Sunday, January 30, 2011

ಬಾಗಿಲಿರದ ಗೋಡೆ


ಸುತ್ತ ಬಾಗಿಲಿರದ ಮನೆ
ಕಟ್ಟಿಕೊಂಡಿದ್ದು ನಾವೇ...
ಸಿಎಫ್ಎಲ್ ನ ಸಾಮ್ರಾಜ್ಯದಲ್ಲಿ
ಸೂರ್ಯ ರೇಕುಗಳಿಗಿಲ್ಲ ಪ್ರವೇಶ
ತಣ್ಣನೆ ಏಸಿಯ ನಡುವೆ
ಬೀಸುಗಾಳಿಗಿಲ್ಲ ಅವಕಾಶ
ರೋಸು ಲ್ಯಾವೆಂಡರ್ ಮಲ್ಲಿಗೆ
ಕಂಪು ಹರಡುತಿದೆ ಮೆಲ್ಲಗೆ
ಚೆಲ್ಲಾಪಿಲ್ಲಿ ಚಿಲಿಪಿಲಿಯ ಜೊತೆಗೆ
ಬೆರಳ ತುದಿಯಲ್ಲಿ ಜಗತ್ತು
ಕುಣಿಯುತ್ತಲಿತ್ತು,ಗತ್ತು ,ಗಮ್ಮತ್ತು
ಸೂಟು ಬೂಟು ಸೂಟ್ ಕೇಸ್ ಮಧ್ಯ
ಬೇಕಿಲ್ಲ ವಿಶ್ವಾಸ
ಹಣ ಹೆಸರು ಉಚ್ವಾಸ ನಿಶ್ವಾಸ
ಸ್ವರ್ಗಕ್ಕೆ ಮೂರು ಮುಕ್ಕಾಲು ಗೇಣು
ಅಡ್ಡವಿದ್ದದ್ದು ಬರಿದೇ,..ಪರದೆ !!

ಆದರೂ
ಉಸಿರುಗಟ್ಟುತಿದೆಯೇಕೆ?
ಏಸಿಯಲೂ ಮೈ ಒಳಗೆ ಸೆಖೆ
ಕತ್ತು ಹಿಂಡುತಿದೆ . ಎಲ್ಲಾ ಕೃತಕ
ಸುತ್ತ ಕಾಣುವ ಛಾಯೆ ಸೂತಕ
ಪರದೆಯಾಚೆಗಿನ ನಾಕ
ಬರೀ.. ನಾಟಕ
ದಾಟಲಾಗದ ಪರಿಧಿಯಿದು
ಒಳಗೆ ಭಾರೀ ನರಕ

ಎಲ್ಲಿ ಹೋಯಿತು
ಮೊದಲ ಮಳೆಯ ಮಣ್ಣ ಕಂಪು
ಮನವ ತಣಿಸುವ ಹಕ್ಕಿಯಿಂಪು
ಮುತ್ತಿಕ್ಕುವ ಗಾಳಿ,ಮತ್ತೆ ಸೋಕುವ ಸೂರ್ಯ
ಸುತ್ತ ಸೆರುವ ಗೆಳೆಯರ ಗುಂಪು

ಕಳೆದುಕೊಂಡಲ್ಲಿ ಹುಡುಕು
ಕಡಿದುಕೊಂಡಿರುವ ಬದುಕು
ಸುಲಭವಲ್ಲ,ಹೊರ ದಾರಿಯಿಲ್ಲ
ಬಾಗಿಲಿರದ ಗೋಡೆ
ಹೋದಲ್ಲೆಲ್ಲಾ ತಡೆ...
ಒಡೆದು ಅರಳಬೇಕು .. ಇಲ್ಲಾ
ಒಳಗೆ ನರಳಬೇಕು..

----ಪ್ರೀತಿಯಿಂದ ಪ್ರವಿ

Tuesday, January 4, 2011

ಕಾಡುವ ಕಾಡು ಹೂ..
































ಬಾಡಿ ಹೋಗುವ ಮುನ್ನ
ಕಾಡು ಹೂವಿಗೊಂದು ಆಸೆ
ಅರಳಿಸಿದವನ್ಯಾರೋ..? ಅರಸಬೇಕು..

ಘೋರ ಕಾಡಿನ ನಡುವೆ
ಬಿರಿದು ನಿಂತಿರುವೆ
ಬಿಸಿಲು ಬೀಳಲಿ,ಬಿಡಲಿ
ಬೆಳಕಿನ ಕುರುಹು ಸಿಕ್ಕರೆ ಸಾಕು
ಅರಳಿ ಕಾದಿರುವೆ
ನೋಡುವ ಕುತೂಹಲ ಎಸಳಿನ
ಕಣ ಕಣದಲ್ಲಿ. ಕಣ್ಣಲ್ಲಿ..

ರವಿಯ ದರ್ಶನವಿಲ್ಲ
ಒಲವ ಸ್ಪರ್ಷವಿಲ್ಲ
ಮುಡಿಯ ಸೇರುವ ಮಾತು ಹಾಗಿರಲಿ
ನೋಡಿ ನಲಿಯುವವರಿಲ್ಲ

ಸೆಟೆದು ನಿಂತಿದೆ ಮರ
ನೆರಳು ನೀಡುತಿದೆಯಂತೆ.. ಧಿಮಾಕು
ಯಾರಿಗೆ ಬೇಕು?..
ಅಡ್ಡಿಯಾಗುತಿದೆಯೇಕೆ ಬರಲು ಬೆಳಕು

ಅರಳಿಸಿದವನ್ಯಾರಾದರೇನು
ಆಳುವವರಿಗೇನು ಕಮ್ಮಿಯಿಲ್ಲ
ಆಸೆಯ ಅದುಮಿಟ್ಟು
ಮಧುವನರಸಿ ಬಂದವರಿಗೆ
ಮೈ ನೀಡಬೇಕಂತೆ..
ಮೈ ತುಂಬಿದಾಗ ಹೂ ದುಂಬಿ
ಪ್ರಕೃತಿ ಧರ್ಮವಂತೆ..
ಆಸೆಯ ಮೇಲೆ ಅತ್ಯಾಚಾರ
ಬೆತ್ತಲಾದ ದೇಹದಲ್ಲಿ
ಬತ್ತಿಹೋಗಿದೆ ಮಕರಂದ
ದುಂಬಿಯೂ ಈಗ ದೂರ..

ಕಮರಿ ಹೋಗಿದೆ ಆಸೆ
ದೇಹದಂತೆ..
ಉದುರುತ್ತಿದ್ದೇನೆ!
ಕಾನನದಲ್ಲಿ ಕ್ರೌರ್ಯ..
ಹುಟ್ಟುವ ಕಾಯಿಗಾದರೂ
ಕಾಣಿಸುವನಾ...??
ಉತ್ತರಿಸುವವರ್ಯಾರು ?
ಮುಳುಗಿಹೋದ ಸೂರ್ಯ....