

ಕಡ್ಡಾಯವಾಗಿ ಕನ್ನಡ ವ್ಯಾಕರಣ ಬಲ್ಲವರಿಗೆ ಮಾತ್ರ !!!
ಬಾಲ್ಯ ಒತ್ತಕ್ಷರವಿಲ್ಲದ ಸಾಲು

ಚೂರು ಪಾರು ತಪ್ಪಿದ ಕಾಗುಣಿತ
ಅಡೆ ತಡೆಯಿಲ್ಲದ ಓಟ
ಶಾಲೆ, ಟೀಚರ್ ಗಳ ಕಾಟ
ಸಾಲಿನ ನಡುವೆ ಬರುವ ಕಾಮದಂತೆ,
ಕಾಲೇಜು,ಟೀನೇಜು ಜೊತೆ ಜೊತೆಗೆ
ಓರೆ ಕೋರೆ ನೋಟ ,ಆಡಿದ್ದೇ ಆಟ
ಅರ್ಥ ಕಳೆದುಕೊಂಡಿದೆ ವ್ಯಾಕರಣ
ಮಧ್ಯದಲ್ಲೆಲ್ಲೋ ಅರ್ಧ ವಿರಾಮ!!
ಅದು ಇದು,ಸಿಕ್ಕೀತೋ ಕೆಲಸ
ಕಲಸು ಮೇಲೋಗರ ಈ ಸಮಾಸ
ಹಾಗೂ ಹೀಗೂ ಮದುವೆಯ ಸುಳಿ ಮಧ್ಯ ನಾವು
ಸಪ್ತಪದಿ,ತ್ರಿಪದಿ,ಷಟ್ಪದಿ
ವಾರ್ಧಕ, ಅವಳೋ ಭಾಮಿನಿ
ಒಂದು ಲಘು, ಎರಡು ಗುರು !!!
ಹೂಂ ಈಗ ಸಂಧಿಕಾಲ !!
ಲೋಪವೇ ಹೆಚ್ಚು ,ಅಲ್ಲಲ್ಲಿ ಆದೇಶ
ಬಿಡಲಾಗುವುದೇ ಯಣ್ ಸಂಧಿ
ಪೂರ್ಣಕಾಮ,ಸವರ್ಣದೀರ್ಘ!!
ನೋಡ ನೋಡುತ್ತಲೇ ಆಗಮನ
ಬಂತದೋ ಕಂದ ಪದ್ಯ !!
ಯಮಾತಾರಾಜಭಾನಸಲಗಂ
ಇದು ಸಂಸಾರ ಗಣ
ಲಲಿತ ಸಾಹಿತ್ಯ,ಅಲ್ಲೊಮ್ಮೆ ಇಲ್ಲೊಮ್ಮೆ ರಗಳೆ
ತಲುಪಿ ಬಿಟ್ಟೆವಲ್ಲಾ ಕೊನೆಯ ಅಧ್ಯಾಯ
ಅಪಾರವಾದ ಅರ್ಥ,ಒಮ್ಮೊಮ್ಮೆ ಅಪಾರ್ಥ
ವ್ಯಾಕರಣ ಅಷ್ಟಕ್ಕಷ್ಟೇ.....
ಒತ್ತಕ್ಷ್ರರ,ಸಂಧಿ,ಷಟ್ಪದಿ,ರಗಳೆ,ಛಂದಸ್ಸು
ಯಾವುದೋ... ಎಲ್ಲಾ ತಮಸ್ಸು!!
ಯಮನೂ ಪಾಲಿಸುವ ನಿಯಮ
ವಾಕ್ಯದ ಕೊನೆಗೆ ಪೂರ್ಣ ವಿರಾಮ !!!
ಇತಿ ಶ್ರೀ !!!!
ಪ್ರೀತಿಯಿಂದ ಪ್ರವಿ