Friday, November 16, 2012

ಎದ್ದರಷ್ಟೇ ಎದುರಿಸಲು ಸಾಧ್ಯ



ಸಂಪದ ಸಾಲಿನಲ್ಲಿ ಪ್ರಕಟವಾದ ನನ್ನ ಕವನ 

clear ಆಗಿ ಓದಲು ಕೆಳಗೆ ಮತ್ತೆ type ಮಾಡಿದ್ದೀನಿ ಓದಿ 



ಬಲವಿಲ್ಲದವನು
ಬಾಲವೇನೂ....
ಬುಡಕ್ಕಿಟ್ಟರೂ ಅಷ್ಟೇ..
ಲಂಕೆ ಬಿಟ್ಟ
ಹನುಮ ಸುಟ್ಟ
ಭ್ರಷ್ಟ ಸಂತುಷ್ಟ !

ಅಂಡು ತೊಳೆಯಲೂ
ಅಂಡಲೆಯಬೇಕು ಇಲ್ಲಿ !
ಲಂಕೆಯಲ್ಲಿ ಬಾಟಲಿಗಳು
ಸದ್ದು ಮಾಡುತ್ತಿವೆ !

ಹೊಟ್ಟೆಗಿಲ್ಲದೇ ಸತ್ತ
ಹೊಟ್ಟೆ ಹುಳುಗಳ ಮೇಲೆ
ರಾವಣನ ಅರಮನೆ ಮಿರಮಿರ !
ಒಬ್ಬನ ಸಮಾಧಿ
ಇನ್ನೊಬ್ಬನ ಬುನಾದಿ !

ಕೂಳಿಲ್ಲದವನು
ಗೋಳಿಡುತ್ತಿದ್ದಾನೆ !
ಕುಂಭಕರ್ಣನಿಗೆ
ಇನ್ನಾರು ತಿಂಗಳು ನಿದ್ದೆಯಂತೆ !

ರಾಮ ತ್ರೇತಾದಲ್ಲಿ ಇದ್ದನೆಂಬ ಸುದ್ದಿ
ವಿಭೀಷಣನ ವಿಳಾಸ ಸಿಗುತ್ತಿಲ್ಲ !

ಎದ್ದರೆ ಗೆದ್ದೆ
ಬಿದ್ದರೆ ಗುದ್ದೇ ...
ಶಾಯಿ ಬತ್ತಿರುವ ಲೇಖನಿ
ಬದಿಗೊತ್ತಿ
ಬಡ್ಡಾದರೂ ಸರಿ
ಹಿಡಿ ಕತ್ತಿ !

ಮುಂದೊಂದು ದಿನ ರಾವಣ
ಸತ್ತರೂ ಸತ್ತಾನು !