Thursday, June 12, 2014

ಊರ್ಮಿಳಾ !

( ಮೊದಲೇ ಬರೆದಿದ್ದ ಕವನ , ಎಲ್ಲೂ ಪೋಸ್ಟ್ ಮಾಡಿರಲಿಲ್ಲ .. ಈ ತಿಂಗಳ ಸಂಪದ ಸಾಲು ಪತ್ರಿಕೆಯಲ್ಲಿ ) 






ಅನಾಯಾಸವಾಗಿ ನೀ ಹೊರಟೆ 
ಅನಿವಾರ್ಯವಾಗಿ   ನಾ ಬಿಟ್ಟೆ 

ಅಣ್ಣನಿಗೆ ಹೆಜ್ಜೆ 
ಅತ್ತಿಗೆಗೆ ನೆರಳು 
ಕಟ್ಟಿಕೊಂಡವಳ ಜೊತೆ  ಉಳಿದದ್ದು  ಮಾತ್ರ 
ಕತ್ತಿನಲ್ಲಿದ್ದ  ತಾಳಿ 
ಮತ್ತೆ  .. 
ಬೆಟ್ಟದಷ್ಟು ಜವಾಬ್ದಾರಿ !

ಕಂಡ ಸಾವಿರ ಕನಸ 
ಕರುಣೆಯಿಲ್ಲದೇ ಕೊಂದೆ 
ಕೇಳುವ ಕಿವಿಯೇ ದೂರ 
ಸರಿದ ಮೇಲೆ ಮನ ಮೌನ 
ಸುಮ್ಮನೆ ಮುಚ್ಚಿಕೊಂಡೆ !

ಎದ್ದಾಗ ಎದುರಿಲ್ಲ
ಬಿದ್ದಾಗ ಬಲವಿಲ್ಲ
ಕುದ್ದಾಗ ತಂಪಿಲ್ಲ 
ಸರಸ , ಸಲ್ಲಾಪ ... ಪಾಪ !
ಭಾವಕ್ಕೆ , ಭೋಗಕೆ ಬೀಗ 
ಅಳುವಂತಿಲ್ಲ , ಆಡುವಂತಿಲ್ಲ 
ಇದ್ಯಾವ ತ್ಯಾಗ ?

ಅದ್ಯಾವ ಪುರುಷಾರ್ಥ !
ಅದ್ಯಾವ ಪುರುಷತ್ವ 
ಬೇಕೆನಿಸಲಿಲ್ಲವೇ ಸಹವಾಸ 
ಸಾಕೆನಿಸಿತೇ ಸಾಮಿಪ್ಯ ?
ನಿನಗೆ ಬರೀ ಹದಿನಾಲ್ಕು 
ಕಾದು ಬೂದಿಯಗುತಿದೆ ಭಾವ 
ಉಳಿಯುವುದು ಬರೀ ಜೀವ !
ನನಗೆ ಪೂರ್ತಿ ವನವಾಸ 
ನೀ ಬಂದ ನಂತರವೂ !

ಮೋಸ ....
ಕಿವಿಯಲ್ಲಿ ಕಾದ ಸೀಸ 
ಹುಸಿಯಾದ ಆ ವೇದ ಘೋಷ 
ಧರ್ಮೆಚ, ಅರ್ಥೇಚ , ಕಾಮೇಚ 
ನಾತಿ ಚರಾಮಿ !
ಬಾಯ್ದೆರೆದು ನುಂಗಬಾರದೇ ಭೂಮಿ !! 

................................................................ಪ್ರವಿ !




8 comments:

Unknown said...

ತುಂಬ ಚೆನ್ನಾಗಿದೆ ಪ್ರವಿ...

Badarinath Palavalli said...

ಕವಿತೆಯ ಲಯ ಮತ್ತು ನಡೆ ವಿಭಿನ್ನವಾಗಿದೆ.
ಹೂರಣದ ಆಳದಲ್ಲಿ ಅಡಗಿರುವ ನೋವು ಸಹ ಮನ ಹಿಂಡುವಂತೆ ಚಿತ್ರಿತವಾಗಿದೆ.
best of best :
ಅಳುವಂತಿಲ್ಲ , ಆಡುವಂತಿಲ್ಲ
ಇದ್ಯಾವ ತ್ಯಾಗ ?

ಮೋಸ ....
ಕಿವಿಯಲ್ಲಿ ಕಾದ ಸೀಸ
ಹುಸಿಯಾದ ಆ ವೇದ ಘೋಷ
- ಏನೆಂದು ಹೇಳಬಲ್ಲೆವು ಇದು ನಮ್ಮದೂ ಬದುಕಿನ ಪುಟಗಳ ಕವಿತೆ!

sunaath said...

ಊರ್ಮಿಳೆಯ ಅಳಲಿಗೆ ಧ್ವನಿ ಒದಗಿಸಿದ್ದೀರಿ.

SANTOSH KULKARNI said...

Artha agalilla adroo chennagide....

bilimugilu said...

urMiLe.... avaLa mandaaLada maatugaLu nimma saalugaLalli chennaagi bandide Bhatrey :)
Roopa

ಸಂಧ್ಯಾ ಶ್ರೀಧರ್ ಭಟ್ said...

Sooper Praveee....

Unknown said...

ಮನ ಮುಟ್ಟಿದ ಕವಿತೆ.. ತುಂಬಾ ಚೆನ್ನಾಗಿದೆ ಪ್ರವೀಣ್

Unknown said...

SIR,

Bahushaha yaaru oormile ya bagge ishtu yochisiralikkilla... virahakke innodu hesaru aake ne... yellaru rama seethe ya adarsha dampathya hogalore... aadre oormile ya thyaga mathu sahishnuthe bagge ashtu charchegalu aagodhe illa...

chira virahi oormile ya aantharya vannu sogasaagi varnisiddiri

hennobbala thuditha ishtu arithiruva nimma bagge hemme aaguthe...

Mrs. Vasantha