Tuesday, September 22, 2009

ಕಾರಣ ನಿನ್ನನು ಪ್ರೀತಿಸುವೆ !!!!!

ಮಳೆಯ ನಾ ತಡೆಯಲಾರೆ
ಕೊಡೆಯಾಗಿ ನಾನಿರುವೆ
ಬಿಸಿಲ ನಾ ಬೆದರಿಸಲಾರೆ
ನೆರಳಾಗಿ ಜೊತೆಯಿರುವೆ

ದುಃಖದ ಭಾರದಿ ಬಳಲುತಿರೆ
ಹೆಗಲಿಗೆ ನಾ ಹೆಗಲ್ಕೊಡುವೆ
ಆದರೂ ನಿನ್ನಲಿ ಆಗದಿರೆ
ನಿನ್ನಯ ಭಾರವ ನಾ ಹೊರುವೆ

ಕತ್ತಲೆಯ ನಾ ಕಳುಹಿಸಲಾರೆ
ದೀಪದಿ ಹಾದಿಯ ಬೆಳಗಿಸುವೆ
ದಾರಿಯು ಕಾಣದೆ ತೊಡರುತಿರೆ
ಕೈ ಹಿಡಿದು ಮುನ್ನೆಡೆವೆ

ಕಷ್ಟವೇ ಆದರೂ ಕದಲಲಾರೆ
ಇಷ್ಟದೀ ನಿನ್ನ ರಕ್ಷಿಸುವೆ
ಏನನೂ ಮಾಡದೇ ನಾನಿರಲಾರೆ
ಕಾರಣ ನಿನ್ನನು ಪ್ರೀತಿಸುವೆ

--------------------- ಪ್ರೀತಿಯ ಪ್ರವಿ ...

Monday, September 14, 2009

ನನ್ನವಳ ರಕ್ಷಣೆ ನನ್ನ ಹೊಣೆ :)

ಮಳೆಯೇ ನೀ ಮರೆಯಾಗು
ನನ್ನವಳು ನೆಂದಾಳು
ಬಿಸಿಲೆ ನೀ ಬದಿಗೋಗು
ನನ್ನವಳು ಬೆಂದಾಳು

ಬಿರುಗಾಳಿ ಬೀಸದಿರು
ನಿನ್ನಬ್ಬರವಿನ್ನು ಸಾಕು
ತಂಗಾಳಿ ಬಳಿಸಾಗು
ನನ್ನವಳ ಮುಖ ಸೋಕು

ಚಂದಿರನೆ ಚಲಿಸದಿರು
ಬೆಳದಿಂಗಳಲಿ ನಿಂತಿಹಳು ನನ್ನವಳು
ಮೋಡಗಳೇ, ಮರೆಸದಿರಿ ಚಂದಿರನ
ಚೆದುರೀತು ನನ್ನವಳ ಕನಸುಗಳು