Thursday, June 12, 2014

ಊರ್ಮಿಳಾ !

( ಮೊದಲೇ ಬರೆದಿದ್ದ ಕವನ , ಎಲ್ಲೂ ಪೋಸ್ಟ್ ಮಾಡಿರಲಿಲ್ಲ .. ಈ ತಿಂಗಳ ಸಂಪದ ಸಾಲು ಪತ್ರಿಕೆಯಲ್ಲಿ ) 






ಅನಾಯಾಸವಾಗಿ ನೀ ಹೊರಟೆ 
ಅನಿವಾರ್ಯವಾಗಿ   ನಾ ಬಿಟ್ಟೆ 

ಅಣ್ಣನಿಗೆ ಹೆಜ್ಜೆ 
ಅತ್ತಿಗೆಗೆ ನೆರಳು 
ಕಟ್ಟಿಕೊಂಡವಳ ಜೊತೆ  ಉಳಿದದ್ದು  ಮಾತ್ರ 
ಕತ್ತಿನಲ್ಲಿದ್ದ  ತಾಳಿ 
ಮತ್ತೆ  .. 
ಬೆಟ್ಟದಷ್ಟು ಜವಾಬ್ದಾರಿ !

ಕಂಡ ಸಾವಿರ ಕನಸ 
ಕರುಣೆಯಿಲ್ಲದೇ ಕೊಂದೆ 
ಕೇಳುವ ಕಿವಿಯೇ ದೂರ 
ಸರಿದ ಮೇಲೆ ಮನ ಮೌನ 
ಸುಮ್ಮನೆ ಮುಚ್ಚಿಕೊಂಡೆ !

ಎದ್ದಾಗ ಎದುರಿಲ್ಲ
ಬಿದ್ದಾಗ ಬಲವಿಲ್ಲ
ಕುದ್ದಾಗ ತಂಪಿಲ್ಲ 
ಸರಸ , ಸಲ್ಲಾಪ ... ಪಾಪ !
ಭಾವಕ್ಕೆ , ಭೋಗಕೆ ಬೀಗ 
ಅಳುವಂತಿಲ್ಲ , ಆಡುವಂತಿಲ್ಲ 
ಇದ್ಯಾವ ತ್ಯಾಗ ?

ಅದ್ಯಾವ ಪುರುಷಾರ್ಥ !
ಅದ್ಯಾವ ಪುರುಷತ್ವ 
ಬೇಕೆನಿಸಲಿಲ್ಲವೇ ಸಹವಾಸ 
ಸಾಕೆನಿಸಿತೇ ಸಾಮಿಪ್ಯ ?
ನಿನಗೆ ಬರೀ ಹದಿನಾಲ್ಕು 
ಕಾದು ಬೂದಿಯಗುತಿದೆ ಭಾವ 
ಉಳಿಯುವುದು ಬರೀ ಜೀವ !
ನನಗೆ ಪೂರ್ತಿ ವನವಾಸ 
ನೀ ಬಂದ ನಂತರವೂ !

ಮೋಸ ....
ಕಿವಿಯಲ್ಲಿ ಕಾದ ಸೀಸ 
ಹುಸಿಯಾದ ಆ ವೇದ ಘೋಷ 
ಧರ್ಮೆಚ, ಅರ್ಥೇಚ , ಕಾಮೇಚ 
ನಾತಿ ಚರಾಮಿ !
ಬಾಯ್ದೆರೆದು ನುಂಗಬಾರದೇ ಭೂಮಿ !! 

................................................................ಪ್ರವಿ !