

ಒಂದು ಎರಡು ಐದು ರೂಪಾಯಿ
ನೋಟಿನಲ್ಲಿದ್ದ ಗಾಂಧೀಜಿ
ಕಳೆದು ಹೋಗಿದ್ದಾನೆ..
ನೋಟಿನೊಂದಿಗೆ....
ನೂರು ಐನೂರು ಸಾವಿರ
ಗಾಂಧಿ ಬೆಲೆ ಏರುತ್ತಿದೆ ಮುಗಿಲೆತ್ತರ
ಬಡವನಿಂದ ಬಹಳ ದೂರ
ಸಿಗದೆ ದೈನೇಸಿಯಾಗಿ ಕೈ ಚಾಚಿದವನು
ಗೊಣಗುತ್ತಿದ್ದಾನೆ..
"ನೋಟಿಗೆ ಬರುವುದಕ್ಕೂ ಮೊದಲು
ನಮ್ಮವನಾಗಿದ್ದನಿವ ... "
ಕಟ್ಟು ಕಟ್ಟು ನೋಟಿನಲ್ಲಿ
ಕಟ್ಟಿ ಹಾಕಲಾಗಿದೆ..
ಬದಲಾದ ಕೈಗಳೆಷ್ಟೋ..
ಬಳಸಿ ಬಳಲಿಸಿದವರೆಷ್ಟೋ...
ಅದೇ ಹಳೇ ಸೋಡಾ ಗ್ಲಾಸಿನಲ್ಲಿ
ಸುಮ್ಮನೆ ನೋಡುತ್ತಿದ್ದಾನೆ
ದೃಷ್ಟಿಯಿಲ್ಲದವರಂತೆ..
ಕಪ್ಪು ಕನ್ನಡಕ ಹಾಕುವ
ಕಾಮಗಾರಿ ಭರದಿಂದ ಸಾಗಿದೆ...
ಬೊಚ್ಚು ಬಾಯಿಯ ಬಿಚ್ಚು
ನಗುವಿನಲ್ಲಿ ಕಂಡಿದ್ದು..
ಅಟ್ಟಹಾಸ ತಡೆಯಲಾಗದ ಅಸಹಾಯಕತೆ
ಅಟ್ಟಿಸಿ ಹೊರಟವರ ನೋಡಿ ನಿಟ್ಟುಸಿರು
ಗೆದ್ದಲು ಹಿಡಿದ ಕೋಲು
ದಪ್ಪ ಹರಳಿನ ಹಿಂದೆ
ದೃಷ್ಠಿ ಬತ್ತಿದ ಕಣ್ಣು
ಬೆಲೆ ಏರಿದಂತೆಲ್ಲಾ ಗಾಂಧಿ
ಬಡವನಾಗುತ್ತಿದ್ದಾನೆ...
ಇವನೀಗ ದಿವ್ಯ ಮೌನಿ..
ಗಾಂಧಿಗೂ ಗೊತ್ತು ಇದು ಗಾಂಧಿಕಾಲವಲ್ಲ !!!!











