Wednesday, June 16, 2010

ಸತ್ತ ಪ್ರೀತಿಗೊಂದು ಗೋರಿ



ಸತ್ತ ಪ್ರೀತಿಯ ನೆನಪಲ್ಲೊಂದು

ಗೋರಿ ಕಟ್ಟಿರುವೆ

ನೆನಪುಗಳು ಕರಗದಂತೆ

ತಾಜ್ ಮಹಲ್ ನಿವಾಳಿಸಿ

ಒಗೆಯಬೇಕು ಹಾಗೆ...


ಜಲ್ಲಿ:ನೀ ಕೊಟ್ಟ ಉಡುಗೋರೆ

ಮರಳು:ಉಳಿಸಿಹೋದ ಪ್ರೀತಿಚೂರು

ಸಿಮೆಂಟ್ :ನೀ ಬರೆದ ಪತ್ರ

ನೀರು..? ಕಣ್ಣೀರು..

ನೆನಪುಗಳು ಒಳಗೆ ಭದ್ರ

[ಹೃದಯ ಛಿದ್ರ ಛಿದ್ರ ]


ಜನನ:

ಪ್ರೀತಿ ಹುಟ್ಟಿದ ದಿನ ನೆನಪಿಲ್ಲ

ನಿನ್ನ ನೋಡಿದಾಗಲೋ

ನೋಡಿ ನಡೆದಾಗಲೋ

ಕಣ್ಣು ಮಾತನಾಡಿದಾಗಲೋ

ತುಟಿ ಅರಳಿದಾಗಲೋ

ಸಧ್ಯಕ್ಕೆ:ಪ್ರೀತಿ ನಿವೇದಿಸಿಕೊಂಡ ದಿನ

ಆಮೇಲೆ ಪ್ರತೀ ದಿನ


ಮರಣ:

ಮರೆಯಲಾರದ ದಿನಾಂಖ

ಕಾರಣ,ಸತ್ತ ದಿನವೇ ಕಟ್ಟಿದ ಗೋರಿ

ಕೆತ್ತಿದ ಈ ಬರಹ

:ನೀನು ಏಕಾಏಕಿ ಕೈ ಕೊಟ್ಟ ದಿನ

ಕೈ ಬಿಟ್ಟ ಕ್ಷಣ

ತಿರುಗಿ ನೋಡದೇ ಹೋದ ದಿನ

ತುಟಿಯಲ್ಲಿ ಅಟ್ಟಹಾಸವೋ..

ಅಸಹಾಯಕತೆಯೋ..


ಶ್ರದ್ಧಾಂಜಲಿ ಕಳಿಸುವ ವಿಳಾಸ

ಆರದ ಗಾಯ

c/o ಭಗ್ನ ಹೃದಯ

ಮುರಿದ ನಿಲಯ

ಅಪಘಾತ ವಲಯ

PIN:ಅವಶ್ಯಕತೆ ಇದಿಯಾ?

ಅನಿಸುತ್ತಿಲ್ಲ.....


...ಅಮರ ಪ್ರೇಮಿ..


ಪ್ರೀತಿಯಿಂದ ಪ್ರವಿ



Tuesday, June 1, 2010

ನೀನೇ ನನ್ನ ನಲ್ಲೆ

















ಪ್ರೀತಿಯ ಚುಕ್ಕಿಯನಿಟ್ಟು

ಒಲವಿನ ಗೆರೆ ಎಳೆದು

ತರ ತರದ ಬಣ್ಣ ಸುರಿದು

ಮನದ ಅಂಗಳದಲ್ಲಿ

ಹಾಕಿದೆ ನೀ ರಂಗವಲ್ಲಿ


ಹೃದಯವ ಹಸನುಗೊಳಿಸಿ

ಒಲವಿನ ಜೊತೆಗೂಡಿ

ಪ್ರೀತಿಯ ಪಾತಿ ಮಾಡಿ

ಮನದ ಅಂಗಳದಲ್ಲಿ

ಹಬ್ಬಿಸಿದೆ ನೀ ಪ್ರೇಮ ಬಳ್ಳಿ


ರಂಗೋಲಿಯ ರಂಗಿನಲ್ಲಿ

ಹೂವುಗಳ ಹೊಳಪಿನಲ್ಲಿ

ಕಂಗೊಳಿಸುತಿದೆ ರಂಗಿನರಮನೆ

ಮೂಕವಿಸ್ಮಿತ,ನಿನ್ನ ಕಂಡೊಡನೆ

ಮರುಮಾತಾಡದೆ ಬಾ ಸುಮ್ಮನೆ

ನೋಡಿದು ನೀ ಕಟ್ಟಿದ ನಮ್ಮನೆ


ಮನೆಯ ಅಂಗಳದಲ್ಲಿ

ಬೀರಿದೆ ಘಮ,ಬಿರಿದ ಮಲ್ಲಿಗೆ ಚೆಲ್ಲಿ

ನಿನ್ನ ಪ್ರೀತಿಗೆ ಹೇಳಬಹುದೆ ಒಲ್ಲೆ

ನಿನ್ನ ಪ್ರೀತಿಯ ನಾ ಬಿಡಲೊಲ್ಲೆ

ನಾನು ನಲ್ಲ,ಬಾ ನೀನೇ ನನ್ನ ನಲ್ಲೆ


ಪ್ರೀತಿಯಿಂದ ಪ್ರವಿ