Friday, May 6, 2011

ನಾನು ಊರಿಗೆ ಹೋದಾಗ ತೆಗೆದ ಕೆಲವು ಫೋಟೊಗಳನ್ನು ಫೇಸ್ ಬುಕ್ ನಲ್ಲಿ ಹಾಕಿದ್ದೆ. ಅದನ್ನ ನೋಡಿ ಗೆಳೆಯ ಮಹಾಬಲಗಿರಿ ಭಟ್ಟರೊಂದು ಕವನ ಬರೆದು "ನೋಡು ನೀನು ಒಂದು ನವ್ಯ ಶೈಲಿಯಲ್ಲಿ ಕವನ ಬರಿಯಕ್ಕು ಶುಕ್ರವಾರದ ಒಳಗೆ ಬರಿಲೇಬೇಕು ಎಂತಾದ್ರು ಮಾಡು" ಹೇಳಿಬಿಟ್ರು.. ನಂಗೆ ಒಳ್ಳೆ ಪಜೀತಿ .. ನಾನು ಫೋಟೋ ನೋಡಿ ಕವನ ಬರೆಯುವುದಿಲ್ಲ .. ಕವನ ಬರೆದು ಆಮೇಲೆ ಫೋಟೋ ಗೂಗ್ಲ್ ಗೆ ಹುಡುಕುವುದು ನನ್ನ ಅಭ್ಯಾಸ.. ಆದರೆ ಅವರ ಪ್ರೀತಿಪೂರ್ವಕ ಸ್ಪೂರ್ತಿಗೆ ಗೆಳೆತನದ ಅಧಿಕಾರದ ಒತ್ತಾಯಕ್ಕೆ ಒಲ್ಲೆ ಹೇಳುವುದು ಸಾಧ್ಯವೇ ಇಲ್ಲ .. ಅದಕ್ಕಾಗಿ ನನ್ನೀ ಕವನ.. ಈ ಫೋಟೋದಲ್ಲಿರುವವರು ನಾಗಿ ಅಂತ. ಮೊದಲೆಲ್ಲಾ ನಮ್ಮನೆ ಕೆಲಸಕ್ಕೆ ಬರುತ್ತಿದ್ದವರು .. ಈಗ ಮುಪ್ಪಡರಿದೆ..

ಮಹಾಬಲಗಿರಿ ಭಟ್ಟರು ನನ್ನೊಬ್ಬನಿಂದಲೇ ಅಲ್ಲ .. ಇನ್ನೂ ಇಬ್ಬರಿಂದ ಬರೆಸಿ ಜುಗಲ್ ಬಂಧಿ ಮಾಡಿದ್ದಾರೆ.. ಕರಾವಳಿ ರೈಲಿನಲ್ಲಿ ಬ್ರಾಡ್ ಗೇಜ್ ಮೇಲೆ ಭರ್ಜರಿ ನಾಲ್ಕು ಕವನಗಳ ರೈಲನ್ನು ಓಡಿಸಿದ್ದಾರೆ. ಒಂದೊಳ್ಳೆಯ ಪ್ರಯತ್ನ.. ಕವನ ಬರೆದ ಗೆಳತಿ ವಾಣಿಶ್ರೀ ಭಟ್ ಮತ್ತು ಪರಾಂಜಪೆ ಸರ್ ಗೆ ಧನ್ಯವಾದಗಳು..

ಇಲ್ಲಿ ನನ್ನ ಕವನವಸ್ಟೇ ಇದೆ .. ಎಲ್ಲಾ ಕವನ ಕರಾವಳಿ ರೈಲು ಸೂರಿನಲ್ಲಿ

http://karavalirail.blogspot.com/



ಮುಪ್ಪು ಸಿಹಿಯಲ್ಲ ಉಪ್ಪು!
-----------

ರಟ್ಟೆ ಗಟ್ಟಿಯಿದ್ದಾಗ
ರೊಟ್ಟಿ ಬೇಕಷ್ಟು ತಟ್ಟಿದ್ದೆ
ಸುಟ್ಟಿದ್ದೆ..
ಅಲ್ಲಷ್ಟು,ಇಲ್ಲಷ್ಟು
ಕಷ್ಟವೆನಿಸಲಿಲ್ಲ ಎಳ್ಳಷ್ಟೂ..
ನೇಸರ ಮೂಡುವ ಮುನ್ನ
ಹುಟ್ಟಿ ..
ಅವ ಸತ್ತಮೇಲೂ ಬದುಕಿದ್ದೆ..

ಅದು ವಸಂತ
ನೋಡಿದ್ದೆಲ್ಲಾ ಚಿಗುರು
ಬೆಳೆದಂತೆಲ್ಲಾ ಹಸಿರು
ಉಮೇದು ,ಉತ್ಸಾಹ ಉನ್ಮಾದ
ಕಾದು ಕರಗಿ ಬೆಂಡಾದರೂ
ಜಗಜಟ್ಟಿ
ತಣಿದಂತೆಲ್ಲಾ ಕಬ್ಬಿಣ
ಬಲು ಗಟ್ಟಿ..

ಕಾಲ ಕರಗಿ ಶಿಶಿರಾಗಮನ ಮುಪ್ಪಡರಿ
ಕಸುವಿನೆಲೆ ಉದುರಿ..
ದೇಹ ಮುದುರಿ..
ಕನಸು ಕಮರಿ..
ಇದು ಬಾಳು ಹಣ್ಣಾದ ಪರಿ

ಹೊಸ ಸೂರ್ಯ ಹುಟ್ಟಿದಂತೆಲ್ಲಾ
ಸಾವು ಹತ್ತಿರ
ಬೆಳಗು,ಮುಳುಗು ವ್ಯತ್ಯಾಸವೇನಿಲ್ಲ
ದೃಷ್ಠಿ ಬಹಳ ದೂರ
ಬಗ್ಗಿ ಕುಗ್ಗಿ ಬಾಗಿಹೋಗಿದೆ ಶರೀರ

ಊರಲೂ ಹರಿಯದ
ದೇಹಕ್ಕೆ..
ಊರುಗೋಲೇ ಭಾರ !!