Sunday, March 28, 2010

ಪ್ರೀತಿ ಗಣಿ,ನನ್ನರಗಿಣಿ













ಹೃದಯ ಲೇಖನಿ ತುಂಬಾ

ತುಂಬಿರುವೆ ಪ್ರೀತಿ ಶಾಯಿ

ಮನದ ಪುಸ್ತಕದ ಮೇಲೆ

ಗೀಚಿದ್ದು ನಿನ್ನ ಛಾಯೆ


ಎಳೆದ ಪ್ರತಿ ರೇಖೆಯೂ

ನಿನ್ನದೇ ತದ್ರೂಪ

ಬರೆದ ಪ್ರತಿ ಅಕ್ಷರವೂ

ಬಣ್ಣಿಸಿದೆ ಅಪರೂಪ,ಈ ರೂಪ


ಬರೆದಷ್ಟೂ ಉಂಟು,ನಲ್ಮೆಯ ನಂಟು

ಖಾಲಿಯಾಗುವುದಿಲ್ಲ ಲೇಖನಿ

ಬಗೆದಷ್ಟೂ ಸಿಗುವ,ಮೊಗೆದಷ್ಟೂ ಮಿಗುವ

ಪ್ರೀತಿ ತುಂಬಿದ ಗಣಿ

ವರ್ಣನೆಗೆ ಸಿಗದ,ಬಣ್ಣಿಸಲು ಬಾರದ

ಓ ಸೌಂದರ್ಯ ಖನಿ


ಪುಟ ಪುಟವೂ ಈಗ

ಒಂದೊಂದು ಪದ್ಯ

ಕಿರುಕಥೆ ಮಧ್ಯೆ ಮಧ್ಯ

ಖಾಲಿಯಾಗಿದ್ದ ಮನದ

ಮೂಲೆಯನೂ ಆವರಿಸಿದೆ

ನೀನು ದೀರ್ಘಗದ್ಯ

ಮತ್ತು ಇದು ನಿನ್ನಿಂದ ಮಾತ್ರ ಸಾಧ್ಯ


ಪ್ರೀತಿಯಿಂದ

ಪ್ರವಿ


Thursday, March 4, 2010

ಎಚ್ಚೆತ್ತುಕೊಳ್ಳೋ ಮೂಡ ಮನುಜ































ಸುತ್ತ ರಣ ಬಿಸಿಲು
ಕಣಕಣವೊ ಸುಡುವಂತೆ
ಕಾಂಕ್ರೀಟ್ ಕಾಡಿನ ನಡುವೆ
ಹಾಯುತಿದ್ದ ಕಿರಣಗಳು
ಲೇಸರ್ ನ ಪಡಿಯಚ್ಚು
ಬಹುಮಹಡಿ ಮುಂದೊಂದು ಬೋನ್ಸಾಯ್
ಹಾಕಿದೆ ಪ್ರಕೃತಿ ರಕ್ಷಣೆಯ ಸೋಗು
ಬಿಸಿಲು ತಡೆಯುವುದೆಲ್ಲಿಂದ
ಬಿದ್ದರೆ ತಾನೇ !!
ಒಂದೇ ಒಂದು ಮರವಿಲ್ಲ
ಬಟ್ಟಾಂಬಯಲಿನಲ್ಲಿ!!!
ಬಿರಿದ ಭೂಮಿ ಆದಷ್ಟು
ಕಿರಣವ ಒಳ ತಳ್ಳುತ್ತಿದೆ !!
ಗರಗಸ ಕೊಡಲಿ ಹಿಡಿದ
ಮರಭಕ್ಷಕರೂ ಹೊರತಲ್ಲ ಸೆಖೆಗೆ
"ಅಯ್ಯಯ್ಯಪ್ಪಾ ಉರಿ ಬಿಸ್ಲು", ಹೇಳುತಿದ್ದ ಮಾತು !!!
ಅದೇ ಮರದ ನೆರಳಲ್ಲಿ ಕುಳಿತು!!
ಹತ್ತಿಪ್ಪತ್ತು ಹನಿ ನೀರಿದ್ದ ಕೆರೆ (!)ಯಲ್ಲಿ
ಮುಖ ನೋಡುತ್ತಾ ಹೇಳುತಿದ್ದ ಸೂರ್ಯ
ಸರ್ವ ಜೀವಕ್ಕೇ ನಾನೇ ಆಧಾರ
ಕೊನೆಯ ಹನಿಯೂ ಆರುತ್ತಿದ್ದಂತೆ
ಕೂಗಿದುವು ಇದ್ದೆರಡು ಮೀನುಗಳು
ಸೂರ್ಯ,ನೀನೊಬ್ಬ ಸುಳ್ಳುಕೋರ
ಬೀಗುತಿದ್ದ ಸೂರ್ಯನೂ ಕುಗ್ಗಿದ
ಆದರೆ ಮನುಜ!!! ಮಜಾ!!
ಸೈಟಿಗಾಯಿತಲ್ಲಾ ಒಂದು ಜಾಗ
ಅಳೆಯುತ್ತಿದಾನೆ ಟೇಪು ಹಿಡಿದು
ಸತ್ತುಬಿದ್ದ ಮೀನನ್ನು ತುಳಿದು!!
ತಲೆಗೊಂದು ಛತ್ರಿ,
ಬಿಸಿಲೇರಿದಂತೆಲ್ಲಾ ಬಿಸ್ಲೇರಿ!
ಬೆಂಕಿ ಬಿದ್ದ ಭೂಮಿ ಹೇಳುತಿತ್ತು
ಇದನೆಲ್ಲಾ ನೋಡಿ...
ಹೂಂ , ವಿನಾಶ ದೂರವಿಲ್ಲ
ಅಳಿ, ಆರಡಿ.. ಮೂರಡಿ..



ಎಚ್ಚೆತ್ತುಕೊಳ್ಳೋ........


ಪ್ರೀತಿಯಿಂದ ಪ್ರವಿ