಇವನಿಗೆ ಸಲಾಂ ಹೊಡೆದು ಕಾರಿನ ಬಾಗಿಲು ತೆಗೆದು ಕಾಯುವ ಡ್ರೈವರ್ ,ಇವನಿಗಾಗಿ ಕಾದಿದ್ದ ಜನಗಳು ..ಮನಸು ಮೂರಾಬಟ್ಟೆ.. ಏನೂ ಬೇಡವೆಂದು ಒಳಗೆ ಅಡಿಯಿಟ್ಟರೆ ಸಾಲು ಸಾಲಾಗಿ ,ಪ್ರತಿಷ್ಠೆಗಾಗಿ ಪೇರಿಸಿಟ್ಟ ಇವನದೇ ಕವನ ಸಂಕಲನಗಳು ಅಣಕಿಸುತ್ತಿದ್ದವು.ಭೂತ ಬಂಗಲೆಯೊಳಗೆ ಬೇಕಾದಷ್ಟು ಏಕಾಂತ ...ಆದರೆ ನೆಮ್ಮದಿಯಿಲ್ಲ..ಮನಸ್ಸಿಗೆ ಬೇಕಿರಿವುದು ಇದಲ್ಲ.ಸಮಾಧಾನಕ್ಕಾಗಿ ಬರೆಯಲು ಪ್ರಯತ್ನ ಪಟ್ಟ. ಕವಿತೆಯಲ್ಲ , ತಿಣುಕಿದರೂ ಒಂದು ಪದವೂ ಹುಟ್ಟಲಿಲ್ಲ .


ಒಳಗಿದ್ದ ಕವಿ ಪೂರ್ತಿ ಸತ್ತಿದ್ದ...ಕವನಗಳೆಲ್ಲಾ ಕಣ್ಣೀರಾಗಿ ಹರಿದಿದ್ದವು ...

Friday, July 2, 2010

ನೀನೇ ನನ್ನ ಬದುಕು


ಸಾವಿರ ಸಾವಿರ ಕನಸಿದೋ ಕಣ್ಣಲಿ
ನಲ್ಲೆಯೇ
ನಿನ್ನನು ನೋಡಿದ ಕ್ಷಣದಲಿ

ಬೆಳ್ಳನೆ
ಬೆಳದಿಂಗಳಿನಾ ನಗೆ

ಮೋಡಿಯ
ಮಾಡಿದೆ ಮರೆಯದ ಹಾಗೆ


ಸೂರ್ಯನು
ಸಾಟಿಯೇ ಕಣ್ಣಿನ ನೋಟಕೆ

ತನುಮನ ಬೆಳಗಿದೆ ಬೀರಿದ ಬೆಳಕಿಗೆ

ಗುಬ್ಬಚ್ಚಿ
ಮರಿ ನೀನು,ನನ್ನೆದೆ ಗೂಡಲಿ

ಸಮಯವೇ
ತಿಳಿಯದು ಕೇಳಲು ಚಿಲಿಪಿಲಿ


ಪ್ರೀತಿಯ
ಅಪ್ಪುಗೆ ಹೃದಯಕೆ ಸಿಕ್ಕಿದೆ

ಬೆಸುಗೆಯ
ಬಿಸಿ ಸನಿಹಕೆ ಸೋಕಿದೆ

ಜೊತೆ
ಜೊತೆ ನೀನಿರೆ ಬೇರೇನು ಬೇಕು

ಜತನದಿ
ಕಾಯುವೆ,ನೀ ನನ್ನ ಬದುಕು..

ಜೊತೆಯಾಗಿ
ಬಾಳುವ ನೂರೂ ಜನ್ಮಕೂ..


ಪ್ರೀತಿಯಿಂದ ಪ್ರವಿ
Wednesday, June 16, 2010

ಸತ್ತ ಪ್ರೀತಿಗೊಂದು ಗೋರಿಸತ್ತ ಪ್ರೀತಿಯ ನೆನಪಲ್ಲೊಂದು

ಗೋರಿ ಕಟ್ಟಿರುವೆ

ನೆನಪುಗಳು ಕರಗದಂತೆ

ತಾಜ್ ಮಹಲ್ ನಿವಾಳಿಸಿ

ಒಗೆಯಬೇಕು ಹಾಗೆ...


ಜಲ್ಲಿ:ನೀ ಕೊಟ್ಟ ಉಡುಗೋರೆ

ಮರಳು:ಉಳಿಸಿಹೋದ ಪ್ರೀತಿಚೂರು

ಸಿಮೆಂಟ್ :ನೀ ಬರೆದ ಪತ್ರ

ನೀರು..? ಕಣ್ಣೀರು..

ನೆನಪುಗಳು ಒಳಗೆ ಭದ್ರ

[ಹೃದಯ ಛಿದ್ರ ಛಿದ್ರ ]


ಜನನ:

ಪ್ರೀತಿ ಹುಟ್ಟಿದ ದಿನ ನೆನಪಿಲ್ಲ

ನಿನ್ನ ನೋಡಿದಾಗಲೋ

ನೋಡಿ ನಡೆದಾಗಲೋ

ಕಣ್ಣು ಮಾತನಾಡಿದಾಗಲೋ

ತುಟಿ ಅರಳಿದಾಗಲೋ

ಸಧ್ಯಕ್ಕೆ:ಪ್ರೀತಿ ನಿವೇದಿಸಿಕೊಂಡ ದಿನ

ಆಮೇಲೆ ಪ್ರತೀ ದಿನ


ಮರಣ:

ಮರೆಯಲಾರದ ದಿನಾಂಖ

ಕಾರಣ,ಸತ್ತ ದಿನವೇ ಕಟ್ಟಿದ ಗೋರಿ

ಕೆತ್ತಿದ ಈ ಬರಹ

:ನೀನು ಏಕಾಏಕಿ ಕೈ ಕೊಟ್ಟ ದಿನ

ಕೈ ಬಿಟ್ಟ ಕ್ಷಣ

ತಿರುಗಿ ನೋಡದೇ ಹೋದ ದಿನ

ತುಟಿಯಲ್ಲಿ ಅಟ್ಟಹಾಸವೋ..

ಅಸಹಾಯಕತೆಯೋ..


ಶ್ರದ್ಧಾಂಜಲಿ ಕಳಿಸುವ ವಿಳಾಸ

ಆರದ ಗಾಯ

c/o ಭಗ್ನ ಹೃದಯ

ಮುರಿದ ನಿಲಯ

ಅಪಘಾತ ವಲಯ

PIN:ಅವಶ್ಯಕತೆ ಇದಿಯಾ?

ಅನಿಸುತ್ತಿಲ್ಲ.....


...ಅಮರ ಪ್ರೇಮಿ..


ಪ್ರೀತಿಯಿಂದ ಪ್ರವಿTuesday, June 1, 2010

ನೀನೇ ನನ್ನ ನಲ್ಲೆ

ಪ್ರೀತಿಯ ಚುಕ್ಕಿಯನಿಟ್ಟು

ಒಲವಿನ ಗೆರೆ ಎಳೆದು

ತರ ತರದ ಬಣ್ಣ ಸುರಿದು

ಮನದ ಅಂಗಳದಲ್ಲಿ

ಹಾಕಿದೆ ನೀ ರಂಗವಲ್ಲಿ


ಹೃದಯವ ಹಸನುಗೊಳಿಸಿ

ಒಲವಿನ ಜೊತೆಗೂಡಿ

ಪ್ರೀತಿಯ ಪಾತಿ ಮಾಡಿ

ಮನದ ಅಂಗಳದಲ್ಲಿ

ಹಬ್ಬಿಸಿದೆ ನೀ ಪ್ರೇಮ ಬಳ್ಳಿ


ರಂಗೋಲಿಯ ರಂಗಿನಲ್ಲಿ

ಹೂವುಗಳ ಹೊಳಪಿನಲ್ಲಿ

ಕಂಗೊಳಿಸುತಿದೆ ರಂಗಿನರಮನೆ

ಮೂಕವಿಸ್ಮಿತ,ನಿನ್ನ ಕಂಡೊಡನೆ

ಮರುಮಾತಾಡದೆ ಬಾ ಸುಮ್ಮನೆ

ನೋಡಿದು ನೀ ಕಟ್ಟಿದ ನಮ್ಮನೆ


ಮನೆಯ ಅಂಗಳದಲ್ಲಿ

ಬೀರಿದೆ ಘಮ,ಬಿರಿದ ಮಲ್ಲಿಗೆ ಚೆಲ್ಲಿ

ನಿನ್ನ ಪ್ರೀತಿಗೆ ಹೇಳಬಹುದೆ ಒಲ್ಲೆ

ನಿನ್ನ ಪ್ರೀತಿಯ ನಾ ಬಿಡಲೊಲ್ಲೆ

ನಾನು ನಲ್ಲ,ಬಾ ನೀನೇ ನನ್ನ ನಲ್ಲೆ


ಪ್ರೀತಿಯಿಂದ ಪ್ರವಿFriday, May 14, 2010

ತೊಲಗಿ ನೆನಪುಗಳೇತೊಲಗಿ ನೆನಪುಗಳೇ

ಬದುಕಬೇಕಿದೆ ನಾನು


ಬೇಡ ಬೇಡವೆಂದರೂ

ಅಲೆ ಅಲೆಯಾಗಿ

ಎಳೆ ಎಳೆಯಾಗಿ ಕಣ್ಮುಂದೆ ಬರುವಿರೇಕೆ?

ಹೃದಯವ ಹಿಂಡಿ

ಮನವನು ಕಲಕಿ

ಬೆಂಬಿಡದ ಭೂತವಾಗಿ ಕಾಡುವಿರೇಕೆ?


ಮನಸ ಕೆರೆಯಲ್ಲಿ

ನೆನಪುಗಳೇ..ತಳ ಸೇರಿ

ಕಮಲವಿಲ್ಲದ ಮೇಲೆ

ಕೆಸರಿನ್ಯಾಕೆ?

ಬೇರುಗಳೂ ಸತ್ತಿವೆ

ಚಿಗುರುವಾಸೆ ಉಳಿದಿಲ್ಲ

ಸ್ವಚ್ಛವಾಗಬೇಕಿದೆ ನಾನು

ಅದಾಗದಿದ್ದರೂ..

ಸ್ವಚ್ಛವಾದಂತೆ ತೋರಿಸಬೇಕು ಜಗಕೆ..


ಕಲ್ಲು ಹೊಡೆದು ಕಲಕದಿರಿ

ಹಳಯದೆಲ್ಲವ ಕೆಣಕದಿರಿ

ಆಗ ಕೆಸರಿತ್ತು ನಿಜ..

ಆದರೆ ಜೊತೆ ಕಮಲವೂ ಇತ್ತು..


ತೊಲಗಿ ನೆನಪುಗಳೇ

ಪ್ರೀತಿ ಬದುಕಲಿಲ್ಲ

ಬದುಕ ಪ್ರೀತಿಸಬೇಕಿದೆ


ಪ್ರೀತಿಯಿಂದ ಪ್ರವಿ