Tuesday, November 16, 2010

ಮುರಿದು ಮೌನ ಹಾಡು ಗಾನ






























ಮನದ
ಮಾಮರದಲ್ಲಿ
ಅಡಗಿರುವ ಕೋಗಿಲೆಯೇ
ಮೌನವೇಕೇ? ನಿನಗೆ ಮೌನವೇಕೇ?

ರೆಂಬೆ ಕೊಂಬೆಯಲೂ ಚೆಲುವು ಚಿಗುರಿತ್ತು ಅಂದು
ಮರದ ತುಂಬೆಲ್ಲಾ ಹಸಿರಿನಾ ಸಿಂಧು
ಎಲೆಗಳ ಮರೆಯಿಂದ ಕುಹೂ ಕುಹೂ ಗಾನ
ಹಾಡಿದ್ದ ಕೋಗಿಲೆಯೇ ಇಂದೇಕೆ ಮೌನ?

ಮನದ
ಮಾಮರದಲ್ಲಿ...

ಪ್ರೀತಿ ಹರಿದಿತ್ತು ಧಮನಿ ಧಮನಿಯಲೂ
ಭೀತಿಯಿರದೇ.. ಅದು ಸಂತಸದಾ ಬಾಳು
ಕಣ ಕಣದಲ್ಲೂ ವಸಂತನಾ ಆಗಮನ
ಅಂದು ಹಾಡಿದ್ದ ನೀನು ಇಂದೇಕೆ ಮೌನ ?

ಮನದ
ಮಾಮರದಲ್ಲಿ...

ಬಂದೆಯಾಕೇ ಬಾಳಿನಲ್ಲಿ ಶಿಶಿರ
ನಿಲ್ಲಿಸಲು ನನ್ನ ಪ್ರೀತಿ ಉಸಿರ..
ಬೆತ್ತಲಾಗಿದೆ ಮರವೀಗ ಎಲೆ ಉದುರಿ
ಬತ್ತಿ ಹೋಗಿದೆ ಮನ ಪ್ರೀತಿ ಚದುರಿ..

ಮನದ ಮಾಮರದಲ್ಲಿ...

ಹಾಡಲಾರೆಯಾ ಕೋಗಿಲೆಯೇ ಒಂದು ಸಲ
ಹುಡುಕಿ ಬರುವಂತೆ ವಸಂತ ನಿನ್ನ ಮೂಲ
ಹಾಡು ನೀ ಮತ್ತೆ ಚಿಗುರುವಂತೆ ಮರದ ಎಲೆ
ಹಾಡು ನೀ ಮತ್ತೆ ಹುಟ್ಟುವಂತೆ ಪ್ರೀತಿ ಸೆಲೆ

ಮನದ ಮಾಮರದಲ್ಲಿ
ಅಡಗಿರುವ ಕೋಗಿಲೆಯೇ..
ಮೌನವೇನಾ?ಮುರಿದು ಹಾಡು ಗಾನ