Friday, May 6, 2011

ನಾನು ಊರಿಗೆ ಹೋದಾಗ ತೆಗೆದ ಕೆಲವು ಫೋಟೊಗಳನ್ನು ಫೇಸ್ ಬುಕ್ ನಲ್ಲಿ ಹಾಕಿದ್ದೆ. ಅದನ್ನ ನೋಡಿ ಗೆಳೆಯ ಮಹಾಬಲಗಿರಿ ಭಟ್ಟರೊಂದು ಕವನ ಬರೆದು "ನೋಡು ನೀನು ಒಂದು ನವ್ಯ ಶೈಲಿಯಲ್ಲಿ ಕವನ ಬರಿಯಕ್ಕು ಶುಕ್ರವಾರದ ಒಳಗೆ ಬರಿಲೇಬೇಕು ಎಂತಾದ್ರು ಮಾಡು" ಹೇಳಿಬಿಟ್ರು.. ನಂಗೆ ಒಳ್ಳೆ ಪಜೀತಿ .. ನಾನು ಫೋಟೋ ನೋಡಿ ಕವನ ಬರೆಯುವುದಿಲ್ಲ .. ಕವನ ಬರೆದು ಆಮೇಲೆ ಫೋಟೋ ಗೂಗ್ಲ್ ಗೆ ಹುಡುಕುವುದು ನನ್ನ ಅಭ್ಯಾಸ.. ಆದರೆ ಅವರ ಪ್ರೀತಿಪೂರ್ವಕ ಸ್ಪೂರ್ತಿಗೆ ಗೆಳೆತನದ ಅಧಿಕಾರದ ಒತ್ತಾಯಕ್ಕೆ ಒಲ್ಲೆ ಹೇಳುವುದು ಸಾಧ್ಯವೇ ಇಲ್ಲ .. ಅದಕ್ಕಾಗಿ ನನ್ನೀ ಕವನ.. ಈ ಫೋಟೋದಲ್ಲಿರುವವರು ನಾಗಿ ಅಂತ. ಮೊದಲೆಲ್ಲಾ ನಮ್ಮನೆ ಕೆಲಸಕ್ಕೆ ಬರುತ್ತಿದ್ದವರು .. ಈಗ ಮುಪ್ಪಡರಿದೆ..

ಮಹಾಬಲಗಿರಿ ಭಟ್ಟರು ನನ್ನೊಬ್ಬನಿಂದಲೇ ಅಲ್ಲ .. ಇನ್ನೂ ಇಬ್ಬರಿಂದ ಬರೆಸಿ ಜುಗಲ್ ಬಂಧಿ ಮಾಡಿದ್ದಾರೆ.. ಕರಾವಳಿ ರೈಲಿನಲ್ಲಿ ಬ್ರಾಡ್ ಗೇಜ್ ಮೇಲೆ ಭರ್ಜರಿ ನಾಲ್ಕು ಕವನಗಳ ರೈಲನ್ನು ಓಡಿಸಿದ್ದಾರೆ. ಒಂದೊಳ್ಳೆಯ ಪ್ರಯತ್ನ.. ಕವನ ಬರೆದ ಗೆಳತಿ ವಾಣಿಶ್ರೀ ಭಟ್ ಮತ್ತು ಪರಾಂಜಪೆ ಸರ್ ಗೆ ಧನ್ಯವಾದಗಳು..

ಇಲ್ಲಿ ನನ್ನ ಕವನವಸ್ಟೇ ಇದೆ .. ಎಲ್ಲಾ ಕವನ ಕರಾವಳಿ ರೈಲು ಸೂರಿನಲ್ಲಿ

http://karavalirail.blogspot.com/



ಮುಪ್ಪು ಸಿಹಿಯಲ್ಲ ಉಪ್ಪು!
-----------

ರಟ್ಟೆ ಗಟ್ಟಿಯಿದ್ದಾಗ
ರೊಟ್ಟಿ ಬೇಕಷ್ಟು ತಟ್ಟಿದ್ದೆ
ಸುಟ್ಟಿದ್ದೆ..
ಅಲ್ಲಷ್ಟು,ಇಲ್ಲಷ್ಟು
ಕಷ್ಟವೆನಿಸಲಿಲ್ಲ ಎಳ್ಳಷ್ಟೂ..
ನೇಸರ ಮೂಡುವ ಮುನ್ನ
ಹುಟ್ಟಿ ..
ಅವ ಸತ್ತಮೇಲೂ ಬದುಕಿದ್ದೆ..

ಅದು ವಸಂತ
ನೋಡಿದ್ದೆಲ್ಲಾ ಚಿಗುರು
ಬೆಳೆದಂತೆಲ್ಲಾ ಹಸಿರು
ಉಮೇದು ,ಉತ್ಸಾಹ ಉನ್ಮಾದ
ಕಾದು ಕರಗಿ ಬೆಂಡಾದರೂ
ಜಗಜಟ್ಟಿ
ತಣಿದಂತೆಲ್ಲಾ ಕಬ್ಬಿಣ
ಬಲು ಗಟ್ಟಿ..

ಕಾಲ ಕರಗಿ ಶಿಶಿರಾಗಮನ ಮುಪ್ಪಡರಿ
ಕಸುವಿನೆಲೆ ಉದುರಿ..
ದೇಹ ಮುದುರಿ..
ಕನಸು ಕಮರಿ..
ಇದು ಬಾಳು ಹಣ್ಣಾದ ಪರಿ

ಹೊಸ ಸೂರ್ಯ ಹುಟ್ಟಿದಂತೆಲ್ಲಾ
ಸಾವು ಹತ್ತಿರ
ಬೆಳಗು,ಮುಳುಗು ವ್ಯತ್ಯಾಸವೇನಿಲ್ಲ
ದೃಷ್ಠಿ ಬಹಳ ದೂರ
ಬಗ್ಗಿ ಕುಗ್ಗಿ ಬಾಗಿಹೋಗಿದೆ ಶರೀರ

ಊರಲೂ ಹರಿಯದ
ದೇಹಕ್ಕೆ..
ಊರುಗೋಲೇ ಭಾರ !!




16 comments:

sunaath said...

ನಿಮ್ಮ ಕವನವನ್ನು ಕರಾವಳಿ ರೈಲಿನಲ್ಲಿ ಈಗಾಗಲೇ ಓದಿದ್ದೇನೆ. ಉತ್ತಮ ಕವನ.

Dileep Hegde said...

ಅದ್ಭುತವಾಗಿವೆ.. ಪ್ರವೀಣ್
ನನ್ನದೂ ಒಂದು ಚಿಕ್ಕ ಪ್ರಯತ್ನ..



ಇಷ್ಟವಾದರೆ ಲೈಕ್ ಮೇಲೊಂದು ಕ್ಲಿಕ್ಕು
ಸಮಯ ಇದ್ರೆ ಸ್ಮೈಲಿ ಜೊತೆ ಒಂದು ಕಮೆಂಟು
ಜೀವನ ಅಂದರೆ ಮಗೂ..
ಜಾಲದಿ ಬೆಸೆವ ಫೇಸ್ ಬುಕ್ಕಲ್ಲ...

ಇಷ್ಟವೋ-ಕಷ್ಟವೋ.. ಹೊಟ್ಟೆ ಹೊರೆಯಲು ಕೆಲಸ
ಅವರಿವರ ಆಜ್ಞೆಗೆ ಹೊರಬೇಕು ಹೊಲಸ
ಜೀವನ ಎಂದರೆ ಮಗೂ..
ತಿಂಗಳ ಕೊನೆಯ ಸಂಬಳದ ಚೆಕ್ಕಲ್ಲ...

ನಾಲ್ಕೇ ದಿನದ ಈ ನಂಟು..
ಬಂದವರು ಹೋಗಲೇಬೇಕು..
ಅವನು ಬರೆಸಿಕೊಂಡ ಅಗ್ರೀಮೆಂಟು...
ಹುಟ್ಟು ಸಾವಿನ ನಡುವೆ ಅದೆಷ್ಟೋ ಸೆಂಟಿಮೆಂಟು
ಜೀವನ ಅಂದರೆ ಮಗೂ...
ಬರೀ ಮುಖದ ಮೇಲಿನ ಸುಕ್ಕಲ್ಲ...

Unknown said...

Oye tumba chennagi moodi baindu...muppu bandmele henge heladu artavattagi helidde...

Rajani said...

Chandada Kavana, last para super !!!

ವಾಣಿಶ್ರೀ ಭಟ್ said...

sooper!!! matte maate ella...

ಕಾವ್ಯಾ ಕಾಶ್ಯಪ್ said...

vibhinna prayatna chennagide.. :)

nannadondashtu saalu naagiya photokke..


ಒಂಟಿಯಾಗಿ ಕುಳಿತ ಆ ಮುದಿಯ ಜೀವ....
ಬಾಯ್ದೆರೆದು ನೋಡುತಿದೆ ಬಿಸಿಲ ಕಾವ...
ಪ್ರಯದಲ್ಲಿರಲಿಲ್ಲ ಇಷ್ಟು ಬಿಸಿಲು ಎಂಬ ಭಾವ....

ಅರಿಯದ ವಯಸಿಗೆ ಮದುವೆ-ಮಕ್ಕಳ ಜಂಜಾಟ...
ಎನಿತು ಸುಖವ ಕಂಡಿತು ಈ ಜೀವ ಪ್ರಾಯದಲಿ...
ಸಂಸಾರ ತೂಗಿಸುವ ಯೋಚನೆಯೊಂದೇ ತಲೆಯಲಿ...

ದುಡಿದು ಬಂದರೆ ಹಸಿವೆಂದು ಬಾಯ್ಬಿಡುವ ಮಕ್ಕಳು...
ಕಾಯಿಸಿದ ಒಂದಿಷ್ಟು ಅಂಬಲಿಯ, ಒಡಲ ಹಸಿವಿಲ್ಲದೆ ಬಡಿಸಿದ ಕೈಗಳು...
ಪತಿಯ ಊಟವ ಖುಷಿಯಲಿ ಕಂಡು, ನೀರು ಕುಡಿದು ನಿದ್ರಿಸಿದ್ದ ಕಂಗಳು....

ಕಷ್ಟ ಪಡುತ್ತ ಮಕ್ಕಳನು ದಡ ಹತ್ತಿಸುವ ಹಾದಿಯಲಿ...
ಪತಿಯ ಅಗಲಿಕೆಯ ನೋವನು ಮರೆಯುತ....
ಮಕ್ಕಳೊದಗಿಸುವ ಮುಂದಿನ ನೆಮ್ಮದಿಯ ಹಾದಿಯತ್ತ ದೃಷ್ಟಿ ಹರಿಸುತ....

ಕಂಡ ಕನಸುಗಳು ನನಸಾಗದಾದಾಗ...
ಮಕ್ಕಳು ಮುದಿ ಜೀವವ ತೊರೆದು ಹೋದಾಗ....
ನಮಗೆ ನಾವೇ... ಗೋಡೆಗೆ ಮಣ್ಣೇ ಎಂಬ ಭಾವದಿ....

ಬೊಚ್ಚು ಬಾಯಿ, ಗುಳಿ ಬಿದ್ದ ಕಂಗಳಿನಿಂದ....
'ನಾ ಬೆಳೆಸಿದ ಹುಡುಗ ನೀನಾದರೂ
ನನ್ನ ನೋಡಾಕೆ ಬಂದೆಯಾ ಮಗಾ...'
ಎಂಬ ಸಂತಸವ ಮುಖದಲಿ ಹೊತ್ತ ನಾಗಿ.....
ಇವಳು ನನ್ನ ಬೆಳವಣಿಗೆಯಲ್ಲಿ ಭಾಗಿ....

ಪ್ರವೀಣ್ ಭಟ್ said...

ತುಂಬಾ ಧನ್ಯವಾದ ಎಲ್ಲರಿಗೂ

ಹೇಯ್ ದಿಲೀಪ್ ..

ಪೂರ್ತಿ ಹೊಸತನ ಬೆರೆತೆ ಕವನ .. ಅಜ್ಜಿ ಹೇಳುವ ( ಹೇಳಿದಂತೆ ನಾವು ಭಾವಿಸಿಕೊಳ್ಳುವ, FB ಪರಿಚಯ ವಿಲ್ಲದ ಅಜ್ಜಿ ಸೋ.. ) ಈ ಸಂದೇಶದಲ್ಲಿ.. ನೀ ಹೇಳಿದ ಈ ಕವನದಲ್ಲಿ.. ತುಂಬಾ ಅರ್ಥವಡಗಿದೆ.. ಬರಿ ಸುಕ್ಕಷ್ಟೇ ನೆಡೆಸಿದ ಜೀವನ ತೋರಿಸುವುದಿಲ್ಲ.. ಬೇರೆ ಕೂಡ ಸಾಧಿಸು ಎನ್ನುತ್ತಿದೆ.. ತುಂಬಾ ನೈಸ್ ..

ಪ್ರವೀಣ್ ಭಟ್ said...

ಹಾಯ್ ಕಾವ್ಯ...

ಧನ್ಯವಾದಗಳು..

ನಿನ್ನ ಕವನ ಮುಪ್ಪಿನ ಕಷ್ಟವನ್ನೂ.. ಓದಿದ ತರುಣ/ಣೆ ಯರಿಗೆ ಒಂದೊಳ್ಳೆ ಸಂದೇಶವನ್ನೂ ನೀಡುತ್ತದೆ...

ಅಂತೂ ನಮ್ಮೂರಿನ ನಾಗಿ ಭಾರಿ ಪ್ರಸಿದ್ದಿಗೆ ಬಂದಂತಾಯ್ತು :)

ಸಾಗರದಾಚೆಯ ಇಂಚರ said...

adbhuta kavanagalu
mahabalka bhattarige modalige namana nimminda kavana baresiddakke
sundara kavana

Unknown said...

ಆ ಚಿತ್ರದಿಂದ ನನ್ನ ಮನದಲ್ಲಿ ತೋಚಿದ ಬರಹ ಇದು ..

ಎಂದೋ ಕಳೆದ ನಿನ್ನೆಯ ಮರೆಯುತ
ಎಂದೋ ಬರುವ ನಾಳೆಯ ನೆನೆಯುತ
ಸಾಗುತಿದೆ ಜೀವನವೆಂಬ ಪಯಣದ ರಥ

ಮನವು ಮಾಗಿಯುದು ದೇಹವು ಬಾಗಿಹುದು
ಮುಗವು ಬಾಡಿಹುದು ಮುಗ್ದತೆ ಮಾತ್ರವದು
ಎಂದಿನಂತೆ ಇಹುದು ದಗ್ಧ ಮನದ ಒಳಗೆ

ಅಂದು ಎಲ್ಲರು ನನ್ನವರೆ ನನ್ನೊಳಗೆ ಬಲವಿದ್ದಾಗ
ಇಂದು ಎಲ್ಲರು ಪರರೆ ನನ್ನಲಿ ಏನು ಇಲ್ಲವೀಗ
ನಾನಂದು ನಗುತಿದ್ದಾಗ ಜೊತೆಗಿದ್ದರು ನಾಲ್ಕಾರು ಜನ
ಇಂದು ನಾ ಅಳುತಿರುವಾಗ ಉಳಿದಿಹುದು ಬರಿ ಮೌನ

ಅಂದು ನೀಡುತ್ತಿದ್ದ ಕೈಗಳಿವು ಇಂದು ಬೇಡುತ್ತಿರುವಾಗ
ಅಂದು ಬೇಡುತ್ತಿದ್ದ ಕೈಗಳವು ಇಂದು ನಿಂತು ನೋಡುತ್ತಿವೆ

ಕಣ್ಣಂಚಿನಲ್ಲೊಂದು ಹನಿ ಕಣ್ಣೀರು
ಮನದಾಳದಲ್ಲೊಂದು ನಿಟ್ಟುಸಿರು
ಬಿಟ್ಟು ಬಿಡದೆ ಬರುತಿಹ ಭಾವವದು
ಕಟ್ಟ ಕಡೆಯವರೆಗಿರುವ ನೋವೆ ಇದು

ಕಾಯಿತ್ತಿರುವೆ ನಾನು ಆ ದಿನವ
ಸೊರಗುತ್ತಿರುವ ಈ ದೇಹವು
ಮಣ್ಣಲ್ಲಿ ಮಣ್ಣಾಗುವ ಆ ಕ್ಷಣವ.....

--
ಸತೀಶ್ ಬಿ ಕನ್ನಡಿಗ

nsru said...

ಒಳ್ಳೆ ಕವನ..ಬದುಕಿನ ವಾಸ್ತವಕ್ಕೆ ಕನ್ನಡಿ ಹಿಡಿದಿದೆ.
ನಾವು ನೋಡಿರುತ್ತೇವೆ....ನಮ್ಮ ಹಿರಿಯರ ದೇಹ ಸೊರಗಿದ್ದರೂ, ಮನಸ್ಸು ಮಾತ್ರ ಎಂದೂ ಬತ್ತದ ಉತ್ಸಾಹದ ಚಿಲುಮೆ.

Gubbachchi Sathish said...

ಚೆನ್ನಾಗಿದೆ.

ಪ್ರವೀಣ್ ಭಟ್ said...

Hi Sateesh...

katu satya.. bareda shaili atyuttama

ಅಂದು ಎಲ್ಲರು ನನ್ನವರೆ ನನ್ನೊಳಗೆ ಬಲವಿದ್ದಾಗ
ಇಂದು ಎಲ್ಲರು ಪರರೆ ನನ್ನಲಿ ಏನು ಇಲ್ಲವೀಗ
ನಾನಂದು ನಗುತಿದ್ದಾಗ ಜೊತೆಗಿದ್ದರು ನಾಲ್ಕಾರು ಜನ
ಇಂದು ನಾ ಅಳುತಿರುವಾಗ ಉಳಿದಿಹುದು ಬರಿ ಮೌನ

estu nija allava ee salugalu?

pravi

gurumoortanna, nsru, sateesh.. tumba tumba thanks

ಜಲನಯನ said...

ಪ್ರವೀಣ್...
ನನಗೂ ನಿಮ್ಮ ಈ ಚಿತ್ರ.....!!!!!

ಅವ್ವವ್ವ ನೀ ಬ್ಯಾಡವ್ವ
ಹೋಗಬ್ಯಾಡೇ ಗದ್ದಿ ತಾಕ್ಕೆ
ಮನ್ಯಾಗ್ ಇದ್ಬಿಡು
ಹಾಕಾಣಿಲ್ಲೇನು ಅಮ್ಮಯ್ಯ
ಮುದ್ದೆ-ಸಾರು ತಾಟ್ಗೆ...?

ಅವ್ವವ್ವ ನೀ ಬ್ಯಾಡವ್ವ
ಹೋಗಬ್ಯಾಡೇ ಒಲೀತಾಕ್ಕೆ
ಇದ್ದು ಬಿಡ್ ದೇವ್ರ ಮನ್ಯಾಗ್
ಜಪ ದ್ಯಾನ ಮಾಡ್ಕಂಡ್
ಹಾಕಾಣಿಲ್ಲೇನು ಅಮ್ಮಯ್ಯ
ಮುದ್ದೆ-ಸಾರು ತಾಟ್ಗೆ...?

ಅವ್ವವ್ವ ನೀ ಬ್ಯಾಡವ್ವ
ಹೋಗಬ್ಯಾಡೇ ನೀ ಹೊಳೀ ದಂಡ್ಯಾಕ್ಕೆ
ಬಟ್ಟೆ ಬರೆ ಒಗೀಬ್ಯಾಡ
ನಡ ಇಡ್ಕ್ಂಡೀತು ಮುಪ್ನಾಗೆ
ಹಾಕಾಣಿಲ್ಲೇನು ಅಮ್ಮಯ್ಯ
ಮುದ್ದೆ-ಸಾರು ತಾಟ್ಗೆ...?

ಅವ್ವವ್ವ ಎಲ್ಲಾಕ್ಕೂ ಹೂಂ
ಆದ್ರೆ ನಿನ್ನುತ್ತರ..!!!
ಏಳ್ಬಿಡು ಅಮ್ಮಯ್ಯಂಗೆ
ತೆಗ್ದಿಡು ನನ್ ತಾಟ್ ನಾನ್ ಸತ್ಮ್ಯಾಕ್ಕೆ
ಯಾಕಂದ್ರೆ..ಈಟ್ ಮಾತ್ರಾನೂ
ಆಕಾಣಿಲ್ಲ ಪುಟ್ನೆಂಡ್ತಿ
ಮುದ್ದೆ-ಸಾರು ನಿನ್ತಾಟ್ಗೆ...?

V.R.BHAT said...

tumba olle pryatna!

Raghu said...

Nice lines...
-Raghu