Friday, August 27, 2010

ನೀನೇನಾ?ನೀನೇ-ನಾ !!!


ಮುಂಜಾನೆ ವೇಳೆ
ಹಸಿರೆಲೆಯ ಮೇಲೆ
ಇಬ್ಬನಿ ಕಟ್ಟಿದೆ ಮುತ್ತಿನ ತೋರಣ
ಹನಿಹನಿಗಳಲ್ಲಿ
ಹೂ ನಗೆಯ ಚೆಲ್ಲಿ
ಕಾಡುತಿಹ ಬಿಂಬವದು ನೀನೇನಾ?

ಸೋಕಲು ಸೂರ್ಯನ
ಬೆಚ್ಚನೆ ಕಿರಣ
ಇಬ್ಬನಿ ಕರಗಿದೆ ಹೇಳದೇ ಕಾರಣ
ಹನಿಯಲಿ ಹೊಳೆಯುತ
ಸುಮ್ಮನೆ ನಾಚುತಾ
ಕಣ್ತಪ್ಪಿಸಿ ಕಾಣೆಯಾದ ಕಿನ್ನರಿ ನೀನೇನಾ?

ಎಲೆಗಳ ಮರೆಯಲಿ
ಹಕ್ಕಿಯ ಚಿಲಿಪಿಲಿ
ಮತ್ತದೋ ಕೋಗಿಲೆ ಮಂಜುಳ ಗಾನ
ಮಧುರದಿ ಹಾಡಿದ
ಮನವನು ತಣಿಸಿದ
ಕೇಳಲು ಮುದವಾದ ದನಿಯದು ನೀನೇನಾ?

ಮುಸ್ಸಂಜೆ ಸಮಯ
ಸೌಂದರ್ಯಮಯ
ಆಗಸದ ರಂಗೋಲಿಗೆ ನೇಸರನದೇ ಬಣ್ಣ
ಮನ ಕಣಕಣದಲ್ಲೂ
ಕಾಮನಬಿಲ್ಲು
ಮೂಡಿಸಿ ಮಾಯವಾದ ಮೋಹಿನಿ ನೀನೇನಾ?

ಕನ್ನಡಿ ತುಂಬಾ
ನಿನ್ನದೇ ಪ್ರತಿಬಿಂಬ
ಕಾಣದಾದೆ ನನ್ನೇ ನಾ,ನಾನಿನ್ನು ನಾನಾಗಿ ಉಳಿದೇನಾ?
ಎಲ್ಲೆಲ್ಲೂ ನೀನೇ
ಆವರಿಸಿದೆ ನನ್ನೇ
ಉಳಿದಿಲ್ಲ ಅನುಮಾನ,ಈಗ ನೀನೇ-ನಾ !!!

ಪ್ರೀತಿಯಿಂದ ಪ್ರವಿ
Friday, August 13, 2010

ಹೆಸರಿನ ಹುಚ್ಚು ಹತ್ತಿದಾಗ !!!ಕವನದ ಮೇಲೆ ಕಥೆ.. ಕವನದಂತಾ ಕಥೆ.. ಕಥೆನೇ ಹೌದಾ? ಏನೊ ಒಂದು.." ಹೆಸರಿನ ಹುಚ್ಚು ಹತ್ತಿದಾಗ" ಕಥೆಯಲ್ಲದ ಕಥೆ.. ಓದಿ ನಿಮ್ಮಭಿಪ್ರಾಯ ಹೇಳಿ..

ಪ್ರೀತಿಯಿಂದ ಪ್ರವಿ


ಅವನು ಮನಸ್ಸಿಟ್ಟು ಬರೆದಿದ್ದೆಲ್ಲಾ ಕವನ.ಸುಮ್ಮನೆ ಖುಷಿ ಆದಾಗ ,ದುಃಖ ಆದಾಗ ಏನೇನೋ ಗೀಚುತ್ತಿದ್ದ.ಬಾಳಿನ ಅನರ್ಥಗಳೆಲ್ಲಾಕವನದಲ್ಲಿ ಅರ್ಥ ಕಂಡುಕೊಳ್ಳುತ್ತಿದ್ದವು.ಅವನ್ಯಾವತ್ತೂ ಕವನ ಬರೆಯಬೇಕೆಂದು ಕೂರುತ್ತಿರಲಿಲ್ಲ,ಆದರೆ ಭಾವ ತೀವ್ರತೆಯಾದಾಗ ಕೂತಲ್ಲೆಲ್ಲಾ ಕವನ ಹುಟ್ಟುತ್ತಿತ್ತು.ಹೇಳಿಕೊಳ್ಳುವಂಥಾ ಗೆಳೆಯರೂ ಕೂಡಾ ಅಷ್ಟಿರಲಿಲ್ಲ. ಹೇಳಿಕೊಳ್ಳುವುದಕ್ಕೆ ಅವನಿಗೆ ಗೆಳೆಯರೂ ಬೇಕಿರಲಿಲ್ಲ.ಮನಸ್ಸಿನೊಂದಿಗೇ ಮಾತುಕತೆ,ಮಂಥನ ನೆಡೆದಾಗಲೆಲ್ಲಾ ಪದಗಳ ಜನನ ,ಪದ ಪೊಣಿಸಿ ಕವನ.

ಜಾಲಿ
ಮೂಡಿನಲ್ಲಿದ್ದಾಗ ಮನೆಯಲ್ಲೇ ಜೋಲಿ ಹೊಡೆಯುತ್ತಿದ್ದ.ಕುಳಿತಲ್ಲೆಯೇ ಕನಸು ಕಟ್ಟುತ್ತಿದ್ದ ,ಕನಸಿನರಮನೆಯಲ್ಲಿ ರಾಜಕುಮಾರನಾಗಿ ರಾರಾಜಿಸುತ್ತಿದ್ದ.ವಾಸ್ತವಕ್ಕೆ ಬಂದಾಗ ಮನಸ್ಸು ಸಂತೋಷದ ಆಗಸದಲ್ಲಿ ತೇಲುತ್ತಿತ್ತು.ತೀರಾ ದುಃಖವಾದಾಗ ಮಾತ್ರ ಅವನ ಸಂಗಾತಿ ಹೊಳೆ ತೀರ. ಸಣ್ಣಗೆ ಜುಳುಜುಳು ಹರಿಯುವ ಹೊಳೆ,ಮಾಮರದಲ್ಲಿ ಅಡಗೆ ಕುಳಿತ ಕೋಗಿಲೆಯಕೂಗು,ಕಣ್ಣು ಹಾಯಿಸಿದಷ್ಟೂ ಕಾಣಿಸುವ ಹಸಿರು, ಕಾಳನ್ನರಸುತ್ತಿರುವ ಹಕ್ಕಿಗಳ ಹಿಂಡು,ಕೂಳನ್ನರಸುತ್ತಿರುವ ಜಾನುವಾರುಗಳು ನೋಡುತ್ತಾ ಕುಳಿತರೆ ಮನಸಿಗೇನೋ ಮುದ.ದುಃಖವೂ ಕೂಡ ನೀರಿನೊಂದಿಗೆ ಹರಿಯುತ್ತಾ ಹೊಗುತ್ತಿತ್ತು.ತಂಗಾಳಿ ಸಾಂತ್ವನದ ಸ್ಪರ್ಷ ನೀಡುತ್ತಿತ್ತು,ಸುಮ್ಮನೆ ಬೆನ್ನು ತಟ್ಟುತ್ತಿತ್ತು .ಬದುವಿನಲ್ಲಿದ್ದ ಗರಿಕೆ ಹುಲ್ಲು,ಎಸ್ಟೇ ತುಳಿದರೂ ಸ್ವಲ್ಪ ಅವಕಾಶ ಸಿಕ್ಕಿದರೆ ಸಾಕು ಚಿಗುರುವೆವು ಎನ್ನುತ್ತಾ ಆಶಾವಾದಿಯಾಗಿದ್ದವು, ನೊಂದ ಮನಸ್ಸಿಗೆ ಸಮಾಧಾನ ಹೇಳುತ್ತಿದ್ದವು. ಕೋಗಿಲೆ ತಾನು ಹಾಡಲು ಇವನ ಸಾಹಿತ್ಯ ಬೇಡುತ್ತಿದ್ದವು .ಅರಿವಿಲ್ಲದಂತೆ ಮನಸ್ಸಿನಲ್ಲಿ ಕವನ ಹುಟ್ಟಿ ಹಾಡಾಗುತ್ತಿತ್ತು.ಎದೆಯ ಭಾವಕ್ಕೆ ರಾಗವೇಕೆ? ಹೊಳೆಯ ಜುಳುಜುಳು ,ಹಕ್ಕಿಯ ಕಿಚಪಿಚ ತಾಳವಾಗುತ್ತಿತ್ತು.ಕೋಗಿಲೆ ದನಿಗೂಡಿಸುತ್ತಿತ್ತು, ಗರಿಕೆ ತಲೆದೂಗುತ್ತಿತ್ತು.ಹೃದಯ ಹಗುರವಾಗಿ ,ಮನಸು ಹೊಸತೊಂದು ಕನಸು ಕಟ್ಟುತ್ತಿತ್ತು.ದುಃಖ ದೂರವಾಗಿರುತ್ತಿತ್ತು.ಅದ್ಭುತವಾದ ಕವಿತೆಯೊಂದಿಗೆ ಮನೆಗೆ ವಾಪಾಸಗುತ್ತಿದ್ದ.

ದುಃಖದಲ್ಲಿದ್ದಷ್ಟು ತೀವ್ರತೆ ಖುಷಿಯಲ್ಲಿರುವುದಿಲ್ಲ,ಅದು ನೇರವಾಗಿ ಹೃದಯಕ್ಕೇ ತಟ್ಟುತ್ತದೆ.ತಟ್ಟುವುದು ಮಾತ್ರವಲ್ಲ ಒಳಹೋಗಿ ಕುಳಿತುಬಿಡುತ್ತದೆ.ಸಮಾಧಾನವಾಗುವುದು ಹೊರ ಹಾಕಿದಾಗ ಮಾತ್ರ , ಕಣ್ಣೀರು ರೂಪದಲ್ಲೋ,ಬೇರೆಯವರೊಂದಿಗೆ ಮಾತಿನರೂಪದಲ್ಲೋ, ಕವನದ ರೂಪದಲ್ಲೋ ..ಇವನಿಗೆ ಕಣ್ಣೀರೆಲ್ಲಾ ಕವನಗಳಾಗಿ ಹರಿಯುತ್ತಿದ್ದವು ...

ಅದೆಲ್ಲಿಂದ
ಬಂತೋ ಅದೊಂದು ದಿನ ಅವನಿಗೆ ಹೆಸರು ಮಾಡಬೇಕೆಂಬ ಹುಚ್ಚು ಯೋಚನೆ.ಯಾರ್ಯಾರೋ ಪ್ರಸಿದ್ಧಿ ಅಗಿರುವಾಗ ತಾನು ಇಷ್ಟೆಲ್ಲ್ಲಾ ಬರೆದೂ ಯಾಕೆ ಸುಮ್ಮನಿರಬೇಕೆಂಬ ಆಲೋಚನೆ.ಸರಿ, ಮೊದಲನೇ ಮೆಟ್ಟಿಲಾಗಿ ಕಂಡ ಕಂಡ ಪತ್ರಿಕೆಗೆಲ್ಲಾ ತಾನು ಬರೆದ ಕವನ ಕಳಿಸತೊಡಗಿದ.ಮೊದಲೆಲ್ಲಾ ಮೂಲೆಯಲ್ಲೆಲ್ಲೋ ಒಂದು ಕಡೆ ಅಚ್ಚಾಗುತ್ತಿದ್ದ ಕವನ ದಿನ ಕಳೆದಂತೆ ಜನಪ್ರಿಯವಾಗತೊಡಗಿತು.ಪತ್ರಿಕೆಯವರೇ ಖುದ್ದಾಗಿ ಕೇಳಿ ಪ್ರಕಟಿಸತೊಡಗಿದರು.ಹೆಸರಿಲ್ಲದವನು,ಹೆಸರಿಗಾಗಿ ಹಂಬಲಿಸಿದವನು ಹೆಸರುವಾಸಿಯಾದ.

ಹಣ
ಅಥವಾ ಹೆಸರು ಬಂದಂತೆಲ್ಲಾ ಇನ್ನೂ ಬೇಕೆನ್ನುವುದು ಮನುಷ್ಯನ ಸ್ವಭಾವ ಅಥವಾ ದೌರ್ಭಲ್ಯ ಅನ್ನಬಹುದು.ಇನ್ನೊಂದುಮಾತಿನಲ್ಲಿ ಹೇಳುವುದಾದರೆ ಹಣವಿದ್ದ ಕಡೆ ಹಣ, ಹೆಸರಿದ್ದ ಕಡೆ ಹೆಸರು ತನ್ನಂತಾನೆ ಬರುತ್ತಾ ಹೋಗುತ್ತೆ.ನೀರಿದ್ದ ಕಡೆ ನೀರುಹರಿಯುತ್ತಲ್ಲ ಹಾಗೆ !!!.

ದಿನೇ ದಿನೇ ಬೆಳೆಯುತ್ತಾ ಹೋದ ಇವನ ಕವನಗಳಿಗೀಗ ಬಹಳ ಬೇಡಿಕೆ.ಇವನ ತೂಕವೂ ಹೆಚ್ಚುತ್ತಾ ಹೋಯಿತು.ಭಾವನೆಗಳಿಗೆ ಬರೆಯುತ್ತಿದ್ದ ಬೆಲೆಕಟ್ಟಲಾಗದ ಕವನ ಇವನು ಕೇಳಿದಷ್ಟು ಬೆಲೆಗೆ ಬಿಕರಿಯಾಗುತ್ತಿದ್ದವು.ಮನಸ್ಸಿರಲಿ,ಬಿಡಲಿ ಬರೆಯಬೇಕಿತ್ತು ಬರೆಯುತ್ತಿದ್ದ.. ಹಣಕ್ಕಾಗೆ ..ಹೆಸರಿಗಾಗಿ.ಪ್ರಸಿದ್ಧಿಯಾದ ಇವನ ಸುತ್ತಲೂ, ಹೋದಲ್ಲೆಲ್ಲಾ ಅಭಿಮಾನಿಗಳ ಹಿಂಡು .ಗೀಚಿದ್ದೆಲ್ಲಾಅತ್ಯದ್ಭುತವೆಂದು ಓದುವ ಜನ (ಪ್ರಸಿದ್ದಿಗೆ ಬಂದರೆ ಹೀಗೇ).ಬರಿದಾದ ಭಾವನೆಗೂ ಸಂಭಾವನೆ!!
..

ಒಳಗಿದ್ದ ಕವಿ ನಿಜ ಹೃದಯ ಬದುಕಲೂ ಆಗದೇ ಸಾಯಲೂ ಆಗದೆ ಒದ್ದಾಡುತ್ತಿತ್ತು. ದಿನ ಆಕಸ್ಮಿಕ ಅವಘಡಗಳಿಂದ ಒದ್ದಾಡುತ್ತಿದ್ದಅವನ ಮನ ಏಕಾಂತ ಬಯಸುತ್ತಿತ್ತು.ಅದಕ್ಯಾವ ಹಣವೂ ಬೇಕಿರಲಿಲ್ಲ,ಹೆಸರಿನ ಹಂಗೂ ಕೂಡ ಇರಲಿಲ್ಲ.ಬೇಕಿದ್ದಿದ್ದು ಪುಟ್ಟದೊಂದು ಸಮಾಧಾನ, ಯಾರೂ ಇರದ ಹೊಳೆದಂಡೆ, ಕೋಗಿಲೆಯ ನಾದಸ್ಪರ್ಷ.. ಹಸಿರು ಗದ್ದೆಯ, ಚಿಲಿಪಿಲಿ ಹಕ್ಕಿಗಳ ಸಾಂತ್ವನ ಅಷ್ಟೇ..

ಹೊರಗೆ ಕಾಲಿಟ್ಟ ಇವನಿಗೆ ಸಲಾಂ ಹೊಡೆದು ಕಾರಿನ ಬಾಗಿಲು ತೆಗೆದು ಕಾಯುವ ಡ್ರೈವರ್ ,ಇವನಿಗಾಗಿ ಕಾದಿದ್ದ ಜನಗಳು ..ಮನಸು ಮೂರಾಬಟ್ಟೆ.. ಏನೂ ಬೇಡವೆಂದು ಒಳಗೆ ಅಡಿಯಿಟ್ಟರೆ ಸಾಲು ಸಾಲಾಗಿ ,ಪ್ರತಿಷ್ಠೆಗಾಗಿ ಪೇರಿಸಿಟ್ಟ ಇವನದೇ ಕವನ ಸಂಕಲನಗಳು ಅಣಕಿಸುತ್ತಿದ್ದವು.ಭೂತ ಬಂಗಲೆಯೊಳಗೆ ಬೇಕಾದಷ್ಟು ಏಕಾಂತ ...ಆದರೆ ನೆಮ್ಮದಿಯಿಲ್ಲ..ಮನಸ್ಸಿಗೆ ಬೇಕಿರಿವುದು ಇದಲ್ಲ.ಸಮಾಧಾನಕ್ಕಾಗಿ ಬರೆಯಲು ಪ್ರಯತ್ನ ಪಟ್ಟ. ಕವಿತೆಯಲ್ಲ , ತಿಣುಕಿದರೂ ಒಂದು ಪದವೂ ಹುಟ್ಟಲಿಲ್ಲ .


ಒಳಗಿದ್ದ ಕವಿ ಪೂರ್ತಿ ಸತ್ತಿದ್ದ...ಕವನಗಳೆಲ್ಲಾ ಕಣ್ಣೀರಾಗಿ ಹರಿದಿದ್ದವು ...