
ಬುದ್ಧನಾಗುವುದೆಂದರೆ..
ಬರಿದೇ..
ಮಧ್ಯರಾತ್ರಿಯಲಿ
ಸದ್ದಿಲ್ಲದೇ
ಎದ್ದು ಹೋಗುವುದಲ್ಲ
ಮುದ್ದು ಮಡದಿಗೆ
ಸುದ್ದಿ ಹೇಳದೇ
ನಿದ್ದೆಯಲಿ ತೊರೆದು ಹೋಗುವುದಲ್ಲ
ಬುದ್ಧನಾಗುವುದೆಂದರೆ
ಬರಿದೇ..
ರಾಜ್ಯ ಕೋಶ ಬೊಕ್ಕಸವ
ಒದ್ದು ಹೋಗುವುದಲ್ಲ
ಭೋದಿ ವೃಕ್ಷದ ಅಡಿಯಲ್ಲಿ
ಬೂದಿ ಬಳಿದು ಕೂರುವುದಲ್ಲ
ಬುದ್ಧನೆಂದರೆ....
ಕಷ್ಟದ ಕಣ್ಣೀರಿಗೆ ಕರವಸ್ತ್ರ
ಹಿಂಸೆಯ ಎದುರು ಶಾಂತಿಯಸ್ತ್ರ
ಜೀವನ ಮೌಲ್ಯದ ಜ್ಯೋತಿ
ದುರಾಸೆಯ ಅದುಮಿಡುವ ಶಕ್ತಿ
ಬಾಳು ಬೆಳಗುವ ಕಾಂತಿ
ನಿತ್ಯ ಜಂಜಡದ ಮುಕ್ತಿ..
ಬುದ್ಧನೆಂದರೆ....
ಅಷ್ಟ ತತ್ವದ ನಿಷ್ಠ
ಭ್ರಷ್ಟ ಬದಿಯಿಟ್ಟ ಸತ್ಯ
ಪ್ರಾಮಾಣಿಕತೆಯ ಪ್ರತೀಕ
ಕರ್ತವ್ಯದ ಪ್ರತಿ ರೂಪ..
ಕುಗ್ಗಿ ಕೂರದ ಬಗ್ಗಿ ಹೋಗದ ಅಚಲ
ನುಗ್ಗಿಹೋಗುವ ಛಲ..
ಬುದ್ಧನಾಗಬೇಕಾದರೆ..
ಶುದ್ಧನಾಗು,ಸಿದ್ದನಾಗು
ಸಿದ್ದಿಯತ್ತ ಸಾಗು
ಅಸಾಧ್ಯವ ಅಟ್ಟಿ
ಸಾಧನೆಯ ತಟ್ಟಿ
ಹಿಮ್ಮೆಟ್ಟದ ಯೋಧನಾಗು..
ಅರ್ಥವಾಗಬಹುದು .. ಬಾಳು
ವ್ಯರ್ಥವಾದರೆ ಸೋಲು..
ಬುದ್ದನಾಗುವ ಮೊದಲು..
ನಿನಗೆ ನೀ ಬದ್ಧನಾಗು..