

ಹೆಸರು ನೋಡಿದೊಡನೆ ನೆನಪಿಗೆ ಬರುವುದು ವಟುಗಳು ಭಿಕ್ಷಾಪಾತ್ರೆ ಹಿಡಿದಿರುವುದು.ಉಪನಯನದ ನಂತರ ಕೇವಲ ಬದುಕಿನಕಷ್ಟ ಗೊತ್ತಾಗಲಿ ಎಂದು ಕಳಿಸುವ ಒಂದು ಕ್ರಿಯೆ ಮಾತ್ರವಾಗಿತ್ತು .ಆದರೆ ನಾನು ಹೇಳ ಹೊರಟಿರುವುದು ಅವರ ಬಗ್ಗೆ ಅಲ್ಲ.ಪ್ರತೀ ಊರಿನಲ್ಲಿ, ಪ್ರತಿ ಪೇಟೆಯಲ್ಲಿ, ಕಂಡ ಕಂಡ ಸಿಗ್ನಲ್ ಗಳಲ್ಲಿ ಹಿಂಡು ಹಿಂಡಾಗಿ ಬರುವ ,ಭಿಕ್ಷಾಟನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರ ಬಗ್ಗೆ.ಕೆಲವೊಬ್ಬರು ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕು ಭಿಕ್ಷುಕರಾಗಿರುತ್ತಾರೆ,ಹಲವಾರು ಜನ ಭಿಕ್ಷೆ ಬೇದುವುದಕ್ಕೇ ಪರಿಸ್ಥಿತಿ ಸೃಸ್ಠಿಸಿಕೊಳ್ಳುತ್ತಾರೆ.ದೇಹದಲ್ಲಿ ಶಕ್ತಿಯಿದ್ದೂ, ತೋಳಿನಲ್ಲಿ ಬಲವಿದ್ದರೂ ,ಕಷ್ಟಪಟ್ಟು ದುಡಿಯಲಾಗದ ಸೋಮಾರಿಗಳು ಹೊಟ್ಟೆಪಾಡಿಗೆ ಕಂಡು ಕೊಳ್ಳುವ ಮಾರ್ಗ ಭಿಕ್ಷಾಟನೆ.ಇವರಿಗೆ ದಿನಕ್ಕೊಂದು ಅಂಗವಿಕಲತೆ,ದಿನಕ್ಕೊಂದು ಸಿಗ್ನಲ್..ಬೇಡುವುದಕ್ಕೆ ಸಾವಿರ ಕಾರಣಗಳು.ಇಂತಹವರನ್ನು ಖಂಡಿತಾ ಹಣ ನೀಡಿ ಪ್ರೋತ್ಸಾಹಿಸಬಾರದು
ಪರಿಸ್ಥಿತಿ ಒತ್ತಡಕ್ಕೆ ಸಿಲುಕಿ ಭಿಕ್ಷುಕರಾಗುವವರ ಕಥೆಯೇ ಬೇರೆ.ಜೀವನ ಪೂರ್ತಿ ಸಂಸಾರಕ್ಕಗಿ ದುಡಿದು, ಇನ್ನು ದೇಹದಲ್ಲಿ ತ್ರಾಣವಿಲ್ಲದಾಗ ಅದೇ ಸಂಸಾರ ಅವನ/ಳ ಹೊರ ಹಾಕಿದಾಗ ಅನಿವಾರ್ಯವಾಗಿ ಭಿಕ್ಷಾಟನೆಗೆ ಇಳಿಯಬೇಕಾಗುತ್ತದೆ. ಯಾರು ವಾರಸುದಾರರಿಲ್ಲದಿದ್ದಾಗ ದುಡಿಯುವ ಅಂಗಗಳೂ ಊನವಾದಾಗ ಹೊಟ್ಟೆಪಾಡು,ಅಸಹಾಯಕತೆ.. ಬೇರೆಯವರ ಮುಂದೆ ಕೈಚಾಚುವಂತೆ ಮಾಡುತ್ತದೆ .ನನ್ನ ಪ್ರಕಾರ ಇವರಿಗೆ ಭಿಕ್ಷೆ ನೀಡುವುದರಲ್ಲಿ ಯಾವ ತಪ್ಪಿಲ್ಲ..
ಇನ್ನೊಂದು ಆಘಾತಕಾರಿ ಸಂಗತಿ ಎಂದರೆ ಭಿಕ್ಷಾಟನೆ ಧಂದೆಯಾಗಿ ಬೆಳೆದಿರುವುದು.ಶಾಲೆಗೆ ಹೋಗಬೇಕಾದ ಮಕ್ಕಳು,ಅನಾಥಮಕ್ಕಳನ್ನು ಹಿಡಿದು ತಂದು ಊರು ಕೇರಿ ಗೊತ್ತಿಲ್ಲದ ಜಾಗದಲ್ಲಿ ಭಿಕ್ಷಾಟನೆಗಿಳಿಸುತ್ತಾರೆ.ಬೇಡಲೇಬೇಕು ,ಇಲ್ಲದಿದ್ದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ.ಒಂದೊಂದು ಮಕ್ಕಳಿಗೆ ಒಂದೊಂದು ಜಾಗಕ್ಕೆ , ವಯಸ್ಸಿಗೆ ತಕ್ಕಂತೆ ಟಾರ್ಗೆಟ್.ಅಸ್ಟು ಹಣ ಗಳಿಸಲೇ ಬೇಕು.ಇದರಲ್ಲಿ ಮಕ್ಕಳಿಗೆ ನಯಾಪೈಸೆಯೂ ದೊರೆಯುವುದಿಲ್ಲ ಎಲ್ಲಾ ಧಂದೆಗಿಳಿಸಿದವರಿಗೆ.ಇವರಿಗೆ ಹಿಡಿ ಕೂಳು ಸಿಕ್ಕರೆ ಹೆಚ್ಚು .ಭಿಕ್ಷೆ ಸರಿಯಾಗಿ ಸಿಗದಿದ್ದರೆ ಟಾರ್ಗೆಟ್ ರೀಚ್ ಆಗಲು ಪಿಕ್ ಪಾಕೆಟ್ ಮಾಡಲೂ ಹೆದರುವುದಿಲ್ಲ.ಹಾಗಾದರೆ ಇಂತವರಿಗೆ ಭಿಕ್ಷೆ ನೀಡಬೇಕೆ? ನನಗೂ ಗೊತ್ತಿಲ್ಲ..
ಎಲ್ಲ ಯೋಚಿಸಿದಾಗ ಸಂಪೂರ್ಣ ಭಿಕ್ಷಾಟನೆ ನಿರ್ಮೂಲನೆ ಸಾಧ್ಯವೇ?ಎನ್ನುವ ಜಿಜ್ನಾಸೆ ಮೂಡುವುದು ಸಹಜ.ಸ್ವಲ್ಪ ಕಷ್ಟವಾದರೂ ಖಂಡಿತ ಸಾಧ್ಯ. ಎಲ್ಲರಲ್ಲಿ ಒಂದು ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕೆಂಬ ಕಳಕಳಿ ಬರಬೇಕು ಅಸ್ಟೇ .ದುಡಿದು ತಿನ್ನಲು ಸಾಧ್ಯವಿರುವವರಿಗೆ,ಸ್ವಾಭಿಮಾನ ಆತ್ಮವಿಶ್ವಾಸ ಹುಟ್ಟಿಸಿ ದುಡಿಯಲು ಅವಕಾಶ ನೀಡಬೇಕು.ಸ್ವಲ್ಪ ಅಂಗವಿಕಲತೆಯುಳ್ಳವರಿಗೆ, ಅವರಿಗೆ ಸಾಧ್ಯವಾಗುವಂತಹ ಕೆಲಸದಲ್ಲಿ ತರಬೇತಿ ಕೊಟ್ಟು ಬದುಕು ರೂಪಿಸಿಕೊಳ್ಳಲು ಸಹಾಯ ಮಾಡಬೇಕು.ಮಕ್ಕಳನ್ನು ದಂದಾಗಾರರ ಕಪಿಮುಷ್ಠಿಯಿಂದ ತಪ್ಪಿಸಿ,ತಿಳಿ ಹೇಳಿ ಓದಲು ನೆರವಾಗಬೇಕು. ಏನೂ ಮಾಡಲಾಗದ ಮುದುಕರು ಅಂಗವಿಕಲರಿಗೆ ಅವರಿಗೆಂದೇ ಇರುವ ಜಾಗಕ್ಕೆ ಸೇರಿಸಬೇಕು.ದಾನಿಗಳಿಂದ ಸಂಗ್ರಹಿಸಿ ಬದುಕಲು ನೆರವಾಗಬೇಕು.ಒಬ್ಬರಿಂದ ಇದು ಅಸಾಧ್ಯ, ಒಂದು ಸಂಸ್ಥೆಯಿಂದ , ಸರ್ಕಾರದಿಂದ ಮಾತ್ರ ಇದನ್ನು ಕಾರ್ಯರೂಪಕ್ಕೆ ತರಲು ಸಾಧ್ಯ.
ಭಿಕ್ಷುಕರ ಉದ್ದಾರಕ್ಕೆಂದೇ ಇರುವ ಪುನರ್ವಸತಿ ಕೇಂದ್ರದ ಬಗ್ಗೆ ಎಲ್ಲರಿಗೂ ತಿಳಿದದ್ದೇ."ಭಿಕ್ಷೆ ಬೇಡಿದರೆ-ಒಂದು ದಿನ ಸಿಗದಿದ್ದರೂ-ಕೊನೇ ಪಕ್ಷ ಜೀವವಾದರೂ ಉಳಿಯುತ್ತದೆ ಇಲ್ಲಿದ್ದರೆ ಅದೂ ಇಲ್ಲ" ಎನ್ನೋ ಭಾವನೆ ಭಿಕ್ಷುಕರಲ್ಲಿಮೂಡುವಂತಾಗಿದೆ.ಸತ್ತ ಜೀವಕ್ಕೆ ಲೆಖ್ಖವೂ ಇಲ್ಲ ಬೆಲೆಯೂ ಇಲ್ಲ.ಹೇಳಿಕೇಳಿಕೊಳ್ಳುವವರೂ ಮೊದಲೇ ಇಲ್ಲ.ಬದುಕು ಕಟ್ಟಿಕೊಳ್ಳಲುಬಂದವರು ಜೀವ ಉಳಿಸಿಕೊಳ್ಳಲು ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗುವ ಸಂದರ್ಭ ಬಂದಿದ್ದು ವಿಪರ್ಯಾಸ.ಬರೆದಸ್ಟೂ ಇದೆ ಬಿಡಿ ಅಲ್ಲಿನ ಅವ್ಯವಸ್ಥೆ....
ಅಸಹಾಯಕತೆ,ಅಂಗವಿಕಲತೆ , ಪರಿಸ್ಥಿತಿಯ ಒತ್ತಡದಿಂದ ಹೇಗೆ ಭಿಕ್ಷಾಟನೆಗಿಳಿಯುತ್ತರೆ , ಹೇಗೆ ಅನಿವಾರ್ಯವಾಗುತ್ತದೆಎನ್ನುವುದಕ್ಕೆ ಸಣ್ಣ ಕವನ.
ಹಾಗಂತ ನಾನು ಖಂಡಿತ ಭಿಕ್ಷಾಟನೆಯನ್ನು ಪ್ರೋತ್ಸಾಹಿಸುವುದಿಲ್ಲ.
ಅಮ್ಮ ..ಅಮ್ಮ ,ಅಣ್ಣ ಅಣ್ಣ..
ನೋಡಿ ನೋಡಿ ಬದಲಿಸಬೇಕು ಮಾತಿನ ಬಣ್ಣ
ಪೂರ್ವಕೃತ ? ಸ್ವಯಂಕೃತ ?
ಅಂತೂ ಪರಾಧೀನ..
ಛೀ,ತೂ ಮುಂದಕ್ಕೆ ಹೋಗು..
ದುಡಿದು ತಿನ್ನಲಿಕ್ಕೇನು ದಾಡಿ
ಅಂಗವಿಕಲತೆಯ ಸೋಗು
ನೋಡಲೂ ಇಲ್ಲ ನನ್ನ,ಎಲ್ಲರಲೂ ಒಂದೇ ನುಡಿ
ಅಂದು,ರಟ್ಟೆ ಮುರಿದು ಹೊಟ್ಟೆ ಕಟ್ಟಿಕೊಂಡೆ
ನನ್ನದೊಂದೇ ಅಲ್ಲ,ನನ್ನವರ ಹೊಣೆಯೂ ನಂದೇ..
ಏನೂ ಗಿಟ್ಟಿಸಲಾಗದೀಗ ನನ್ನಿಂದ..
ಸತ್ತಿರುವ ಮುದುಕ.
ಮೈ ನಡುಕ..
ಕಿವಿ ದೂರ..ಕಣ್ಣಲ್ಲಿ ಪೊರೆ
ನನ್ನ ದೇಹ ನನಗೇ ಹೊರೆ..
ನನ್ನವರಿಗೂ...
ಇಂದೋ ನಾಳೆನೋ
ಬದುಕಬೇಕಲ್ಲ ಅಲ್ಲಿವರೆಗೂ..
ಹೊಟ್ಟೆ ಪಾಡು,ಹೊರಡು ಮುಂದೆ
ಭವತಿ ಭಿಕ್ಷಾಂದೇಹಿ..
ಅಸಹಾಯಕ. ನಾನೊಬ್ಬ ಭಿಕ್ಷುಕ..
ಹೋಗಾಚೆ ದೂರ
ಶಾಲೆಗೆ ಹೋಗಬೇಕಾದ ಪೋರ..
ಆಗುವುದಿಲ್ಲವೇ ನಾಚಿಕೆ..
ಹೀಗೆ ಕೈ ಚಾಚುವುದಕೆ..
ಶಾಲೆ,ಹೆಸರು ಕೇಳಿದೊಡೆ
ಕಣ್ಣಲ್ಲಿ ನೂರು ಕನಸು
ಕನಸಷ್ಟೆ,ಸೇರಿಸುವರಾರು
ಆಗಲೇ ಕಳೆಯುತಿದೆ ವಯಸು
ಬೇಡಲೇಬೇಕು ಅನಿವಾರ್ಯ
ಅವರು?? ವಹಿಸಿದ್ದ ಕಾರ್ಯ..
ನಿನ್ನೆ ಕಣ್ಣೆರಡು ಕಾಣ..
ಇಂದು ಕಾಲೊಂದು ಊನ
ನಾಳೆ ಮತ್ತೊಂದು ..ಚಾಚಲೇಬೇಕು ಕೈನ
ಜಾಗ ಬದಲು..
ತಪ್ಪಿದರೆ ಚಾಟಿ.. ಬಾರುಕೋಲು
ತಪ್ಪದಿರೆ? ಬೇಡಿದ್ದು ಅವರಿಗೆ
ಹಿಡಿಕೂಳು ಹೊಟ್ಟೆಗೆ..ಹುಟ್ಟಿದ ತಪ್ಪಿಗೆ
ಹೊಟ್ಟೆಪಾಡು ಹೊರಡು ಮುಂದೆ
ಭವತಿ ಭಿಕ್ಷಾಂದೇಹಿ..
ಬಾಲಕ,ಅಮಾಯಕ..ನಾನೊಬ್ಬ ಭಿಕ್ಷುಕ
ಚಿಲ್ಲರೆ ಇಲ್ಲ ಛೀ,ತೂ ಅನ್ನುವ ಮುನ್ನ ಒಮ್ಮೆ ಯೋಚಿಸಿ.ಹಾಗೆ ಭಿಕ್ಷೆ ನೀಡುವ ಮುನ್ನ ಒಂದಲ್ಲ ಎರಡು ಸಲ ಯೋಚಿಸಿ ದುಡಿದುತಿನ್ನುವ ಸಮರ್ಥನಿರುವವನಿಗೆ ಕೊಡುವುದರಲ್ಲಿ ಯಾವ ಅರ್ಥವೂ ಇಲ್ಲ....
ಆತ್ಮವಿಶ್ವಾಸವಿದ್ದರೆ,ಸ್ವಲ್ಪ ಶಕ್ತಿಯಿದ್ದರೆ .. ಸಾಮಾನ್ಯ ಅಂಗವಿಕಲತೆ ಅಂಗವಿಕಲತೆಯಲ್ಲ ಸ್ವಾಭಿಮಾನಿಯಾಗಿಬದುಕಬಹುದೆನ್ನುವುದಕ್ಕೆ ಕೆಳಗಿನ ವೀಡಿಯೋ ನೋಡಿ
http://www.youtube.com/watch?v=8YF-ES8Q1zk
"IGNORANCE OF ABILITY BRINGS DISABILITY"
ಪ್ರೀತಿಯಿಂದ ಪ್ರವಿ