Friday, October 9, 2009

ಮಲೆನಾಡ ಮಳೆ ನೋಡ!!




ಮೋಡಗಳೆಲ್ಲಾ ಬಂದು ಕವಿಯಲು

ಬೆಳ್ಳಂಬೆಳಗ್ಗೆ ಕಗ್ಗತ್ತಲು

ಒಡೆದು,ಕವಿದ ಮೋಡದ ಒಡಲು

ಭುವಿಗಿಳಿವ ಹಾಗಿದೆ ಮುಗಿಲು


ಒಂದಕ್ಕೊಂದು ಹೊಡೆದು ಮಿಂಚೇಳಲು

ಬಾನಂಗಳದಿ ಬೆಳಕಿನ ರಂಗೋಲಿ

ಗುಡುಗು ಗುಡುಗುಡಿಸಲು

ಮನದ ಮೂಲೆಯಲೂ ಭಯದ ಸುಂಟರಗಾಳಿ


ಮಹಾಮಳೆಯ ಮುನ್ಸೂಚನೆಯಂತೆ

ಬಿದ್ದಿತು ಹನಿ ಒಂದೆರಡು

ಅರಿತ ಪ್ರಾಣಿ-ಪಕ್ಷಿಗಳು

ಓಡಿತಿವೆ ಸೇರಿಕೊಳ್ಳಲು ತಮ್ಮ ಗೂಡು


ಅಗೋ ಧೋ ಎಂದು ಶುರುವಾಯಿತು ಮಳೆ

ಹೊಯ್ದಂತೆ ಕೊಡದಿ ನೀರು

ತೋಯ್ದು ಜಲಸಾಗರವಾಯಿತು ಇಳೆ

ಇಲ್ಲೀಗ ನೀರಿನದೆ ಕಾರುಬಾರು


ಗಣಪ,ಕೆಂಚ ,ಮಂಜ ,ಹೆಂಡ

ಮಾಡುತಿಹರು ಕೆಲಸ,ಹೊದ್ದು ಕಂಬಳಿ ಕೊಪ್ಪೆ

ಮಳೆಯ ಆರ್ಭಟದಿ ತುಂಬಿತು ಕೆರೆ ಹೊಳೆ ಹೊಂಡ

ಇವರೀಗ ಕೊಪ್ಪೆಯಲೂ ತೊಯ್ದು ತೊಪ್ಪೆ.


ಹೆಂಗಸರು ಮಕ್ಕಳೆಲ್ಲಾ ಗಡಗಡನೆ ನಡುಗುತಾ

ಉರಿಯುವ ಒಲೆಯ ಮುಂದೆಯೇ ಸ್ಥಾಪಿತ

ಗೇರು ಹಲಸಿನ ಬೀಜವ ಸುಡುತ,ರುಚಿ ಸವಿಯುತ

ಬೆಂಕಿಗಂಜಿದ ಚಳಿ ಸರಿಯಿತು ಸ್ವಲ್ಪ ಅತ್ತಿತ್ತ


ಮೋಡಗಳೆಲ್ಲಾ ಕರಗಿ ಮಳೆ ನಿಲ್ಲುತಿದೆ

ಸ್ತಬ್ಧವಾಗಿದೆ ನೆಲ,ಗಿಡ-ಮರ ಕಾಡು

...............

ಮತ್ತೆ ಮೋಡ ಕವಿಯುತಿದೆ...

ಇದು ಮಲೆನಾಡು ,ಇಲ್ಲಿಯ ಮಳೆ ನೋಡು

……………………. ಪ್ರೀತಿಯ ಪ್ರವಿ

2 comments:

Kumar BM said...

Magam super agide,

Unknown said...

Praveenana kavite ooda... :)...